ADVERTISEMENT

ಕೊಣನೂರು: ದೋಷ ನಿವಾರಣೆಗೆ ಲಿಂಗ ಪ್ರತಿಷ್ಠಾಪಿಸಿದ ಶ್ರೀರಾಮ

ದಕ್ಷಿಣದ ಕಾಶಿ ಎಂದೇ ಪ್ರಸಿದ್ಧವಾಗಿರುವ ತ್ರೇತಾಯುಗದ ವಾಸವಪುರಿ

ಬಿ.ಪಿ.ಗಂಗೇಶ್‌
Published 22 ಜನವರಿ 2024, 6:03 IST
Last Updated 22 ಜನವರಿ 2024, 6:03 IST
ವ್ಯಾಸಾಂಜನೇಯ ದೇವಾಲಯ
ವ್ಯಾಸಾಂಜನೇಯ ದೇವಾಲಯ   

ಕೊಣನೂರು: ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ರಾಮನಾಥಪುರ, ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದು. ನೂರಾರು ದೇವರ ಸಂಗಮವಾಗಿರುವ ಇಲ್ಲಿ, ನಿತ್ಯ ನೂರಾರು ಭಕ್ತರು ಬಂದು ಕಾವೇರಿ ನದಿಯಲ್ಲಿ ಮಿಂದು ಪುನೀತರಾಗುತ್ತಾರೆ.

ತ್ರೇತಾಯಗದಲ್ಲಿ ವಾಸವಪುರಿ ಎಂಬ ಹೆಸರಿದ್ದ ಈ ಕ್ಷೇತ್ರದಲ್ಲಿ ರಾಮೇಶ್ವರ, ಅಗಸ್ತ್ಯೇಶ್ವರ, ಪ್ರಸನ್ನ ಸುಬ್ರಹ್ಮಣ್ಯ, ಪಟ್ಟಾಭಿರಾಮ, ಲಕ್ಷ್ಮೀ ನರಸಿಂಹ ಸ್ವಾಮಿ ಸೇರಿದಂತೆ ನೂರಾರು ದೇವರ ಸನ್ನಿಧಿಯನ್ನು ಇಲ್ಲಿ ಕಾಣಬಹುದಾಗಿದೆ.

ರಾಮನಾಥಪುರಕ್ಕೂ ಶ್ರೀ ರಾಮನಿಗೂ ಸಂಬಂಧವಿದ್ದು, ಶ್ರೀರಾಮ ಇಲ್ಲಿಗೆ ಬಂದು ಪೂಜಿಸಿದ್ದ ಲಿಂಗವೇ ರಾಮೇಶ್ವರ ಎಂದು ಹೆಸರಾಯಿತು ಎಂಬ ಪ್ರತೀತಿ ಇದೆ.

ADVERTISEMENT

ಶ್ರೀರಾಮ ವನವಾಸ ಮುಗಿಸಿದ ನಂತರ ಸೀತಾ ಸಮೇತ ರಾಮನಾಥಪುರಕ್ಕೆ ಬಂದು ಇಲ್ಲಿನ ಕಾವೇರಿ ನದಿ ದಂಡೆಯಲ್ಲಿ ಈಶ್ವರ ಲಿಂಗವನ್ನು ಪೂಜಿಸಿದ್ದರು. ಅದೇ ಲಿಂಗವು ರಾಮೇಶ್ವರ ಎಂದು ಹೆಸರಾಗಿ ಈ ಸ್ಥಳಕ್ಕೆ ರಾಮನಾಥಪುರ ಎಂಬ ಹೆಸರು ಬಂದಿದೆ ಎಂಬ ಮಾತುಗಳಿವೆ.

ರಾಮನಾಥಪುರದಲ್ಲಿನ ಕಾವೇರಿ ಸ್ನಾನಘಟ್ಟದಲ್ಲಿ ಭಕ್ತರು ಪುಣ್ಯಸ್ನಾನ ಮಾಡುತ್ತಿರುವುದು

ರಾವಣವನನ್ನು ಸಂಹರಿಸಿದ ನಂತರ ಬ್ರಹ್ಮ ಹತ್ಯೆಯ ದೋಷ ಪರಿಹಾರಕ್ಕಾಗಿ ರಾಮನಾಥಪುರಕ್ಕೆ ಬಂದ ಸೀತಾರಾಮರು ಈಶ್ವರನಿಗೆ ಪೂಜೆ ಸಲ್ಲಿಸಿ, ನಂತರ ಯಷಿಮುನಿಗಳ ಸಲಹೆಯಂತೆ ಇಲ್ಲಿನ ಕಾವೇರಿ ನದಿಯಲ್ಲಿನ ಸ್ನಾನಘಟ್ಟದಲ್ಲಿರುವ ಗೋಗರ್ಭ ಶಿಲೆಯಲ್ಲಿ ಹಾಯ್ದರು. ಸೀತಾಮಾತೆಯು ಗೋಗರ್ಭ ಶಿಲೆಯನ್ನು ಹಾಯುವಾಗ ಆಕೆಯ ಕಿರೀಟವು ಶಿಲೆಗೆ ತಾಗಿದ ಹಿನ್ನೆಲೆಯಲ್ಲಿ ಈಗಲೂ ಗೋಗರ್ಭ ಶಿಲೆಯ ತಳಭಾಗದ ಮರಳು ವಿವಿಧ ಬಣ್ಣಗಳಿಂದ ಕೂಡಿದೆ ಎಂಬುದು ಇಲ್ಲಿನ ಐತಿಹ್ಯ.

ಋಷಿಮನಿಗಳು ಶ್ರೀರಾಮನನ್ನು ಇಲ್ಲಿಯೇ ಪಟ್ಟಾಭಿಷಕ್ತನಾಗಬೇಕು ಎಂದು ಒತ್ತಾಯಪಡಿಸಿದ ಹಿನ್ನೆಲೆಯಲ್ಲಿ ರಾಮನಾಥಪುರದಲ್ಲಿ ಶ್ರೀರಾಮ ಪಟ್ಟಾಭಿಷಕ್ತನಾದ ಎಂಬ ಪ್ರತೀತಿ ಇದೆ. ಇಲ್ಲಿನ ಪಟ್ಟಾಭಿರಾಮ ದೇವಾಲಯದಲ್ಲಿ ಸೀತಾಸಮೇತರಾಮ, ಲಕ್ಷ್ಮಣ, ಭರತ, ಶತ್ರುಘ್ನ, ಹನುಮಂತರು ಒಟ್ಟಿಗೆ ಇರುವ ಸುಂದರ ಮೂರ್ತಿ ಇರುವುದು ಇದಕ್ಕೆ ಪುಷ್ಟಿ ನೀಡುತ್ತದೆ.

ರಾಮೇಶ್ವರ ದೇವಾಲಯದ ಪ್ರಾಂಗಣದಲ್ಲಿ ಸಾಲು ಈಶ್ವರ ಲಿಂಗಗಳ ಮುಂದಿರುವ ನಂದಿ ವಿಗ್ರಹಗಳು

ಇಲ್ಲಿ ಸೀತಾರಾಮರು ಪೂಜಿಸಿದ ಶಿವನ ವಿಗ್ರವು ರಾಮೇಶ್ವರ ಎಂದು ಪ್ರಸಿದ್ದಿ ಹೊಂದಿದೆ. ಇಲ್ಲಿ ಬೃಹತ್ ದೇವಾಲಯವು ಗಂಗ ಅರಸರ ಕಾಲದಲ್ಲಿ ಪ್ರಾರಂಭವಾಗಿ, ಹೊಯ್ಸಳರ ಕಾಲದಲ್ಲಿ 850 ವರ್ಷಗಳ ಹಿಂದೆಯೇ ಪೂರ್ಣಗೊಂಡಿದೆ. ಚತುರ್ಯುಗ ಮೂರ್ತಿ ರಾಮೇಶ್ವರಸ್ವಾಮಿ ದೇವಾಲಯ ಎಂದೇ ಪ್ರಖ್ಯಾತಿ ಪಡೆದಿದೆ. ನದಿಯ ಆಚೆಯ ದಡದಲ್ಲಿ ಲಕ್ಷ್ಮಣೇಶ್ವರ ದೇವಾಲಯವಿದ್ದು, ಇಲ್ಲಿ ಲಕ್ಷ್ಮಣ ಮತ್ತು ಸೌಮಿತ್ರೆಯರ ಸುಂದರ ವಿಗ್ರಹವಿದೆ.

ರಾಮೇಶ್ವರ ದೇವಾಲಯ

ಈ ದೇವಾಲಯದ ಗರ್ಭಗುಡಿಯಲ್ಲಿ ರಾಮೇಶ್ವರ ಲಿಂಗವಿದ್ದರೆ, ದೇವಾಲಯದ ಪ್ರಾಂಗಣದ ಸುತ್ತ 36 ಶಿವಲಿಂಗಗಳಿದ್ದು, ಪ್ರತಿ ಲಿಂಗದ ಮುಂದೆಯು ಬಸವಮೂರ್ತಿಗಳು ಲಿಂಗಕ್ಕೆ ಎದುರಾಗಿವೆ. ರಾಮೇಶ್ವರ ದೇವಾಲಯದ ಪಕ್ಕದಲ್ಲೇ ಇರುವ ಕಾವೇರಿ ನದಿಯಲ್ಲಿ ವಹ್ನಿ ಪುಷ್ಕರಣೆಯಿದ್ದು, ಇಲ್ಲಿರುವ ಸಾವಿರಾರು ವಿವಿಧ ವರ್ಣದ ಮೀನುಗಳನ್ನು ದೇವರ ಮೀನುಗಳು ಎಂದು ನಂಬಲಾಗಿದೆ. ಮೈಸೂರಿನ ಅರಸರು ಇಲ್ಲಿನ ಬೃಹತ್ ಗಾತ್ರದ ಮೀನಿಗೆ ಉಂಗುರ ತೊಡಿಸಿ ಪೂಜಿಸಿದ್ದರು ಎಂಬ ಮಾತಿದೆ.

ರಾಮೇಶ್ವರ ದೇವಾಲಯದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಶಂಭುನಾಥ ಸ್ವಾಮೀಜಿ ದರ್ಶನ ಪಡೆದರು. (ಸಂಗ್ರಹ ಚಿತ್ರ)
ದೇಗುಲಗಳ ಸಂಕೀರ್ಣ
ದಕ್ಷಿಣಕಾಶಿ ಎಂದೆ ಪ್ರಸಿದ್ಧಿ ಪಡೆದಿರುವ ರಾಮನಾಥಪುರದಲ್ಲಿ ಪ್ರಮುಖವಾಗಿ ರಾಮೇಶ್ವರ ಸುಬ್ರಹ್ಮಣ್ಯೇಶ್ವರ ಲಕ್ಷ್ಮಣೇಶ್ವರ ವರದಾನ ಬಸವೇಶ್ವರ ಉತ್ತರಾದಿ ಮಠ ವ್ಯಾಸಾಂಜನೇಯ ಅಗಸ್ತೇಶ್ವರ ಲಕ್ಷ್ಮೀ ನರಸಿಂಹಸ್ವಾಮಿ ಪಟ್ಟಾಭಿರಾಮ ಸೇರಿದಂತೆ ಅನೇಕ ದೇವಾಲಯಗಳಿವೆ. ಪ್ರತಿವರ್ಷ ಡಿಸೆಂಬರ್‌ನಲ್ಲಿ ಇಲ್ಲಿನ ಪ್ರಸನ್ನ ಸುಬ್ರಹ್ಮಣ್ಯೇಶ್ವರ ಸ್ವಾಮಿಗೆ ಚಂಪಾಷಷ್ಠಿ ಮತ್ತು ತುಳುಷಷ್ಠಿ ಉಭಯ ರಥೋತ್ಸವಗಳು ಜರುಗುತ್ತಿದ್ದು ರಾಜ್ಯದ ವಿವಿಧೆಡೆಗಳಿಂದ ಸಹಸ್ತ್ರಾರು ಭಕ್ತರು ಭೇಟಿ ನೀಡಿ ಕಾವೇರಿ ಪುಣ್ಯಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಾರೆ. ವರ್ಷದ ಎಲ್ಲ ಕಾಲದಲ್ಲೂ ನಿತ್ಯ ರಾಮನಾಥಪುರಕ್ಕೆ ನೂರಾರು ಭಕ್ತರು ಭೇಟಿ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.