ADVERTISEMENT

ಸ್ವಾಯತ್ತ ಸಂಸ್ಥೆಗೆ ಮೂರು ಕಾಸಿನ ಬೆಲೆ ಇರಲ್ಲ: ಸಚಿವ ರೇವಣ್ಣ ಗರಂ

ರಾಜಕೀಯ ದುರುದ್ದೇಶಕ್ಕೆ ಐಟಿ ಬಳಕೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 20:15 IST
Last Updated 24 ಏಪ್ರಿಲ್ 2019, 20:15 IST
ಎಚ್.ಡಿ.ರೇವಣ್ಣ
ಎಚ್.ಡಿ.ರೇವಣ್ಣ   

ಹಾಸನ: ರಾಜಕೀಯ ದುರುದ್ದೇಶಕ್ಕೆ ಆದಾಯ ತೆರಿಗೆ (ಐಟಿ) ಇಲಾಖೆ ಮತ್ತು ಜಾರಿ ನಿರ್ದೇಶನಾಲಯಗಳನ್ನು ಬಳಸಿಕೊಳ್ಳುತ್ತಿದ್ದರೆ, ಮುಂದೊಂದು ದಿನ ಸ್ವಾಯತ್ತ ಸಂಸ್ಥೆಗಳಿಗೆ ಮೂರು ಕಾಸಿನ ಬೆಲೆ ಇರುವುದಿಲ್ಲ ಎಂದು ಸಚಿವ ಎಚ್‌.ಡಿ.ರೇವಣ್ಣ ಎಚ್ಚರಿಸಿದರು.

ಮೂರು ತಿಂಗಳಿನಿಂದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಾಯಕರನ್ನು ಗುರಿಯಾಗಿಸಿಕೊಂಡು ಆದಾಯ ತೆರಿಗೆ ಇಲಾಖೆ ದಾಳಿ ನಡೆಸಲಾಗುತ್ತಿದೆ. ಎಲ್ಲದಕ್ಕೂ ಮಿತಿ ಇರುತ್ತದೆ. ಈವರೆಗೂ ಜಿಲ್ಲೆಯಲ್ಲಿ 18 ಜೆಡಿಎಸ್‌ ನಾಯಕರ ಮನೆ, ಕಚೇರಿ ಮೇಲೆ ಐಟಿ ದಾಳಿ ನಡೆದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಚುನಾವಣಾ ಆಯುಕ್ತರು ಜೆಡಿಎಸ್‌ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಇರುವುದು ಮಂಡ್ಯ, ಹಾಸನ, ತುಮಕೂರು ಕ್ಷೇತ್ರವೇ? ಬಿಜೆಪಿ ನಾಯಕರ ಬಗ್ಗೆ ಮಾಹಿತಿ ನೀಡಿದರೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳುತ್ತಿಲ್ಲ. ಬಿಜೆಪಿಯವರು ₹ 10 ಖರ್ಚು ಮಾಡದೇ, ಮೋದಿ ಹೆಸರಲ್ಲಿ ಮತ ಪಡೆದಿದ್ದಾರೆಯೇ ಎಂದು ಪ್ರಶ್ನಿಸಿದರು.

ಎರಡನೇ ಹಂತದ ಲೋಕಸಭಾ ಚುನಾವಣೆ ಮುಗಿಯುವ ಮೊದಲೇ ಮೈತ್ರಿ ಸರ್ಕಾರ ಬೀಳಿಸಲು ಹೊರಟಿದ್ದಾರೆ. ಜನಸಾಮಾನ್ಯರ ಹಿತ ಕಾಪಾಡುವುದು ಹಾಗೂ ರೈತರ ಹಿತ ಕಾಯುವ ಕೆಲಸಗಳನ್ನ ವಿರೋಧ ಪಕ್ಷದವರು ಮಾಡುತ್ತಿಲ್ಲ ಎಂದು ಕಿಡಿಕಾರಿದರು.

ADVERTISEMENT

ಬಿಜೆಪಿಯವರು ಹಿಂದೆ ರಾಮನ ಜಪ ಮಾಡುತ್ತಿದ್ದರು. ಈಗ ಮೋದಿ ಜಪ ಮಾಡುತ್ತಿದ್ದಾರೆ. ಕಳೆದ 10 ತಿಂಗಳಿಂದ ಸರ್ಕಾರ ಪತನಗೊಳಿಸುವ ಹುನ್ನಾರ ನಡೆಸಿದ್ದಾರೆ. ಅದರಲ್ಲಿ ಯಶಸ್ಸು ಕಾಣುವುದಿಲ್ಲ. ಸರ್ಕಾರ ರಕ್ಷಿಸಿಕೊಳ್ಳುವುದು ಹೇಗೆ ಎಂಬುದು ಗೊತ್ತಿದೆ ಎಂದು ತಿರುಗೇಟು ನೀಡಿದರು.

ಐಟಿ ದಾಳಿಯಿಂದ ದೇವೇಗೌಡರನ್ನು ಬೆದರಿಸುತ್ತೇನೆ ಅಂದುಕೊಂಡಿದ್ದರೆ ಅದು ತಿರುಕನ ಕನಸು. ಇದೆಲ್ಲಾ ಎದುರಿಸಿ ಗೌಡರು ಆರು ದಶಕ ರಾಜಕಾರಣ ಮಾಡಿದ್ದಾರೆ. ಅಧಿಕಾರ ದುರುಪಯೋಗ ಪಡಿಸಿಕೊಳ್ಳುವುದು ಎಷ್ಟು ದಿನಗಳು ನಡೆಯುತ್ತೆ ? ದೇಶದಲ್ಲಿ ಎಂತೆಂಹ ರಾಜಕಾರಣಿಗಳು ಏನೇನು ಆಗಿಲ್ಲ ಎಂದು ಲೇವಡಿ ಮಾಡಿದರು.

ಹರದನಹಳ್ಳಿ ಈಶ್ವರ ದೇವಾಲಯ ಮೇಲೆ ಐಟಿ ದಾಳಿ ನಡೆದಿರುವುದು ಸತ್ಯ. ಐಟಿಗೆ ಲಿಖಿತ ರೂಪದಲ್ಲಿ ಇಂತವರ ಮನೆಯಲ್ಲಿ ಹಣವಿದೆ ಎಂದು ದೂರು ನೀಡಿದರು ತನಿಖೆ ಮಾಡಲಿಲ್ಲ ಎಂದು ಆರೋಪಿಸಿದರು.

ಯಡಿಯೂರಪ್ಪ ಶಿವಮೊಗ್ಗದಲ್ಲಿ ಎಷ್ಟು ಆಸ್ತಿ ಮಾಡಿದ್ದಾರೆ? ಅದರ ಬಗ್ಗೆ ತನಿಖೆ ನಡೆಯಲಿ. ಕೃಷ್ಣಯ್ಯಶೆಟ್ಟಿ ಅವರಿಂದ ಪಡೆದ ಹಣವನ್ನು ಚುನಾವಣೆಗಾಗಿ ತರಕಾರಿ ವಾಹನದಲ್ಲಿ ಹಣ ಸಾಗಾಣಿಕೆ ಮಾಡಲಿಲ್ಲವೇ. ಆ ಬಗ್ಗೆ ಏಕೆ ತನಿಖೆ ಮಾಡಲಿಲ್ಲ ಎಂದು ಪ್ರಶ್ನಿಸಿದ ರೇವಣ್ಣ,ಯಡಿಯೂರಪ್ಪ ಅವರು ಮೊದಲು ಶಿವಮೊಗ್ಗ ನೋಡಿಕೊಳ್ಳಲಿ, ಅವರ ಮಗ ಗೆಲ್ಲುವುದೇ ಕಷ್ಟವಾಗಿದೆ. ಮೊದಲು ಅಲ್ಲಿ ಉಳಿಸಿಕೊಳ್ಳಲಿ, ಅದನ್ನು ಬಿಟ್ಟು ಸರ್ಕಾರ ಬೀಳಿಸ್ತಾರಂತೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಮುಖಂಡರಾದ ಕೆ.ಎಸ್.ಈಶ್ವರಪ್ಪ ಹಾಗೂ ಯಡಿಯೂರಪ್ಪ ಇಬ್ಬರ ಸಹೋದರರಂತೆ ಕೆಲಸ ಮಾಡುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ ಅವರು ಹಾಗೆಯೇ ಇರಲಿ ಬಿಡಿ. ಜನರ ಹಿತಕ್ಕಾಗಿ ಅವರು ಅದೇ ರೀತಿ ಒಳ್ಳೆಯ ಕೆಲಸ ಮಾಡಲಿ ಎಂದು ಕಾಳಲೆದರು.

ರಾಜ್ಯದಲ್ಲಿ ಅತಿ ಹೆಚ್ಚು ಆಲೂ ಬೆಳೆಯುವ ಪ್ರದೇಶ ಹಾಸನ. ಆದರೆ, ಇಂದು ಆಲೂಗೆಡ್ಡೆ ಬೆಳೆಯುವ ಪ್ರದೇಶ ಕಡಿಮೆ ಆಗಿದೆ. ಹಿಂದೆ 20 ಸಾವಿರ ಹೆಕ್ಟೇರ್‌ನಲ್ಲಿ ಆಲೂ ಬೆಳೆಯಲಾಗುತ್ತಿತ್ತು. ಕಳೆದ ವರ್ಷ 12 ಸಾವಿರ ಹೆಕ್ಟೇರ್‌ಗೆ ಇಳಿಕೆಯಾಗಿದೆ. ಈ ಬಾರಿ 15 ಸಾವಿರ ಹೆಕ್ಟೇರ್‌ಗೆ ಬೇಡಿಕೆ ಇದೆ. ಆದ್ದರಿಂದ ಶೇಕಡಾ 50ರಷ್ಟು ಸಬ್ಸಿಡಿ ನೀಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆಲೂಗೆ ಬಳಸುವ ಔಷಧಿಗೆ ₹ 15 ಕೋಟಿ ಹಣ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಜಿಲ್ಲಾಡಳಿತ ಬಳಿ ₹5 ಕೋಟಿ ಹಣ ಇದೆ. ಇನ್ನೂ ₹ 10 ಕೋಟಿ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಶಾಸಕ ಕೆ.ಎಸ್‌.ಲಿಂಗೇಶ್‌, ಮುಖಂಡರಾದ ಪಟೇಲ್‌ ಶಿವರಾಂ, ರಾಜೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.