ADVERTISEMENT

ಹೊಯ್ಸಳ ರಾಜಧಾನಿಯಲ್ಲಿ ಹುಣ್ಣಿಮೆ ಬೆಳದಿಂಗಳು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 15:03 IST
Last Updated 1 ಫೆಬ್ರುವರಿ 2020, 15:03 IST
ಹಳೇಬೀಡಿನಲ್ಲಿ ಶನಿವಾರ ಆರಂಭಗೊಂಡ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಮಾಡೆಲ್‌ ಶಾಲೆಯ ಮಕ್ಕಳು ಹೊಯ್ಸಳ ವೈಭವ ರೂಪಕ ಪ್ರಸ್ತುತ ಪಡಿಸಿದರು
ಹಳೇಬೀಡಿನಲ್ಲಿ ಶನಿವಾರ ಆರಂಭಗೊಂಡ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಮಾಡೆಲ್‌ ಶಾಲೆಯ ಮಕ್ಕಳು ಹೊಯ್ಸಳ ವೈಭವ ರೂಪಕ ಪ್ರಸ್ತುತ ಪಡಿಸಿದರು   

ಹಳೇಬೀಡು (ನಾಟ್ಯರಾಣಿ ಶಾಂತಲಾ ವೇದಿಕೆ): ಸರ್ವರ ಉದ್ಧಾರದ ಧ್ಯೇಯದೊಂದಿಗೆ ಜಾತಿ, ಧರ್ಮ, ಪಂಥಗಳನ್ನು ಮೀರಿದ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಶನಿವಾರ ಚಾಲನೆ ದೊರೆಯಿತು.

ಆರು ದಶಕದ ಬಳಿಕ ಹೊಯ್ಸಳರ ರಾಜಧಾನಿಯಲ್ಲಿ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುತ್ತಿರುವ ಈ ಮಹೋತ್ಸವಕ್ಕೆ ನಾಡಿನ ವಿವಿಧ ಭಾಗಗಳಿಂದ ಬಂದಿರುವ ಸಹಸ್ರಾರು ಭಕ್ತರು, ಗಣ್ಯರು, ಮಠಾಧೀಶರು ಸಾಕ್ಷಿಯಾದರು.

ಪಟ್ಟಣದ ಹೊರವಲಯದ ಸುಮಾರು 120 ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಹೊಯ್ಸಳೇಶ್ವರ ಮಹಾಮಂಟಪದಲ್ಲಿ 9 ದಿನ ನಡೆಯುವ ಮಹೋತ್ಸವ ವಚನಗಾಯನದೊಂದಿಗೆ ಆರಂಭವಾಯಿತು.

ADVERTISEMENT

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಮಾತನಾಡಿ, ‘ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪ್ರತಿವಾರ ಅಂಕಣ ಬರೆಯುವ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಯಾವುದೇ ಸರ್ಕಾರದ ನೀತಿ ಕಾರ್ಯಕ್ರಮಗಳಲ್ಲಿ ವ್ಯತ್ಯಾಸವಿದ್ದರೆ ಆಳವಾಗಿ ಅಧ್ಯಯನ ಮಾಡುತ್ತಾರೆ. ಫಸಲ್‌ ಬಿಮಾ ಯೋಜನೆಯ ತಪ್ಪುಗಳನ್ನು ತಿದ್ದಿಕೊಳ್ಳಲು ಸಲಹೆ ನೀಡಿದರು. ಸಾಮಾನ್ಯವಾಗಿ ನ್ಯಾಯಾಲಯ ಮಾಡುವ ಕೆಲಸವನ್ನು ಯಾವುದೆ ಅಂಜಿಕೆ ಇಲ್ಲದೆ ಸಂಬಂಧಿಸಿದ ಅಧಿಕಾರಿಗಳನ್ನು ಕರೆಸಿ ಸಲಹೆ ನೀಡುವ ವ್ಯಕ್ತಿತ್ವ ಅವರದ್ದು’ ಎಂದು ಹೇಳಿದರು.

ಉದ್ಘಾಟನಾ ಸಮಾರಂಭದಲ್ಲಿ ಹೊಸದುರ್ಗ ಹಂಸಧ್ವನಿ ತಂಡದವರು ವಚನಗಾಯನ ಪ್ರಸ್ತುತಪಡಿಸಿದರು. ಜಾವಗಲ್‌ ಮಾಡೆಲ್‌ ಶಾಲೆಯ ಮಕ್ಕಳು ಮನಮೋಹಕವಾಗಿ ಹೊಯ್ಸಳ ವೈಭವ ನೃತ್ಯರೂಪಕ ಪ್ರಸ್ತುತಪಡಿಸಿದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಶ್ರವಣಬೆಳಗೂಳ ಜೈನಮಠದ ಪೀಠಾಧ್ಯಕ್ಷ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ , ಸಾಣಿಹಳ್ಳಿ ಮಠದ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ, ಉಪ ಮುಖ್ಯಮಂತ್ರಿ ಲಕ್ಷ್ಮಣ್‌ ಸವದಿ, ಸಾಹಿತಿ ಚಂದ್ರಶೇಖರ ಕಂಬಾರ, ಶಾಸಕ ಎಚ್‌.ಕೆ.ಕುಮಾರಸ್ವಾಮಿ, ಸಾರಿಗೆ ಆಯುಕ್ತ ಎನ್‌.ಶಿವಕುಮಾರ್‌, ವಿಧಾನ ಪರಿಷತ್‌ ಸದಸ್ಯ ಧರ್ಮೇಗೌಡ, ವಕೀಲ ಅಶೋಕ್‌ ಹಾರನಹಳ್ಳಿ, ಕಾಂಗ್ರೆಸ್‌ ಮುಖಂಡ ಸಿ.ಎಂ.ಇಬ್ರಾಹಿಂ. ತಾಲ್ಲೂಕು ಪಂಚಾಯತಿ ಅಧ್ಯಕ್ಷ ಜೆ.ಬಿ.ರಂಗೇಗೌಡ, ಗ್ರಾಮಪಂಚಾಯತಿ ಅಧ್ಯಕ್ಷೆ ಗೌರಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.