ADVERTISEMENT

ಕಲ್ಲು ಗಣಿಗಾರಿಕೆಗೆ ವಿರೋಧಿಸಿ ಚಿಗಳ್ಳಿ ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 7:00 IST
Last Updated 29 ಜನವರಿ 2026, 7:00 IST
ಕಲ್ಲುಗಣಿಗಾರಿಕೆ ವಿರೋಧಿಸಿ ಚಿಗಳ್ಳಿ ಗ್ರಾಮಸ್ಥರು ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು 
ಕಲ್ಲುಗಣಿಗಾರಿಕೆ ವಿರೋಧಿಸಿ ಚಿಗಳ್ಳಿ ಗ್ರಾಮಸ್ಥರು ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು    

ಹಾಸನ: ತಾಲ್ಲೂಕಿನ ಶಾಂತಿಗ್ರಾಮ ಹೋಬಳಿಯ ಚಿಗಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಕೂಡಲೇ ರದ್ದುಪಡಿಸಬೇಕು ಎಂದು ಆಗ್ರಹಿಸಿ ಚಿಗಳ್ಳಿ ಗ್ರಾಮಸ್ಥರು, ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಸಾಮಾಜಿಕ ಕಾರ್ಯಕರ್ತ ಶಿವಕುಮಾರ್ ಮಾತನಾಡಿ, ಗ್ರಾಮದಲ್ಲಿನ ರೈತರು ಹಲವು ವರ್ಷಗಳಿಂದ ಅಲ್ಪ ಜಮೀನಿನಲ್ಲಿ ಉಳುಮೆ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಾಜಕೀಯ ಪ್ರಭಾವ ಹೊಂದಿರುವ ಕೆಲವರು ಇಲ್ಲಿ ಕಲ್ಲುಗಣಿಗಾರಿಕೆ ನಡೆಸಲು ಮುಂದಾಗಿದ್ದಾರೆ ಎಂದು ದೂರಿದರು.

ಗ್ರಾಮದ ಜಮೀನನ್ನು ಮಂಜೂರು ಮಾಡುವಂತೆ ರೈತರು ಮನವಿ ಸಲ್ಲಿಸಿದರೆ, ಎಚ್‌ಆರ್‌ಪಿ, ಮೀಸಲು ಭೂಮಿ ಎಂದು ಅಧಿಕಾರಿಗಳು ಸಬೂಬು ಹೇಳುತ್ತಾರೆ. ಆದರೆ ಉಪವಿಭಾಗಾಧಿಕಾರಿ, ತಾಲ್ಲೂಕು ಅಧಿಕಾರಿಗಳು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸಂಕ್ರಾಂತಿ ದಿನವಾದ ಜ.15 ರಂದು ರಜೆಯ ದಿನದಲ್ಲೂ ಗ್ರಾಮಸ್ಥರಿಗೆ ಯಾವುದೇ ಮಾಹಿತಿ ನೀಡದೇ ಕಲ್ಲು ಗಣಿಗಾರಿಕೆ ಅರ್ಜಿದಾರರೊಂದಿಗೆ ಗೋಪ್ಯವಾಗಿ ಸ್ಥಳ ಮಹಾಜರ್ ನಡೆಸಿರುವುದು ಗ್ರಾಮಸ್ಥರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.

ADVERTISEMENT

ಜಿಲ್ಲಾಡಳಿತ ನಮ್ಮ ಮನವಿಗೆ ಸ್ಪಂದಿಸಿ ಕಲ್ಲುಗಣಿಗಾರಿಕೆ ಹಾಗೂ ಕ್ರಷರ್‌ಗಳಿಗೆ ನೀಡಿರುವ ಅನುಮತಿಗಳನ್ನು ತಕ್ಷಣವೇ ರದ್ದುಪಡಿಸಬೇಕು. ವರ್ಷಗಳಿಂದ ರೈತರು ಉಳುಮೆ ಮಾಡುತ್ತಿರುವ ಜಮೀನನ್ನು ಅವರಿಗೇ ಮಂಜೂರು ಮಾಡಿಕೊಡಬೇಕು. ಈಗಾಗಲೇ ಮಂಜೂರಾಗಿರುವ ಜಮೀನನ್ನು ದುರಸ್ತಿ ಮಾಡಿ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿದರು.

ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಗ್ರಾಮಸ್ಥರಾದ ಮಂಜೇಗೌಡ, ಸುನೀಲ್, ವರ್ಧರಾಜ್, ಗೌಡಪ್ಪ, ರಾಮಲಿಂಗೇಗೌಡ, ಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.