ADVERTISEMENT

ಆಲೂರು: ರಂಗನಾಥ ಸ್ವಾಮಿಗೆ ‘ತಪನ’ ಪೂಜೆ

ಫೆ.25 ರಂದು ವಿಶೇಷ ಪೂಜೆ: ವಿವಿಧೆಡೆಯಿಂದ ಬರುವ ಭಕ್ತರು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 6:50 IST
Last Updated 23 ಫೆಬ್ರುವರಿ 2023, 6:50 IST
ರಂಗನಾಥಸ್ವಾಮಿಗೆ ತಪನ ಅಲಂಕಾರ ಪೂಜೆ ಮಾಡಿರುವುದು.
ರಂಗನಾಥಸ್ವಾಮಿಗೆ ತಪನ ಅಲಂಕಾರ ಪೂಜೆ ಮಾಡಿರುವುದು.   

ಆಲೂರು: ದೇವಸ್ಥಾನಗಳಲ್ಲಿ ವಿಗ್ರಹಗಳಿಗೆ ಬೆಣ್ಣೆ, ಅರಿಶಿನ, ಕುಂಕುಮ, ವಿವಿಧ ಹಣ್ಣುಗಳು ಸೇರಿದಂತೆ ಅನೇಕ ಅಲಂಕಾರಗಳನ್ನು ಮಾಡಿ ಪೂಜೆಗಳು ನಡೆಯುತ್ತವೆ. ಆದರೆ ತಪನ ಎಂಬ ಪೂಜೆಯನ್ನು ಕಸಬಾ ಮರಸು ಮತ್ತು ಹಳೆ ಆಲೂರು ಗ್ರಾಮದ ರಂಗನಾಥಸ್ವಾಮಿ ದೇವಾಲಯದಲ್ಲಿ ಮಾಡಲಾಗುತ್ತದೆ. ಫೆ.25 ರಂದು ಈ ವಿಶೇಷ ಪೂಜೆ ನೆರವೇರಲಿದ್ದು, ದೂರದ ಊರುಗಳಿಂದಾಗಿ ಸಾವಿರಾರು ಭಕ್ತಾದಿಗಳು ಭಾಗವಹಿಸಲಿದ್ದಾರೆ.

ಈ ಪೂಜೆ ಮಾಡಿಸಲು ಹರಕೆ ಹೊತ್ತಿರುತ್ತಾರೆ. ಪುರಾತನ ಕಾಲದಿಂದಲೂ ಧಾರ್ಮಿಕವಾಗಿ ನಡೆದುಕೊಂಡು ಬಂದಿದ್ದರೂ, ವೈಜ್ಞಾನಿಕವಾಗಿ ಹಲವು ಪ್ರಯೋಜನಗಳಿವೆ. ಮರಸು ಗ್ರಾಮದಲ್ಲಿರುವ ರಂಗನಾಥಸ್ವಾಮಿ ಪೂಜೆ ಮಾಡುವ ವೈಷ್ಣವ ಸಂಪ್ರದಾಯದವರು ಮಾತ್ರ ಪೂಜೆ ಬಗ್ಗೆ ಪಳಗಿದ್ದಾರೆ.

ತಪನ ಅಲಂಕಾರ ಮಾಡಲು ಬಹುತೇಕ ಆಯುರ್ವೇದ ಉಪಯುಕ್ತ ಗಿಡಮೂಲಿಕೆ ವಸ್ತುಗಳನ್ನು ಬಳಸುವುದರಿಂದ ವಿಗ್ರಹಕ್ಕೆ ಅಗೋಚರ ಶಕ್ತಿ ಬರುತ್ತದೆ ಎಂಬುದು ವಾಡಿಕೆ. ಅಲ್ಲದೇ ಬಳಸಿದ ವಸ್ತುವನ್ನು ವಿಗ್ರಹದ ಮೈ ಮೇಲಿಂದ ತೆಗೆದ ನಂತರ, ಮನುಷ್ಯರು ಪ್ರಸಾದವಾಗಿ ಬಳಸುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಪುರಾತನ ಕಾಲದಿಂದ ನಡೆದು ಬಂದಿದೆ.

ADVERTISEMENT

‘ಬಹುತೇಕ ವಿಗ್ರಹಗಳನ್ನು ಕೃಷ್ಣಶಿಲೆ, ರಥದಕಲ್ಲು, ಸಾಲಿಗ್ರಾಮ ಎಂಬ ಕಲ್ಲುಗಳನ್ನು ಬಳಸಿ ಕೆತ್ತಲಾಗುತ್ತದೆ. ಸಾಲಿಗ್ರಾಮ ಕಲ್ಲು ನೇಪಾಳದಲ್ಲಿ ಮಾತ್ರ ದೊರಕುತ್ತದೆ. ದಕ್ಷಿಣ ಭಾರತದಲ್ಲಿ ಬಹುತೇಕ ಕೃಷ್ಣಶಿಲೆ ಬಳಸಿ ವಿಗ್ರಹ ತಯಾರು ಮಾಡುತ್ತಾರೆ. ಕೃಷ್ಣಶಿಲೆಯಲ್ಲಿ ಬಹುತೇಕ ಗಂಡು ದೇವರ ವಿಗ್ರಹಗಳನ್ನು ಕೆತ್ತಲಾಗುತ್ತದೆ’ ಎನ್ನುತ್ತಾರೆ ಅರ್ಚಕ ವೇಣುಕುಮಾರ್.

ಗಿಡಮೂಲಿಕೆಗಳನ್ನು ಚೆನ್ನಾಗಿ ಅರೆದು ಹೊಂದಿಸಿ, ವಿಗ್ರಹಕ್ಕೆ ಲೇಪನ ಮಾಡಲಾಗುತ್ತದೆ. ಲೇಪನ ಮಾಡಿದ ನಂತರ 20 ನಿಮಿಷ ಮಾತ್ರ ದರ್ಶನಕ್ಕೆ ಅವಕಾಶವಿರುತ್ತದೆ. ಬಾಳೆಹಣ್ಣು, ತೆಂಗಿನಕಾಯಿ ಬಳಸುವುದರಿಂದ ಹೆಚ್ಚು ಕಾಲ ದರ್ಶನಕ್ಕೆ ಅವಕಾಶವಿರುವುದಿಲ್ಲ. ನಂತರ ಲೇಪನ ತೆಗೆದು ಮೂರ್ತಿಯನ್ನು ಶುಚಿಗೊಳಿಸಿ, ಹೂಗಳಿಂದ ಅಲಂಕರಿಸಿ ಮಹಾಮಂಗಳಾರತಿ ನಡೆಯುತ್ತದೆ. ಲೇಪನಗೊಂಡ ಪ್ರಸಾದವನ್ನು ಭಕ್ತರಿಗೆ ನೀಡಲಾಗುತ್ತದೆ.

ತಪನ ಸೇವೆ ಎಂದು ಸುದ್ದಿ ತಿಳಿದವರು ದೂರದ ಊರುಗಳಿಂದ ದೇವರ ದರ್ಶನಕ್ಕೆ ಬರುತ್ತಾರೆ. ಮರಸು ವೈಷ್ಣವ ಸಂಪ್ರದಾಯದ ರವಿಕುಮಾರ್, ಪುರುಷೋತ್ತಮ, ರಂಗಸ್ವಾಮಿ, ರಂಗನಾಥ, ಲಕ್ಷ್ಮೀಕಾಂತ ಅವರು ಪೂಜಾ ಕಾರ್ಯದಲ್ಲಿ ತೊಡಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.