ADVERTISEMENT

ಡ್ರಗ್ಸ್‌ ಮುಕ್ತ ಜಿಲ್ಲೆಗೆ ಕಟ್ಟುನಿಟ್ಟಿನ ಕ್ರಮ:ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪತ್ರಕರ್ತರ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಎಸ್ಪಿ ಶುಭನ್ವಿತಾ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 8:04 IST
Last Updated 30 ಜನವರಿ 2026, 8:04 IST
ಶುಭನ್ವಿತಾ
ಶುಭನ್ವಿತಾ   

ಹಾಸನ: ಜಿಲ್ಲೆಯನ್ನು ಸಂಪೂರ್ಣವಾಗಿ ಡ್ರಗ್ಸ್‌ ಮುಕ್ತಗೊಳಿಸುವುದು ಪೊಲೀಸ್‌ ಇಲಾಖೆ ಪ್ರಮುಖ ಆದ್ಯತೆಯಾಗಿದ್ದು, ಡ್ರಗ್ಸ್‌ ಪೆಡ್ಲರ್‌ಗಳು ಹಾಗೂ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿರುವವರ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶುಭನ್ವಿತಾ ಹೇಳಿದರು.

ನಗರದ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಹಾಗೂ ಪತ್ರಕರ್ತರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾದವರಿಗೆ ಪುನರ್ವಸತಿ ಕೇಂದ್ರಗಳಲ್ಲಿ ಚಿಕಿತ್ಸೆ ಮತ್ತು ಪುನಶ್ಚೇತನ ಒದಗಿಸುವ ಚಿಂತನೆ ಇದೆ. ಡ್ರಗ್ಸ್‌ ಹಾವಳಿ ನಿಯಂತ್ರಣಕ್ಕಾಗಿ ಶಾಲೆ ಮತ್ತು ಕಾಲೇಜುಗಳಲ್ಲಿ ದೂರು ಪೆಟ್ಟಿಗೆಗಳನ್ನು ಅಳವಡಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಶಿಕ್ಷಕರು ಮತ್ತು ಪೋಷಕರಿಗೆ ಜಾಗೃತಿ ನೀಡುವ ಮೂಲಕ ಜಿಲ್ಲೆಯನ್ನು ಡ್ರಗ್ಸ್‌ ಮುಕ್ತಗೊಳಿಸಲು ಎಲ್ಲ ರೀತಿಯ ಕ್ರಮ ಜಾರಿಗೆ ತರಲಾಗುವುದು ಎಂದು ಹೇಳಿದರು.

ADVERTISEMENT

ವಿಧವೆಯರು ಹಾಗೂ ಆಸರೆ ಇಲ್ಲದ ಮಹಿಳೆಯರ ಸಬಲೀಕರಣಕ್ಕಾಗಿ ದೊಡ್ಡ ಕೈಗಾರಿಕೆಗಳು ಮತ್ತು ಉದ್ಯಮಗಳಿಂದ ಲಭ್ಯವಾಗುವ ಸಿಎಸ್ಆರ್‌ ನಿಧಿಯನ್ನು ಬಳಸಿಕೊಳ್ಳಲಾಗುತ್ತಿದೆ. ಈ ಮೂಲಕ ಟೈಲರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಫೆ. 1ರಿಂದ ಅಪಘಾತ ತಡೆ ಅಭಿಯಾನ: ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಫೆಬ್ರುವರಿ 1ರಿಂದ ಅಪಘಾತ ಸಂಭವಿಸುವ ಬ್ಲಾಕ್‌ ಸ್ಪಾಟ್‌ಗಳನ್ನು ಗುರುತಿಸುವಂತೆ ಸೂಚಿಸಲಾಗಿದೆ. ಸ್ಥಳೀಯ ಪುರಸಭೆ, ನಗರಸಭೆ ಹಾಗೂ ಪಾಲಿಕೆ ಅಧಿಕಾರಿಗಳ ನೇತೃತ್ವದಲ್ಲಿ ಪೊಲೀಸ್‌ ಇಲಾಖೆಯ ಸಮನ್ವಯದೊಂದಿಗೆ ಅಪಘಾತ ಸ್ಥಳಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಪಘಾತ ಪ್ರದೇಶಗಳಲ್ಲಿ ಅಗತ್ಯ ಸೂಚನಾ ಫಲಕ ಅಳವಡಿಸಲು ಲೋಕೋಪಯೋಗಿ ಇಲಾಖೆಯೊಂದಿಗೆ ಕೆಲಸ ಮಾಡಲಾಗುವುದು. ಮುಂದಿನ 2–3 ತಿಂಗಳಲ್ಲಿ ಅಪಘಾತ ತಡೆಗೆ ಗಂಭೀರ ಕ್ರಮಗಳು ಜಾರಿಯಾಗಲಿವೆ ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಅಪರಾಧ ತಡೆಗೆ ಪೊಲೀಸ್‌ ಇಲಾಖೆ ಸಿಬ್ಬಂದಿಯನ್ನು ಸದಾ ಸನ್ನದ್ಧರಾಗಿರಲು ಸೂಚಿಸಲಾಗಿದೆ. ಚೀತಾ ಬೈಕ್‌ಗಳನ್ನು ಒದಗಿಸಿ ಗಸ್ತು ವ್ಯವಸ್ಥೆ ಬಲಪಡಿಸಲಾಗುತ್ತಿದೆ. ಸಾರ್ವಜನಿಕರು ಕಾನೂನನ್ನು ಕೈಗೆತ್ತಿಕೊಳ್ಳದೇ, ಪೊಲೀಸ್‌ ಇಲಾಖೆಗೆ ಸಹಕರಿಸುವಂತೆ ಮನವಿ ಮಾಡಿದರು.

ವಲಸೆ ಕಾರ್ಮಿಕರ ಬಗ್ಗೆ ಅನವಶ್ಯಕ ವಿಡಿಯೊ ಬೇಡ: ಇತ್ತೀಚೆಗೆ ಬಾಂಗ್ಲಾ ಸೇರಿದಂತೆ ಇತರೆ ರಾಜ್ಯಗಳಿಂದ ವಲಸೆ ಬರುವ ಕಾರ್ಮಿಕರ ಚಿತ್ರಗಳು ಮತ್ತು ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದ್ದು, ಇದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.

ನಿರ್ದಿಷ್ಟ ಮಾಹಿತಿ ಇಲ್ಲದೇ ಯಾವುದೇ ರೀತಿಯ ವಿಡಿಯೊ ಅಥವಾ ಚಿತ್ರಗಳನ್ನು ಸೆರೆಹಿಡಿಯಬಾರದು. ಅನುಮಾನಗಳಿದ್ದರೆ ಸೂಕ್ತ ದಾಖಲೆಗಳೊಂದಿಗೆ ನಿರ್ದಿಷ್ಟ ಮಾಹಿತಿಯನ್ನು ನೀಡಿ ಪೊಲೀಸ್‌ ಇಲಾಖೆಗೆ ದೂರು ನೀಡಬೇಕು. ಈ ಸಂಬಂಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ವಲಸೆ ಕಾರ್ಮಿಕರ ಆಧಾರ್‌ ಸೇರಿದಂತೆ ಅಗತ್ಯ ಮಾಹಿತಿಯನ್ನು ಇಲಾಖೆ ಸಂಗ್ರಹಿಸುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯ ಜನರಲ್ಲಿ ಪೊಲೀಸರ ಮೇಲಿನ ಭಯ ಹಾಗೂ ವಿಶ್ವಾಸಾರ್ಹತೆ ಕಡಿಮೆಯಾಗುತ್ತಿದ್ದು, ಇದರಿಂದ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ಇಲಾಖೆ ಹಿರಿಯ ಅಧಿಕಾರಿಗಳು ಗಂಭೀರ ಕ್ರಮಗಳನ್ನು ಕೈಗೊಳ್ಳುವಂತೆ ಪತ್ರಕರ್ತರ ಸಂಘದ ನಿಕಟ ಪೂರ್ವ ಅಧ್ಯಕ್ಷ ಕೆ.ಎಚ್. ವೇಣುಕುಮಾರ್ ಸಲಹೆ ನೀಡಿದರು.

ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಆರ್. ಕೆಂಚೇಗೌಡ, ಉಪಾಧ್ಯಕ್ಷ ನಂಜುಂಡೇಗೌಡ, ಎಚ್.ಟಿ.ಮೋಹನ್, ಕಾರ್ಯದರ್ಶಿ ಕೆ.ಜಿ. ಸುರೇಶ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪ್ರಮೋದ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.