ADVERTISEMENT

ಜೂನ್‌ನಿಂದ ಎಸ್ಸೆಸ್ಸೆಲ್ಸಿ ತರಗತಿ ನಡೆಸಲಿ: ಭವಾನಿ ರೇವಣ್ಣ

ಗ್ರಾಮೀಣ ಮಕ್ಕಳಿಗೆ ತಲುಪದ ಪುನರ್‌ಮನನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 21 ಮೇ 2020, 12:25 IST
Last Updated 21 ಮೇ 2020, 12:25 IST
 ಭವಾನಿ ರೇವಣ್ಣ
 ಭವಾನಿ ರೇವಣ್ಣ   

ಹಾಸನ: ಜೂನ್‌ 25ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗುವ ಹಿನ್ನೆಲೆಯಲ್ಲಿ ಜೂನ್‌ 1 ರಿಂದಲೇ ಶಾಲೆಯಲ್ಲಿ ತರಗತಿ ನಡೆಸಲು ಅವಕಾಶ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಸರ್ಕಾರಕ್ಕೆ ಮನವಿ ಮಾಡಿದರು.

ಲಾಕ್‌ಡೌನ್‌ ನಿರ್ಬಂಧ ವೇಳೆ ಮಕ್ಕಳ ಅನುಕೂಲಕ್ಕಾಗಿ ಫೋನ್‌ ಇನ್‌, ಆನ್‌ ಲೈನ್‌ ಪಾಠ, ರೇಡಿಯೊ ಹಾಗೂ ಚಂದನ ವಾಹಿಣಿಯಲ್ಲಿ ಪುನರ್‌ಮನನ ಕಾರ್ಯಕ್ರಮ ನಡೆಸಲಾಗಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ಹಾಗೂ ನೆಟ್‌ವರ್ಕ್‌ ಸಮಸ್ಯೆಯಿಂದ ಎಲ್ಲಾ ಮಕ್ಕಳಿಗೂ ಸೌಲಭ್ಯ ತಲುಪಿಲ್ಲ. ಆದ್ದರಿಂದ ನೇರವಾಗಿ ಶಾಲೆಯಲ್ಲಿ ಪಾಠ ಮಾಡಲು ಅನುವು ಮಾಡಿಕೊಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಳೆದ ಶೈಕ್ಷಣಿಕ ವರ್ಷದಲ್ಲಿ ಹಾಸನ ಜಿಲ್ಲೆ ಉತ್ತಮ ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಪಡೆದಿತ್ತು. ಈ ಬಾರಿಯೂ ಹಲವು ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷೆ ವೇಳೆ ಸೋಂಕು ಹರಡದಂತೆ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್‌ ಬಳಸಲಾಗುವುದು. ಚನ್ನರಾಯಪಟ್ಟಣ ಮತ್ತು ಬೇಲೂರು ತಾಲ್ಲೂಕಿನಲ್ಲಿ ಶಾಸಕರೇ ಮಾಸ್ಕ್ ಕೊಡಿಸುವುದಾಗಿ ಮುಂದೆ ಬಂದಿದ್ದಾರೆ. ಶಿಕ್ಷಣ ಇಲಾಖೆ ವತಿಯಿಂದಲೇ ಥರ್ಮಲ್‌ ಸ್ಕ್ಯಾನರ್‌, ಸ್ಯಾನಿಟೈಸರ್‌ ನೀಡಲಾಗುತ್ತದೆ. ದಾನಿಗಳು ಮಕ್ಕಳಿಗೆ ಮಾಸ್ಕ್‌ ನೀಡಬಹುದು. ಇಲ್ಲವಾದರೆ ಸ್ವಂತ ಖರ್ಚಿನಿಂದ ಮಾಸ್ಕ್ ಹಾಗೂ ಸ್ಯಾನಿಟೈಸರ್‌ ಕೊಡಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 21 ಸಾವಿರ ಮಕ್ಕಳು ಪರೀಕ್ಷೆಗೆ ಬರೆಯಲಿದ್ದು, 89 ಹೊಸ ಕೇಂದ್ರಗಳು ಸೇರಿ 179 ಪರೀಕ್ಷಾ ಕೇಂದ್ರ ಗುರುತಿಸಲಾಗಿದೆ. 1089 ಕೊಠಡಿ ಕಾಯ್ದಿರಿಸಲಾಗಿದ್ದು, ಪ್ರತಿ ಕೊಠಡಿಯಲ್ಲಿ 20 ಮಕ್ಕಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ADVERTISEMENT

ಫೋನ್ ಇನ್‌ ಕಾರ್ಯಕ್ರಮದಲ್ಲಿ ಬಾಲಕರಿಗಿಂತ ಹೆಣ್ಣು ಮಕ್ಕಳು ಹೆಚ್ಚು ಪ್ರಶ್ನೆ ಕೇಳುತ್ತಿದ್ದಾರೆ. ಬಾಲಕರಲ್ಲಿ ಹುಡುಗಾಟಿಕೆ ಹೆಚ್ಚು. ಪಾಠದ ಕಡ ಹೆಚ್ಚು ಗಮನ ಕೊಡುವುದಿಲ್ಲ. ಅದಕ್ಕಾಗಿ ಪರೀಕ್ಷೆ ಆರಂಭಕ್ಕೂ 20 ದಿನ ಮುಂಚಿತವಾಗಿ ತರಗತಿಯಲ್ಲಿ ಪಾಠ ಮಾಡಲು ಅವಕಾಶ ನೀಡುವಂತೆ ಕೋರಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಪರೀಕ್ಷಾ ಕೇಂದ್ರಗಳಿಗೆ ಗ್ರಾಮೀಣ ವಿದ್ಯಾರ್ಥಿಗಳು ತೆರಳಲು ಸಾರಿಗೆ ಬಸ್‌ ಹಾಗೂ ಖಾಸಗಿ ವಾಹನಗಳ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.