
ಚನ್ನರಾಯಪಟ್ಟಣ: ಪಟ್ಟಣದ ತಾಲ್ಲೂಕು ಕ್ರೀಡಾಂಗಣದ ಅಭಿವೃದ್ಧಿಗೆ ₹ 1 ಕೋಟಿ ಮಂಜೂರಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ತಾಲ್ಲೂಕು ಪತ್ರಕರ್ತರ ಸಂಘದಿಂದ ಭಾನುವಾರ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕ್ರಿಕೆಟ್ ಟೂರ್ನಿ ಉದ್ಘಾಟಿಸಿ ಮಾತನಾಡಿದರು.
‘ಕ್ರೀಡಾಂಗಣದಲ್ಲಿ ಅಗತ್ಯ ಕಾಮಗಾರಿಯನ್ನು ಇನ್ನೊಂದು ತಿಂಗಳಲ್ಲಿ ಕೈಗೊಳ್ಳಲಾಗುವುದು. ಈಗಾಲೇ ₹ 60 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಪುರುಷರ ಮತ್ತು ಮಹಿಳೆಯರ ಶೌಚಾಲಯವನ್ನು ಶೀಘ್ರ ಉದ್ಘಾಟಿಸಲಾಗುವುದು’ ಎಂದರು.
‘ಕೆಲಸದ ಒತ್ತಡ ನಿವಾರಣೆಗೆ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದ ಅವರು, ‘ತಾಲ್ಲೂಕಿನ ಪತ್ರಕರ್ತರಿಗೆ ನಿವೇಶನ ನೀಡಲು ಪಟ್ಟಣದಲ್ಲಿ ಎರಡು, ಮೂರು ಕಡೆ ಜಾಗ ಪರಿಶೀಲಿಸಿ, ಬಳಿಕ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
ಬಹುಮಾನ ವಿತರಿಸಿದ ವಿಧಾನಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ, ‘ವ್ಯಕಿತ್ವ ವಿಕಸನ, ಒತ್ತಡ ನಿವಾರಣೆ, ದೈಹಿಕ ಸಾಮರ್ಥ್ಯ ಹೆಚ್ಚಿಸುವಲ್ಲಿ ಕ್ರೀಡೆಗಳು ಸಹಕಾರಿ. ದೈನಂದಿನ ಜೀವನದಲ್ಲಿ ಕ್ರೀಡೆಗಳಿಗೆ ಒತ್ತು ನೀಡಬೇಕು’ ಎಂದು ತಿಳಿಸಿದರು.
ಸೆಸ್ಕ್ ತಂಡ ಪ್ರಥಮ ಮತ್ತು ಶಿಕ್ಷಣ ಇಲಾಖೆ ತಂಡ ದ್ವಿತೀಯ ಸ್ಥಾನ ಗಳಿಸಿತು. 11 ತಂಡಗಳು ಪಾಲ್ಗೊಂಡಿದ್ದವು.
ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ, ಡಿವೈಎಸ್‌ಪಿ ಕುಮಾರ್ ಎನ್., ಟಿಎಪಿಸಿಎಂಎಸ್ ಅಧ್ಯಕ್ಷ ಎಚ್.ಆರ್. ವೆಂಕಟೇಶ್, ಪತ್ರಕರ್ತರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಬಿ. ಮದನಗೌಡ, ಜಿಲ್ಲಾ ಸಂಘದ ಅಧ್ಯಕ್ಷ ಜೆ.ಆರ್. ಕೆಂಚೇಗೌಡ, ಸಂಘದ ಅಧ್ಯಕ್ಷ ಎಸ್.ಪಿ. ದಯಾನಂದ್, ಪತ್ರಕರ್ತರಾದ ಶ್ರೀನಿವಾಸ್ ಉಳ್ಳಾವಳ್ಳಿ, ರವಿನಾಲಕಗೂಡು, ಜಗದೀಶ್ ಚೌಡವಳ್ಳಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಲ್.ಪಿ. ಪ್ರಕಾಶ್‍ಗೌಡ, ಕಾಂಗ್ರೆಸ್ ಮುಖಂಡರಾದ ಎ.ಸಿ. ಆನಂದ ಕುಮಾರ್, ಸಿ.ಎಸ್. ಯುವರಾಜ್, ಸಿ.ಟಿ. ಅಶೋಕಕುಮಾರ್, ವಿನೋದ್, ಕಸಾಪ ತಾಲ್ಲೂಕು ಘಟಕದ ಎಚ್.ಎನ್. ಲೊಕೇಶ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಬಿ.ಎಲ್. ಅರುಣ್‍ಕುಮಾರ್, ಬಿಜೆಪಿ ಮುಖಂಡ ಗಿರೀಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.