ADVERTISEMENT

ಅಕ್ರಮ ಗಣಿಗಾರಿಕೆ ತಡೆದು ರಾಜಸ್ವ ಹೆಚ್ಚಿಸಿ: ಸಚಿವ ಹಾಲಪ್ಪ ಆಚಾರ್‌

ನಿಯಮಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲು ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 6:06 IST
Last Updated 9 ಜುಲೈ 2022, 6:06 IST
ಹಾಸನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸಚಿವ ಹಾಲಪ್ಪ ಆಚಾರ್‌, ಪ್ರಗತಿ ಪರಿಶೀಲನೆ ನಡೆಸಿದರು.
ಹಾಸನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸಚಿವ ಹಾಲಪ್ಪ ಆಚಾರ್‌, ಪ್ರಗತಿ ಪರಿಶೀಲನೆ ನಡೆಸಿದರು.   

ಹಾಸನ: ಕಲ್ಲು ನಿಕ್ಷೇಪ ಹಾಗೂ ಮರಳು ಗಣಿಗಾರಿಕೆ ನೀತಿಗಳಲ್ಲಿ ಬದಲಾವಣೆ ತರಲಾಗಿದ್ದು, ಅವುಗಳನ್ನು ನಿಯಮಾನುಸಾರ ಅನುಷ್ಠಾನಕ್ಕೆ ತರುವ ಮೂಲಕ ರಾಜಸ್ವ ಹೆಚ್ಚಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದು ಎಂದು ಗಣಿ, ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಆಯಾ ತಿಂಗಳೇ ಬಾಕಿ ಕಡತ ವಿಲೇವಾರಿ ಮಾಡಬೇಕು. ಅನಧಿಕೃತ ಗಣಿಗಳ ಮೇಲೆ ನಿಗಾ ವಹಿಸಿ ಅಕ್ರಮ ತಡೆಯಬೇಕು ಎಂದರು.

ಶಾಸಕ ಪ್ರೀತಂ ಜೆ. ಗೌಡ ಮಾತನಾಡಿ, ಸಭೆಗೆ ಪ್ರತಿ ತಿಂಗಳಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್‌ ಸಭೆ ನಡೆಸಬೇಕು. ಅದಕ್ಕೆ ನಿರ್ದಿಷ್ಟ ದಿನಾಂಕ ನಿಗದಿಪಡಿಸಿ ಸರ್ಕಾರದಿಂದಲೇ ಆದೇಶ ಹೊರಡಿಸಬೇಕು ಎಂದರು.

ADVERTISEMENT

ಶಾಸಕರಾದ ಪ್ರೀತಂ ಜೆ. ಗೌಡ, ಎ.ಟಿ.ರಾಮಸ್ವಾಮಿ, ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, 15 ವರ್ಷಗಳಿಂದ ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಕ್ಕೆ ಹೊಸದಾಗಿ ನಿರಾಕ್ಷೇಪಣಾ ಪತ್ರ ಕೇಳಲಾಗುತ್ತಿದೆ. ಇದರಿಂದ ಹೊಸ ಗೊಂದಲ ಸೃಷ್ಟಿಯಾಗುತ್ತಿದೆ. ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಹಿಂದಿನ ದಾಖಲೆಗಳ ಆಧಾರದ ಮೇಲೆ ನವೀಕರಣ ಮಾಡಬೇಕು ಎಂದು ಸಲಹೆ ನೀಡಿದರು.

ಅರಕಲಗೂಡು ತಾಲ್ಲೂಕಿನಲ್ಲಿ 2014 ರಲ್ಲಿ ರೈತರ ಜಮೀನಿನಲ್ಲಿ ವಶಪಡಿಸಿಕೊಂಡ ಮರಳು ಹರಾಜು ಮಾಡಿ ಸರ್ಕಾರಕ್ಕೆ ಜಮೆ ಮಾಡಬೇಕಿತ್ತು. ಲೋಕೋಪಯೋಗಿ ಇಲಾಖೆಯವರು ಮರಳನ್ನು ವಿಲೇವಾರಿ ಮಾಡಿದ್ದಾರೆ. ಹಣ ಕಟ್ಟಿಲ್ಲ. ಆದರೆ ರೈತರಿಂದ ದಂಡ ವಸೂಲಿ ಮಾಡಲು ಮುಂದಾಗಿರುವುದು ಸರಿಯಲ್ಲ. ಈ ಬಗ್ಗೆ ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿದೆ ಎಂದು ಎ.ಟಿ ರಾಮಸ್ವಾಮಿ ಹೇಳಿದರು.

ರೈತರ ಆಸ್ತಿಯಲ್ಲಿ ಸರ್ಕಾರದವರು ಎಂದು ನಮೂದಿಸಿರುವುದು ತಪ್ಪು. ಇದನ್ನು ಬದಲಾವಣೆ ಮಾಡಬೇಕು ಎಂದು ಸಚಿವ ಹಾಲಪ್ಪ ಆಚಾರ್ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಹೇಳಿದರು.

ಶಾಸಕರಾದ ಎಚ್ ಡಿ ರೇವಣ್ಣ ಹಾಗೂ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ರಾಜ್ಯದಲ್ಲಿ ರಾಜಸ್ವ ಸಂಗ್ರಹಣೆ ಇನ್ನಷ್ಟು ಹೆಚ್ಚಿಸಬೇಕು. ಅಕ್ರಮಗಳನ್ನು ನಿಯಂತ್ರಿಸಿ ರಾಜಧನ ರಾಜಮಾರ್ಗದಲ್ಲಿ ಪಡೆಯಿರಿ ಎಂದರು.

ಎಚ್.ಡಿ. ರೇವಣ್ಣ ಮಾತನಾಡಿ, ನಮ್ಮ ಜಿಲ್ಲೆಯಲ್ಲೂ ನಿಕ್ಷೇಪಗಳ ಡ್ರೋನ್‌ ಸರ್ವೆ ಮಾಡಿ. ಗಣಿಗಾರಿಕೆ ನಿಗದಿತ ಜಾಗದಲ್ಲಿ ನಿಗದಿತ ಪ್ರದೇಶದಲ್ಲಿ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಿ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಮುಂದಿನ 3 ತಿಂಗಳೊಳಗೆ ಬೇಸ್ ಸರ್ವೆ ಮಾಡಲಾಗುವುದು ಎಂದರು.

ಇದೇ ವೇಳೆ ಶಾಸಕರು, ಜಿಲ್ಲೆಯಲ್ಲಿ ಸ್ವೀಕರಿಸಿದ ರಾಜಧನದಲ್ಲಿ ಕ್ಷೇತ್ರದ ಅಭಿವದ್ದಿ ಕಾಮಗಾರಿಗಳಿಗೆ ಹಣ ನೀಡಿ ಎಂದರು. ಇದಕ್ಕೆ ಉತ್ತರಿಸಿದ ಸಚಿವರು, ಜಿಲ್ಲಾ ಖನಿಜ ನಿಧಿ ಸದ್ಬಳಕೆ ಬಗ್ಗೆ ಜಿಲ್ಲಾ ಸಮಿತಿಯಲ್ಲಿ ತೀರ್ಮಾನ ಮಾಡಿ ಬಳಸಿ ಎಂದರು.

ಜಿಲ್ಲೆಯಲ್ಲಿ ಈವರೆಗೆ ₹17.18.ಕೋಟಿ ಜಿಲ್ಲಾ ಖನಿಜ ನಿಧಿಗೆ ಸಂಗ್ರಹವಾಗಿದ್ದು, ₹ 2.5 ಕೋಟಿ ಉಳಿದಿದೆ ಎಂದು ಹಿರಿಯ ಭೂ ವಿಜ್ಞಾನಿ ನಾಗರಾಜ್ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಾಂತರಾಜ್, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಅಧಿಕಾರಿಗಳು ಹಾಜರಿದ್ದರು.

‘ಗರ್ಭಿಣಿ, ಬಾಣಂತಿಯರ ಮನೆಗೆ ಆಹಾರ’
ಗರ್ಭಿಣಿಯರು, ಬಾಣಂತಿಯರಿಗೆ ಮನೆಗಳಿಗೆ ಆಹಾರ ನೀಡುತ್ತಿದ್ದ ಯೋಜನೆ ನಿಲ್ಲಿಸಲಾಗಿದೆ. ಮಳೆಯಿಂದ ಅಂಗನವಾಡಿಗೆ ಹೋಗಿ ಆಹಾರ ಸ್ವೀಕರಿಸುವುದು ಕಷ್ಟವಾಗಿದೆ. ಹಾಗಾಗಿ ಹಳೆಯ ವ್ಯವಸ್ಥೆಯನ್ನು ಮುಂದುವರಿಸಿ ಎಂದು ಶಾಸಕ ಎ.ಟಿ.ರಾಮಸ್ವಾಮಿ ಮನವಿ ಮಾಡಿದರು.

ಹಾಸನ ಸೇರಿದಂತೆ ಮಲೆನಾಡು, ಕರಾವಳಿಯ ಒಟ್ಟು ಐದು ಜಿಲ್ಲೆಗಳಲ್ಲಿ ಮನೆಗಳಿಗೆ ಆಹಾರ ಪೂರೈಕೆ ಮಾಡಲಾಗುವುದು ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.

ಅಂಗನವಾಡಿ ಕಾರ್ಯಕರ್ತೆಯರಿಗೆ 10 ವರ್ಷಗಳಿಂದ ತರಬೇತಿ ನೀಡಿಲ್ಲ. ಈಗಲಾದರೂ ವ್ಯವಸ್ಥೆ ಮಾಡಿ. ಅನುಕಂಪದ ಆಧಾರದ ಮೇಲೆ ಕೆಲಸ ಕೊಡಿ ಎಂದು ಶಾಸಕರು ಮನವಿ ಮಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ರೇಜು, ಅಂಗನವಾಡಿ ಶಿಕ್ಷಕರ ಬಾಕಿ ಹಣ ಮಾಹಿತಿ ಪಡೆದರು. ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ವೇತನ ಬಟವಾಡೆ ವಿಳಂಬ ಆಗದಂತೆ ಗಮನ ಹರಿಸಬೇಕು ಖಜಾನೆ ಅಧಿಕಾರಿಗಳು ಸ್ಪಂದಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.