
ಅರಸೀಕೆರೆ: ನಗರದ ಹಾಸನ ರಸ್ತೆಯ ಎಡಭಾಗದ ಹಾಗೂ ಬಲಭಾಗದ ನಾಗರಿಕರು ಮಕರ ಸಂಕ್ರಾಂತಿ ಅಥವಾ ಪೊಂಗಲ್ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದರು.
ಬಲಭಾಗದ ಮುತ್ತುಮಾರಿಯಮ್ಮ ದೇವಸ್ಥಾನದಲ್ಲಿ ಅಮ್ಮನವರಿಗೆ ಮುಂಜಾನೆ ಅಭಿಷೇಕ, ಸಹಸ್ರ ಕುಂಕುಮಾರ್ಚನೆ ಸೇರಿದಂತೆ ಪುಷ್ಪಲಂಕಾರ ಮಾಡಲಾಯಿತು. ಇಲ್ಲಿನ ನಾಗರಿಕರು ಸಂಪ್ರದಾಯಿಕವಾಗಿ ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿ ಹಾಕಿ ಮನೆಗಳಲ್ಲಿ ತಮ್ಮ ಇಷ್ಠಾರ್ಥ ದೇವರ ಪೂಜೆ ಸಲ್ಲಿಸಿ ಭಕ್ತಿ ಭಾವ ಮೆರೆದರು.
ಹೆಚ್ಚಿನ ಭಕ್ತರು ಕುಟುಂಬಸ್ಥರೊಂದಿಗೆ ದೇವಿಗೆ ದೇವಾಲಯದ ಆವರಣದಲ್ಲಿಯೇ ಓಲೆ ಜೋಡಿಸಿ ಸುತ್ತ ಕಬ್ಬುಗಳನ್ನು ಇಟ್ಟು ಸಿಹಿ ಪೊಂಗಲ್ ತಯಾರಿಸಿದ್ದು ವಿಶೇಷವಾಗಿತ್ತು. ಜತೆಗೆ ಕಬ್ಬು, ಎಳ್ಳು ಬೆಲ್ಲವನ್ನು ನೈವೈದ್ಯ ಮಾಡಿದರು.
ಅರ್ಚಕ ಸುನೀಲ್ ನೇತೃತ್ವದಲ್ಲಿ ಅಮ್ಮನವರಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು. ಹಾಸನ ರಸ್ತೆಯ ಬಡಾವಣೆಗಳಲ್ಲಿ ವಿದ್ಯುತ್ ದೀಪಾಲಂಕಾರ ಹಾಗೂ ಕೇಸರಿ ಬಂಟಿಂಗ್ಸ್ ರಾರಾಜಿಸಿದವು.
ಮುತ್ತುಮಾರಿಯಮ್ಮ ದೇವಿ ದೇವಸ್ಥಾನದ ಮುಖ್ಯಸ್ಥರಾದ ಎಂ.ವೇಲುರಾಜ್, ಸತ್ಯಮೂರ್ತಿ, ಶ್ರೀಧರ್, ಬಿಜೆಪಿ ಮುಖಂಡ ಶಿವನ್‌ರಾಜ್, ವಿನೋದ್, ಪ್ರಶಾಂತ್, ವಿನಾಯಕ, ಮನು, ಗೌತಮ್, ಶೇಷನ್, ಕಿಶೋರ್ ಜೊಲ್ಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.