ಹಾಸನ: ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿದ್ಯಾರ್ಥಿಗಳು ಹಾಗೂ ಶಾಲೆಗಳ ಮುಖ್ಯಸ್ಥರನ್ನು ಶಾಸಕ ಸ್ವರೂಪ್ ಪ್ರಕಾಶ್ ಬುಧವಾರ ನಗರದ ಸಾಲಗಾಮೆ ರಸ್ತೆಯ ಸೆಂಟ್ ಜೋಸೆಫ್ ಶಾಲಾ ಸಭಾಂಗಣದಲ್ಲಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಾಸನ ತಾಲ್ಲೂಕಿನ ಉಲ್ಲಾಸ್ ಪಟೇಲ್ ಹಾಗೂ ಕಿಶನ್, ಎಸ್ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಗಳಿಸುವ ಮೂಲಕ ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಅವರಂತೆ ಎಲ್ಲ ವಿದ್ಯಾರ್ಥಿಗಳು ವಿದ್ಯಾಭ್ಯಾಸದತ್ತ ಹೆಚ್ಚಿನ ಗಮನ ಕೊಡಬೇಕು ಎಂದು ಸಲಹೆ ನೀಡಿದರು.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮಹತ್ವದ ಘಟ್ಟವಾಗಿದೆ. ಪ್ರಾಥಮಿಕ ಹಂತದಲ್ಲಿ ಒಳ್ಳೆಯ ಶಿಕ್ಷಣ ಪಡೆದಲ್ಲಿ, ಅವರ ಭವಿಷ್ಯ ಉಜ್ವಲವಾಗಿರುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಯೋಚಿಸಬೇಕು. ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ಚೆನ್ನಾಗಿ ಕಲಿತು ಕುಟುಂಬಕ್ಕೆ, ಜಿಲ್ಲೆಗೆ, ರಾಜ್ಯಕ್ಕೆ ಒಳ್ಳೆಯ ಹೆಸರು ತರುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಜನರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ಸರ್ಕಾರಿ ಹಾಗೂ ಖಾಸಗಿ ಎಲ್ಲ ಶಾಲೆಗಳಲ್ಲಿಯೂ ಗುಣಮಟ್ಟದ ಶಿಕ್ಷಕರು ಕೆಲಸ ಮಾಡುತ್ತಿದ್ದು, ಅದರ ಪ್ರತಿಫಲವೇ ಇಂದು ಜಿಲ್ಲೆಯ ಹಲವು ವಿದ್ಯಾರ್ಥಿಗಳು ಎಸ್‌ಎಸ್ಎಲ್‌ಸಿಯಲ್ಲಿ ಹೆಚ್ಚು ಅಂಕ ಗಳಿಸಲು ಸಾಧ್ಯವಾಗಿದೆ ಎಂದರು.
ಖಾಸಗಿ ಶಾಲೆಗಳಲ್ಲಿ ಕೂಡ ಹಲವು ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಸ್ಪರ್ಧಾತ್ಮಕ ಯುಗದಲ್ಲಿ ಖಾಸಗಿ ಶಾಲೆಗಳನ್ನು ನಡೆಸುವುದು ಅತ್ಯಂತ ಕ್ಲಿಷ್ಟಕರವಾಗಿದೆ. ಇದರ ಜೊತೆಗೆ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಕರು ಕೂಡ ಬಹಳ ಒತ್ತಡದಲ್ಲಿ ಶ್ರಮ ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರದಲ್ಲಿ ಶಿಕ್ಷಕರ ಪಾತ್ರ ಅಪಾರವಾಗಿದೆ. ಎಲ್ಲಾ ಶಿಕ್ಷಕರಿಗೂ ಈ ಮೂಲಕ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಮುಂದಿನ ದಿನಗಳಲ್ಲಿ ಇಡೀ ಜಿಲ್ಲೆಯ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಹಾಗೂ ಸಾಧಕರನ್ನು ಸನ್ಮಾನಿಸುವ ಬೃಹತ್ ಕಾರ್ಯಕ್ರಮವನ್ನು ನಡೆಸುವ ಮೂಲಕ ಅವರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಶಿಕ್ಷಣ ಇಲಾಖೆಯ ಎಚ್.ಟಿ. ಗೀತಾ, ಆನಂದ್, ಫಾದರ್ ಲಿಯೋ, ಬಸವರಾಜು, ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಶಿವರಾಮೇಗೌಡ, ಚಂದ್ರಶೇಖರ್, ನೋಡಲ್ ಅಧಿಕಾರಿ ಮಲ್ಲಮ್ಮ ಮುಂತಾದವರು ಇದ್ದರು.
ಫಲಾನುಭವಿಗಳಿಗೆ ಉಪಕರಣ ವಿತರಣೆ
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕೈಗಾರಿಕಾ ವಿಭಾಗದ ವತಿಯಿಂದ ನಗರದ ಕೆಐಎಡಿಬಿ ಕಚೇರಿಯಲ್ಲಿ ಸ್ವಾವಲಂಬಿ ಬದುಕಿಗೆ ನೆರವಾಗುವ ನಿಟ್ಟಿನಲ್ಲಿ ಫಲಾನುಭವಿಗಳಿಗೆ ವಿವಿಧ ಉಪಕರಣಗಳನ್ನು ಶಾಸಕ ಸ್ವರೂಪ್ ಪ್ರಕಾಶ್ ವಿತರಿಸಿದರು.
ಬಳಿಕ ಮಾತನಾಡಿದ ಅವರು ಕೈಗಾರಿಕಾ ಪ್ರದೇಶಕ್ಕಾಗಿ ಜಮೀನನ್ನು ಕಳೆದುಕೊಂಡಿರುವ ಈ ಭಾಗದ ಹಲವು ರೈತರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಮಹಿಳೆಯರು ಕೂಡ ಇಂತಹ ಸಮಸ್ಯೆ ಎದುರಿಸುತ್ತಿದ್ದು ಅದನ್ನು ನಿವಾರಿಸುವ ನಿಟ್ಟಿನಲ್ಲಿ ಮಹಿಳೆಯರ ಸ್ವಯಂ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಹೊಲಿಗೆ ಯಂತ್ರ ವಿತರಿಸಲಾಗುತ್ತಿದೆ ಎಂದರು.
ಮಹಿಳೆಯರ ಸ್ವಾವಲಂಬಿ ಬದುಕಿಗೆ ಸರ್ಕಾರಗಳು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿವೆ. ಗ್ರಾಮ ಪಂಚಾಯಿತಿ ಹಂತದಲ್ಲಿ ಕೂಡ ಸ್ವಯಂ ಉದ್ಯೋಗಿನಿ ಜೊತೆಗೆ ವಿವಿಧ ಇಲಾಖೆಗಳಲ್ಲಿ ಮಹಿಳೆಯರಿಗೆ ಕಾರ್ಯಕ್ರಮಗಳಿದ್ದು ಅವುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿಯಲ್ಲಿ ಮಹಿಳೆಯರ ಸ್ವಾವಲಂಬಿ ಬದುಕು ಕಟ್ಟಿಕೊಡಲು ಗಾರೆ ಮರಕೆಲಸದ ಉಪಕರಣಗಳು ವಿದ್ಯುತ್ ಉಪಕರಣಗಳು ಸೇರಿದಂತೆ ವಿವಿಧ ಉಪಕರಣಗಳು ಲಭ್ಯವಿದೆ. ತಮ್ಮ ಇಚ್ಛೆಗೆ ಅನುಗುಣವಾಗಿ ಇಷ್ಟವಾದ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಳ್ಳಲು ಬೇಕಾದ ಸೌಲಭ್ಯಗಳನ್ನು ಪಡೆಯಬಹುದು ಎಂದು ಮಾಹಿತಿ ನೀಡಿದರು. ಈ ವೇಳೆ ಕೈಗಾರಿಕೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.