ADVERTISEMENT

ಹಳೇಬೀಡು: ಸಂತೆ ಸುತ್ತಾಡಿ ಜ್ಞಾನ ಸಂಪಾದಿಸಿದ ವಿದ್ಯಾರ್ಥಿಗಳು

ಸಂತೆ ವರ್ತಕರು, ರೈತರ ಸ್ಥಿತಿಗತಿ ಅರಿಯಲು ಕ್ಷೇತ್ರ ಅಧ್ಯಯನ

ಎಚ್.ಎಸ್.ಅನಿಲ್ ಕುಮಾರ್
Published 3 ಏಪ್ರಿಲ್ 2024, 5:28 IST
Last Updated 3 ಏಪ್ರಿಲ್ 2024, 5:28 IST
ಹಳೇಬೀಡಿನ ಸಂತೆಯಲ್ಲಿ ಈಚೆಗೆ ಕ್ಷೇತ್ರ ಅಧ್ಯಯನ ನಡೆಸಿದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ತಂಡ.
ಹಳೇಬೀಡಿನ ಸಂತೆಯಲ್ಲಿ ಈಚೆಗೆ ಕ್ಷೇತ್ರ ಅಧ್ಯಯನ ನಡೆಸಿದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ತಂಡ.   

ಹಳೇಬೀಡು: ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆ ಮೂಡಬೇಕು. ರೈತರಿಗೆ ಉಪಯುಕ್ತವಾಗಿರುವ ವಾರದ ಸಂತೆಯ ಮಹತ್ವ ತಿಳಿಯಬೇಕು. ರೈತರು ಹಾಗೂ ಸಣ್ಣ ವ್ಯಾಪಾರಿಗಳ ಕಷ್ಟ, ಸುಖದ ಅರಿವಾಗಬೇಕು. ಓದಿನ ಜೊತೆ ವ್ಯವಹಾರಿಕ ಜ್ಞಾನ ಮೂಡಬೇಕು ಎಂಬ ಉದ್ದೇಶದಿಂದ ಹಳೇಬೀಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಶಾಸ್ತ್ರ ಹಾಗೂ ರಾಜ್ಯಶಾಸ್ತ್ರ ವಿಭಾಗದಿಂದ ಸಂತೆ ವಹಿವಾಟಿನ ಕ್ಷೇತ್ರಾಧ್ಯಯನ ನಡೆಯಿತು.

ನಾಲ್ಕು ಗೋಡೆಯ ಮಧ್ಯೆ ಪಠ್ಯ ಚಟುವಟಿಕೆಯಲ್ಲಿ ತೊಡಗುವ ವಿದ್ಯಾರ್ಥಿಗಳು, ಸಂತೆ ಸುತ್ತಾಡಿ ಪ್ರಾಯೋಗಿಕ ಅಧ್ಯಯನ ನಡೆಸಿದರು. ಸಣ್ಣ ವ್ಯಾಪಾರಿಗಳು, ಗ್ರಾಹಕರು ಹಾಗೂ ರೈತರ ನಡುವೆ ನಡೆಯುವ ವ್ಯವಹಾರಿಕ ಪ್ರಕ್ರಿಯೆಯನ್ನು ವಿದ್ಯಾರ್ಥಿಗಳು ಅರಿತುಕೊಂಡರು.

60 ವಿದ್ಯಾರ್ಥಿಗಳನ್ನು ತಲಾ 10 ವಿದ್ಯಾರ್ಥಿಗಳ 6 ತಂಡಗಳನ್ನು ರಚಿಸಿಕೊಂಡು, ವರ್ತಕರ ಸಂದರ್ಶನ ನಡೆಸಿ ಮಾಹಿತಿಯನ್ನು ಕಲೆಹಾಕಿದರು. ಒಂದು ಕಾಲದಲ್ಲಿ ಸಂತೆಯಲ್ಲಿ ಎಲ್ಲ ವಸ್ತುಗಳು ದೊರಕುತ್ತಿದ್ದವು. ನಗರದ ಮಾಲ್‌ಗಳತ್ತ ಹಳ್ಳಿಗರು ಆಕರ್ಷಿತರಾಗಿದ್ದಾರೆ. ಆನ್ ಲೈನ್ ಮಾರುಕಟ್ಟೆ ಸರಕು ಪೂರೈಕೆ ಹಳ್ಳಿಗಳಿಗೂ ಮುಟ್ಟಿದೆ.

ADVERTISEMENT

ಹೀಗಾಗಿ ಸಂತೆಯಲ್ಲಿ ಕೃಷಿ ಉತ್ಪನ್ನ ಹೊರತುಪಡಿಸಿ, ಉಳಿಕೆ ಪದಾರ್ಥಗಳ ವ್ಯಾಪಾರ ಕುಸಿದಿದೆ. ಬಟ್ಟೆ, ಪಾತ್ರೆ, ಪ್ಲಾಸ್ಟಿಕ್ ಮೊದಲಾದ ಮನೆ ಬಳಕೆ ವಸ್ತುಗಳ ವ್ಯಾಪಾರ ಕುಸಿದಿದೆ. ಮಣ್ಣಿನ ಮಡಿಕೆ ಮೊದಲಾದ ವಸ್ತುಗಳ ವ್ಯಾಪಾರವಂತೂ ಹೇಳ ಹೆಸರಿಲ್ಲದಂತಾಗಿದೆ ಎಂಬ ಮಾಹಿತಿ ವಿದ್ಯಾರ್ಥಿಗಳಿಗೆ ಮನವರಿಕೆ ಆಯಿತು.

ತರಕಾರಿ, ಹಣ್ಣು, ಹೂವು, ಮೀನು, ಕೋಳಿ, ಬೆಣ್ಣೆ ಮೊದಲಾದ ವಸ್ತುಗಳ ವ್ಯಾಪಾರದ ಭರಾಟೆ ಸಂತೆಯಲ್ಲಿ ಜೋರಾಗಿಯೇ ನಡೆದಿತ್ತು. ಆದರೆ ಲಾಟೀನು, ಸೀಮೆ ಎಣ್ಣೆ ದೀಪಗಳ ಸ್ಥಾನದಲ್ಲಿ ರೀಚಾರ್ಜೆಬಲ್ ಬ್ಯಾಟರಿ ಬಂದಿರುವುದು ವಿದ್ಯಾರ್ಥಿಗಳಿಗೆ ಕಂಡು ಬಂತು.

ನಶಿಸುತ್ತಿರುವ ಸಂಚಿ (ಎಲೆ ಅಡಿಕೆ ಚೀಲ), ಹುಟ್ಟಿದ ಮಕ್ಕಳಿಗೆ ತೊಡಿಸುವ ಸ್ಥಳೀಯ ತಯಾರಿಕೆಯ ಟೋಪಿ ಹಾಗೂ ಉಡುಪುಗಳನ್ನು ನೋಡಿದ ವಿದ್ಯಾರ್ಥಿಗಳು ಅಚ್ಚರಿ ವ್ಯಕ್ತಪಡಿಸಿದರು. ಮತ್ತೊಂದೆಡೆ ಜೋಡಿಸಿದ್ದ ಇಲಿ ಬೋನು, ಗೋಲಕ, ದವಸ, ಧಾನ್ಯ ಒಣಗಿಸಲು ಹಾಗೂ ಮಳೆಯಿಂದ ರಕ್ಷಣೆ ಮಾಡುವ ತಡಪಾಲು ವಿದ್ಯಾರ್ಥಿಗಳ ಗಮನಕ್ಕೆ ಬಂತು. ಜಾನುವಾರು ಕಟ್ಟುವ ಹಗ್ಗ, ಮೂಗುದಾರ, ಕೊರಳ ಹಗ್ಗ, ಬಾಯಿ ಕುಕ್ಕೆ, ಕುಡುಗೋಲು, ಕತ್ತಿ ಮೊದಲದ ಕೃಷಿ ಉಪಯೋಗಿ ವಸ್ತುಗಳು ವಿದ್ಯಾರ್ಥಿಗಳ ಗಮನ ಸೆಳೆದವು. ಪ್ಲಾಸ್ಟಿಕ್ ಹಾವಳಿಯಿಂದ ವ್ಯವಹಾರ ಕುಸಿದಿದ್ದರೂ, ಕೆಲವು ಮಂದಿ ಬಿದುರಿನ ಬುಟ್ಟಿ, ಈಚಲು ಮರದ ಗರಿಯ ಪೊರಕೆಯನ್ನು ಮಾರಾಟಕ್ಕೆ ಜೋಡಿಸಿ ಗಿರಾಕಿಗಾಗಿ ಕಾಯುತ್ತಿದ್ದ ದೃಶ್ಯ ನೋಡಿದ ವಿದ್ಯಾರ್ಥಿಗಳು, ಮಾರುಕಟ್ಟೆಯಲ್ಲಿ ಕಾಲಕ್ಕೆ ತಕ್ಕಂತೆ ಬದಲಾಗಬೇಕಾಗುತ್ತದೆ ಎಂಬುದನ್ನು ಅರಿತುಕೊಂಡರು. 

ಒಂದು ವಾರದ ಸಂತೆ ಲೆಕ್ಕವಿಲ್ಲದಷ್ಟು ಮಂದಿಗೆ ಜೀವನಾಧಾರ ಆಗಿರುತ್ತದೆ. ವಾರದ ಸಂತೆಗಳ ಅಳಿವು– ಉಳಿವಿನ ಬಗ್ಗೆ ಚಿಂತಿಸಬೇಕಾದ ಕಾಲ ಹತ್ತಿರವಾಗಿದೆ. ಕಾಲಕ್ರಮೇಣ ಸಂತೆಗಳ ಸ್ಥಗಿತವಾಗುತ್ತ ಬಂದರೆ ಲೆಕ್ಕವಿಲ್ಲದಷ್ಟು ಮಂದಿಯ ಜೀವನ ನಿರ್ವಹಣೆ ಕಷ್ಟವಾಗುತ್ತದೆ. ಹಿಂದಿನ ಪರಂಪರೆಯಿಂದ ಬಂದಿರುವ ಸಂತೆ ವ್ಯವಸ್ಥೆ ಬಲಪಡಿಸಲು ಸರ್ಕಾರದ ನೆರವು ಬೇಕಾಗಿದೆ ಎಂಬ ಮಾತು ವಿದ್ಯಾರ್ಥಿಗಳಿಂದ ಕೇಳಿ ಬಂತು.

ಸಾಮಾಜಿಕ ಜಾಲತಾಣದ ಭರಾಟೆಯಲ್ಲಿ ವಿದ್ಯಾರ್ಥಿಗಳಿಗೆ ಸಾಮಾಜಿಕ ವ್ಯವಸ್ಥೆಯ ಅರಿವು ಇಲ್ಲದಂತಾಗಿದೆ. ಸಮಾಜದ ಆಗುಹೋಗುಗಳ ಅರಿವಿಗಾಗಿ ಕಾಲೇಜಿನಲ್ಲಿ ಪಠ್ಯೇತರ ಚಟುವಟಿಕೆ ನಡೆಸುವುದು ಉತ್ತಮ ಬೆಳವಣಿಗೆ ಎಂಬ ಮಾತು ಪೋಷಕರಿಂದ ಕೇಳಿ ಬಂತು.

ಹಳೇಬೀಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕ್ಷೇತ್ರ ಅಧ್ಯಯನದಲ್ಲಿ ಸಂತೆ ವರ್ತಕರಿಂದ ವಿದ್ಯಾರ್ಥಿಗಳು ಮಾಹಿತಿ ಪಡೆದರು.

ಸಣ್ಣ ರೈತರು ವ್ಯಾಪಾರಿಗಳು ಯಾವ ರೀತಿ ಬದುಕು ಕಟ್ಟಿಕೊಂಡಿದ್ದಾರೆ ಎಂಬುದು ವಿದ್ಯಾರ್ಥಿಗಳಿಗೆ ಅರ್ಥವಾಗಬೇಕು ಎಂಬ ಉದ್ದೇಶದಿಂದ ಪ್ರಾಯೋಗಿಕ ಕ್ಷೇತ್ರ ಅಧ್ಯಯನಕ್ಕಾಗಿ ಸಂತೆ ಆಯ್ಕೆ ಮಾಡಿಕೊಂಡಿದ್ದೇವು.

-ದೀಪ್ತಿ ಸಮಾಜಶಾಸ್ತ್ರ ಉಪನ್ಯಾಸಕಿ

ಪಠ್ಯದ ಜೊತೆ ಕ್ಷೇತ್ರ ಅಧ್ಯಯನ ನಡೆಸುವುದರಿಂದ ವಿದ್ಯಾರ್ಥಿಗಳು ಕ್ರೀಯಾಶೀಲರಾಗುತ್ತಾರೆ. ಜೀವನ ನಿರ್ವಹಣೆಯ ಕಷ್ಟ-ಸುಖ ಗೊತ್ತಾಗುತ್ತದೆ. ಕೌಶಲ ವೃದ್ದಿಸುವುದರೊಂದಿಗೆ ಸಾಧಿಸುವ ಛಲ ಮೂಡುತ್ತದೆ. -ಆರ್.ಸಿ.ಮಹೇಶ್ ರಾಜ್ಯಶಾಸ್ತ್ರ ಉಪನ್ಯಾಸಕ

ಪ್ರಸ್ತುತ ಸನ್ನಿವೇಶದಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪಾಠದ ಅಗತ್ಯ ಹೆಚ್ಚಾಗಿದೆ. ಕಾಲೇಜಿನ ಸಮಾಜಶಾಸ್ತ್ರ ರಾಜ್ಯಶಾಸ್ತ್ರ ವಿಭಾಗ ಈ ನಿಟ್ಟಿನಲ್ಲಿ ಹೆಜ್ಜೆ ಹಾಕಿರುವುದು ಸಂತಸದ ವಿಚಾರ.

-ವಿ.ವಸಂತ ಕುಮಾರ್ ಪ್ರಾಂಶುಪಾಲ

ಸಂತೆಗೆ ಬರುವವರ ಸಂಖ್ಯೆ ಕ್ಷೀಣ

ವಿದ್ಯಾರ್ಥಿಗಳು ಮಾಹಿತಿ ಸಂಗ್ರಹಿಸುವ ಸಂದರ್ಭದಲ್ಲಿ ವರ್ತಕರು ಕಷ್ಟ ಸುಖ ಹೇಳಿಕೊಂಡರು. ಜನರಲ್ಲಿ ಸಂತೆಯ ಆಸಕ್ತಿ ಕಡಿಮೆಯಾಗುತ್ತಿದೆ. ವ್ಯವಹಾರ ವಿಸ್ತರಿಸುತ್ತಿದ್ದು ಪೇಟೆ ಬೀದಿಗಳಲ್ಲಿಯೇ ತರಕಾರಿ ಹಣ್ಣು ಮೊದಲಾದ ಅಂಗಡಿಗಳ ಸಂಖ್ಯೆ ಹೆಚ್ಚುತ್ತಿದೆ. ತರಕಾರಿಗಾಗಿ ವಾರದ ಸಂತೆ ಕಾಯುವವರ ಸಂಖ್ಯೆ ಕ್ಷೀಣಿಸಿದೆ ಎಂದು ವರ್ತಕರು ವಿದ್ಯಾರ್ಥಿಗಳ ಬಳಿ ಸಮಸ್ಯೆ ಬಿಚ್ಚಿಟ್ಟರು.   ಇಂದಿನ ಜನ ಆನ್‌ಲೈನ್ ಮಾರುಕಟ್ಟೆಯಲ್ಲಿ ವಸ್ತುಗಳ ಖರೀದಿ ಮಾಡುತ್ತಾರೆ. ಕಂಪನಿ ನಿಗದಿಪಡಿಸಿದ ಹಣಕ್ಕೆ ವಸ್ತು ಪಡೆಯುತ್ತಾರೆ. ಮಾಲ್‌ಗಳಲ್ಲಿ ಅಫರ್ ಹುಡುಕಿದರೂ ನಮೂದಿಸಿರುವ ಬೆಲೆಯನ್ನೇ ಕೊಡುತ್ತಾರೆ. ಸಂತೆಗೆ ಬರುವ ಗ್ರಾಹಕರು ಚೌಕಾಸಿ ಮಾಡುವುದಲ್ಲದೇ ವಾದ ವಿವಾದ ಮಾಡುವುದನ್ನು ನೋಡಿದ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.