ಹಾಸನ: ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆ 6ನೇ ಸ್ಥಾನ ಪಡೆದಿದ್ದು, ಶೇ 86.28 ಫಲಿತಾಂಶ ದಾಖಲಿಸಿದೆ. ಜಿಲ್ಲೆಯಲ್ಲಿ ಒಟ್ಟು 19,665 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 7,760 ಬಾಲಕರು, 9117 ಬಾಲಕಿಯರು ಉತ್ತೀರ್ಣರಾಗಿದ್ದಾರೆ.
ಎರಡು ವರ್ಷಗಳ ಹಿಂದೆ ಮೊದಲ ಸ್ಥಾನ ಪಡೆದಿದ್ದ ಹಾಸನ ಜಿಲ್ಲೆ, ಕಳೆದ ಬಾರಿ ಮೂರನೇ ಸ್ಥಾನ ಪಡೆದಿತ್ತು. ಈ ಬಾರಿ ಆರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿದೆ. ಜೊತೆಗೆ ಫಲಿತಾಂಶದ ಪ್ರಮಾಣ ಕಳೆದ ಬಾರಿಗಿಂತ ಶೇ 10 ರಷ್ಟು ಕುಸಿದಿದೆ.
ಜಿಲ್ಲೆಯ ಮಟ್ಟಿಗೆ ಸಕಲೇಶಪುರ ಶೇ 94.67 ಫಲಿತಾಂಶದ ದಾಖಲಿಸುವ ಮೂಲಕ ಪ್ರಥಮ ಸ್ಥಾನದಲ್ಲಿದ್ದು, ಅರಕಲಗೂಡು ಶೇ 79.69 ಫಲಿತಾಂಶ ದಾಖಲಿಸುವ ಮೂಲಕ ಕೊನೆಯ ಸ್ಥಾನವನ್ನು ಪಡೆದಿದೆ.
ಉಳಿದಂತೆ ಹಾಸನ ತಾಲ್ಲೂಕು ಶೇ 90.57, ಬೇಲೂರು ಶೇ 86.17, ಆಲೂರು ಶೇ 85.68, ಅರಸೀಕೆರೆ ಶೇ 85.21, ಚನ್ನರಾಯಪಟ್ಟಣ ಶೇ 82.66, ಹೊಳೆನರಸೀಪುರ ಶೇ 82.59 ರಷ್ಟು ಫಲಿತಾಂಶ ದಾಖಲಾಗಿದೆ.
ಜಿಲ್ಲೆಯಲ್ಲಿ ಈ ಬಾರಿ ಸರಾಸರಿ ಫಲಿತಾಂಶದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚು ತೇರ್ಗಡೆ ಹೊಂದಿದ್ದುಮ ಗ್ರಾಮೀಣ ಪ್ರದೇಶದ 11,089 ವಿದ್ಯಾರ್ಥಿಗಳು ತೆರ್ಗಡೆಯಾದರೆ, ನಗರ ಪ್ರದೇಶದ 5,788 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಬೇಲೂರು ತಾಲ್ಲೂಕಿನ ಸರ್ವೋದಯ ಪ್ರೌಢಶಾಲೆಯ ಅನನ್ಯ ಗೌಡ ವಿ. ಹಾಗೂ ಹಾಸನ ಯುನೈಟೆಡ್ ಪ್ರೌಢಶಾಲೆಯ ಎಚ್.ಜಿ. ನಿಸರ್ಗ 625ಕ್ಕೆ 623 ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಡಿಡಿಪಿಐ ಜವರೇಗೌಡ ತಿಳಿಸಿದ್ದಾರೆ.
ಎಸ್‌ಎಸ್‌ಎಲ್‌ಸಿ ಫಲಿತಾಂಶದ ವಿವರ
ತಾಲ್ಲೂಕು; ಹಾಜರಾದವರು; ಉತ್ತೀರ್ಣ; ಶೇ.ವಾರು
ಸಕಲೇಶಪುರ;1203;1,139;94.67
ಹಾಸನ;4540;4112;90.57
ಬೇಲೂರು;2003;1726;86.17
ಆಲೂರು;992;850;85.68
ಅರಸೀಕೆರೆ;3442;2933;85.21
ಚನ್ನರಾಯಪಟ್ಟಣ;2902;2399;82.66
ಹೊಳೆನರಸೀಪುರ;2258;1865;82.59
ಅರಕಲಗೂಡು;2325;1853;79.69
ಒಟ್ಟು;19665;16877;86.28
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.