ADVERTISEMENT

ಸ್ವಾಯತ್ತ ಸಂಸ್ಥೆ ಐಟಿ ಇಲಾಖೆಯ ಗೌರವ ಹಾಳು ಮಾಡಬೇಡಿ: ಸಚಿವ ರೇವಣ್ಣ ಆಕ್ರೋಶ

ಐಟಿ ದಾಳಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 13:13 IST
Last Updated 19 ಏಪ್ರಿಲ್ 2019, 13:13 IST
ಎಚ್.ಡಿ.ರೇವಣ್ಣ
ಎಚ್.ಡಿ.ರೇವಣ್ಣ   

ಹಾಸನ: ಸ್ವಾಯತ್ತ ಸಂಸ್ಥೆ ಆದಾಯ ತೆರಿಗೆ (ಐಟಿ) ಇಲಾಖೆ ಗೌರವ ಹಾಳು ಮಾಡಬೇಡಿ ಎಂದು ಸಚಿವ ಎಚ್.ಡಿ.ರೇವಣ್ಣ ಅವರು ಬಿಜೆಪಿ ಮುಖಂಡರಿಗೆ ಸಲಹೆ ನೀಡಿದರು.

‘ನಿರಂತರ ಐಟಿ ದಾಳಿ ಮೂಲಕ ಬಿಜೆಪಿ ಮುಖಂಡರು ಸರ್ಕಾರಿ ಯಂತ್ರ ದುರುಪಯೋಗ ಮಾಡಿಕೊಂಡಿದ್ದಾರೆ.
ಜೆಡಿಎಸ್‌ ಮುಖಂಡರು ಚುನಾವಣೆಯಲ್ಲಿ ಪ್ರಚಾರ ಮಾಡದಂತೆ ತಂತ್ರ ಹಣೆಯಲಾಗಿತ್ತು. ಕೆಲ ದಿನಗಳ ಹಿಂದೆ ನಡೆದ ಐಟಿ ದಾಳಿಯಲ್ಲಿ ಪಟೇಲ್‌ ಶಿವರಾಂ ಬಳಿ ₹ 5 ಸಾವಿರ, ಅವರ ಪತ್ನಿ ಬಳಿ ₹ 20 ಸಾವಿರ ನಗದು ಹಾಗೂ ಅವರ ಮಗನ ಬಳಿ ಸಂಬಳದ ಹಣ ₹ 8 ಸಾವಿರ ಸಿಕ್ಕಿದೆ. ಚುನಾವಣಾ ಪ್ರಚಾರದಲ್ಲಿ ತೊಡಗಬಾರದು ಎಂಬ ಕಾರಣಕ್ಕೆ ರಾತ್ರಿವರೆಗೂ ಅಧಿಕಾರಿಗಳು ಅವರನ್ನು ವಿಚಾರಣೆಗೊಳಪಡಿಸಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ತಮ್ಮ ಬೆಂಗಾವಲು ವಾಹನದಲ್ಲಿ ಹಣ ಪತ್ತೆಯಾಗಿರುವ ಕುರಿತು ಸ್ಪಷ್ಟನೆ ನೀಡಿದ ಅವರು, ‘ನನ್ನ ಆಪ್ತ ಸಹಾಯಕ ರಾಘು ಕೆಲಸ ಮುಗಿಸಿ ಮಲಗಲು ಹೋಗುತ್ತಿದ್ದ ವೇಳೆ ಹಿಡಿದು ಆತನ ಬಳಿಯಿದ್ದ ₹ 60 ಸಾವಿರ ನಗದು, ಜತೆಗೆ ಚನ್ನಮ್ಮ ಥಿಯೇಟರ್‌ನಿಂದ ಸಂಗ್ರಹವಾದ ಹಣವನ್ನು ತಂದು ಬೆಂಗಾವಲು ಕಾರಿನಲ್ಲಿ ಇಟ್ಟು ಅಧಿಕಾರಿಗಳು ಫೋಟೋ ತೆಗೆದಿದ್ದಾರೆ. ಅದೇ ದಿನ ನನ್ನ ವಾಹನವನ್ನು ಜಿಲ್ಲಾಧಿಕಾರಿ ತಪಾಸಣೆ ನಡೆಸಿದಾಗ ಏನು ಸಿಗಲಿಲ್ಲ. ಬಿಜೆಪಿಯವರು ಐಟಿಯನ್ನು ಕೀಳು ಮಟಕ್ಕೆ ಬಳಸಿಕೊಂಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಐಟಿ ಅಧಿಕಾರಿ ಹೆಸರು ಹೇಳಿಕೊಂಡು ತರಕಾರಿ ಮಾರುವವನ ಬಳಿ ₹ ೮೦ ಸಾವಿರ ಹಣ ಲಪಟಾಯಿಸಿದ್ದಾರೆ, ನಾಮಕರಣಕ್ಕೆಂದು ಇಟ್ಟಿದ್ದ ಎರಡು ಚೀಲ ರಾಜಮುಡಿ ಅಕ್ಕಿ ತೆಗೆದು ಕೊಂಡು ಹೋಗಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಜಿಲ್ಲೆಯಲ್ಲಿ ಮೊದಲ ಬಾರಿಗೆ ಯಾವುದೇ ಅಹಿತಕರ ಘಟನೆ ನಡೆಯದೇ ಶಾಂತಿಯುತ ಮತದಾನ ಆಗಿದೆ. 8 ವಿಧಾನ ಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಮತ ಬರಲಿದ್ದು, ಅದರಲ್ಲೂ ಹೊಳೆನರಸೀಪುರ, ಚನ್ನರಾಯಪಟ್ಟಣ ಕ್ಷೇತ್ರದಲ್ಲಿ ಹೆಚ್ಚು ಮುನ್ನಡೆ ಆಗಲಿದೆ. ಮಂಡ್ಯ, ಹಾಸನ, ತುಮಕೂರು ಕ್ಷೇತ್ರದಲ್ಲಿ ಜೆಡಿಎಸ್‌ ಗೆಲುವು ನಿಶ್ಚಿತ. ನೆರೆ ಜಿಲ್ಲೆ ಚಿಕ್ಕಮಗಳೂರಿನಲ್ಲೂ ಜೆಡಿಎಸ್‌ ಅಭ್ಯರ್ಥಿ ಗೆದ್ದರೂ ಅಚ್ಚರಿ ಇಲ್ಲ. ದೇವೇಗೌಡರು ಮತ್ತೆ ಪಾರ್ಲಿಮೆಂಟ್ ಗೆ ಹೋಗಿ ರೈತರ ಪರವಾಗಿ ಹೋರಾಟ ಮಾಡಲಿದ್ದಾರೆ ಎಂದು ನುಡಿದರು.

ಚುನಾವಣೆ ಬಳಿಕ ಯಾವುದೇ ವಿಶ್ರಾಂತಿ ಇಲ್ಲ. ದೊರೆತಿರುವ ಅವಕಾಶದಲ್ಲಿ ಜನರ ಋಣ ತೀರಿಸಬೇಕಿದೆ.
ಶಿವಮೊಗ್ಗ, ಕಾರವಾರ ಜಿಲ್ಲೆಗಳಿಗೆ ಪ್ರಚಾರಕ್ಕೆ ಹೋಗುತ್ತೇನೆ. ದೇವೇಗೌಡರು ಆರು ದಶಕ, ನಾನು ನಾಲ್ಕು ದಶಕ ರಾಜಕಾರಣ ಮಾಡಿದ್ದೇನೆ. ಅಭಿವೃದ್ದಿ ಕೆಲಸಗಳು ಮುಗಿದ ಮೇಲೆ ವಿಶ್ರಾಂತಿ ಪಡೆಯುತ್ತೇನೆ ಎಂದು ತಿಳಿಸಿದರು.

ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ರಾಜ್ಯ ಸರ್ಕಾರ ಪತನವಾಗಲಿದೆ ಎಂಬ ಎ.ಮಂಜು ಹೇಳಿಕೆಗೆ ಪ್ರತಿಕ್ರಿಯಿಸಿದ ರೇವಣ್ಣ, ‘ಮೊದಲು ಮಂಜು ಗೆಲ್ಲಲಿ, ನಂತರ ಮೋದಿ ಬಗ್ಗೆ ಮಾತನಾಡೋಣ’ ಎಂದರು.

‘ನರೇಂದ್ರ ಮೋದಿ ಏನೇ ಸುಳ್ಳು ಹೇಳಿದರೂ ಅಧಿಕಾರಕ್ಕೆ ಬರುವುದು ಕಷ್ಟ. ಅವರ ಮಾತು ಕೇಳಿದರೆ ಜನರು ನಗುತ್ತಾರೆ. ಮೊದಲ ಹಂತದಲ್ಲಿ ನಡೆದ 14 ಕ್ಷೇತ್ರಗಳ ಪೈಕಿ 10ರಲ್ಲಿ ಗೆಲ್ಲುತ್ತೇವೆ. ನಾನು ಯಾವ ಶಾಸ್ತ್ರ ಹೇಳಿದರೂ ಅದು ಸರಿಯಾಗಿರುತ್ತೆ. ಯಾರು ಏನೇ ಹೇಳಿದರೂ ಮಂಡ್ಯದಲ್ಲಿ ನಿಖಿಲ್ ಹಾಗೂ ತುಮಕೂರಿನಲ್ಲಿ ದೇವೇಗೌಡರು ಗೆಲ್ಲುತ್ತಾರೆ’ ಎಂದು ಭವಿಷ್ಯ ನುಡಿದರು.

ಬಿಜೆಪಿ ಶಾಸಕ ಇರುವ ಕ್ಷೇತ್ರದಿಂದಲ್ಲೇ ಹಾಸನ ಡೇರಿಯಿಂದ ದೊಡ್ಡಪುರವರಗೆ ₹ ೪೦ ಕೋಟಿ ವೆಚ್ಚದಲ್ಲಿ 4 ಪಥದ ರಸ್ತೆ ನಿರ್ಮಾಣವಾಗುತ್ತಿದೆ. ದೊಡ್ಡಪುರದಿಂದ ದುದ್ದ ಬಳಿ ಇರುವ ಶಿವನೇನಹಳ್ಳಿವರಗೆ ₹ 60 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಪಡಿಸಲಾಗುವುದು ಎಂದರು.


ಹಿರಿಯ ಮುಖಂಡ ಪಟೇಲ್ ಶಿವರಾಂ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ರಾಜೇಗೌಡ, ವಿಧಾನ ಪರಿಷತ್‌ ಸದಸ್ಯ ಧರ್ಮೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.