ಹಳೇಬೀಡು: ಭಾರತದ ಅತಿ ದೊಡ್ಡ ದಿಗಂಬರ ಜೈನ ಮುನಿಗಳ ಸಂಘವಾದ ಆಚಾರ್ಯ ವಿಶುದ್ಧ ಸಾಗರ ಮುನಿ ಮಹಾರಾಜರ ಸಾಧು ಪರಿವಾರ ಶನಿವಾರ ಬೆಳಿಗ್ಗೆ ಜೈನರಗುತ್ತಿಯಲ್ಲಿ ನಡೆಯುತ್ತಿರುವ ಪಂಚಕಲ್ಯಾಣಕ ಮಹೋತ್ಸವಕ್ಕೆ ಆಗಮಿಸಿತು.
19 ಮಂದಿ ಮುನಿಗಳನ್ನು ಭವ್ಯವಾಗಿ ಸ್ವಾಗತಿಸಲಾಯಿತು. ಆಚಾರ್ಯ ಚಂದ್ರಪ್ರಭ ಮುನಿ ಮಹಾರಾಜ್ ಹಾಗೂ ವೀರಸಾಗರ ಮುನಿ ಮಹಾರಾಜ್ ಅವರು, ಕ್ಯಾತನಕೆರೆ ಗಡಿಯಲ್ಲಿ ವಿಶುದ್ಧ ಸಾಗರ ಮುನಿ ಮಹಾರಾಜರ ಸಂಘವನ್ನು ಸ್ವಾಗತಿಸಿದರು. ವಿವಿಧ ಊರಿನಿಂದ ಬಂದಿದ್ದ ಜೈನ ಸಮುದಾಯದವರು ಆಚಾರ್ಯ ಮುನಿಗಳು ಆಶಿರ್ವಾದ ಪಡೆದರು.
ಕ್ಯಾತನಕೆರೆ ಕ್ರಾಸ್‌ನಿಂದ 2 ಕಿ.ಮೀ. ದೂರದವರೆಗೂ ಮೆರವಣಿಗೆಯಲ್ಲಿ ಮುನಿ ಸಂಘವನ್ನು ಕರೆತರಲಾಯಿತು. ಸಾವಿರಾರು ಮಂದಿ ಜೈನ ಶ್ರಾವಕ, ಶ್ರಾವಕಿಯರು ಶ್ವೇತ ವರ್ಣದ ಉಡುಪು ಧರಿಸಿ, ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಪಂಚವರ್ಣದ ನೂರಾರು ಬಾವುಟಗಳು ರಾರಾಜಿಸಿದವು. ಮೋಡದ ವಾತಾವರಣದಲ್ಲಿ ಶಿವಪುರಕಾವಲಿನ ರಾಶಿ ಗುಡ್ಡದ ತಪ್ಪಲಿನಲ್ಲಿ ಮೆರವಣಿಗೆ ಸಾಗಿತು. ಬ್ಯಾಂಡ್ ಸೆಟ್ ಹಾಗೂ ಮಂಗಳ ವಾದ್ಯ ತಂಡದೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು. ಶುದ್ಧವಾದ ಆಕರ್ಷಕ ಬಣ್ಣದ ವಸ್ತ್ರದಲ್ಲಿ ಸುತ್ತಿದ್ದ ಧರ್ಮ ಗ್ರಂಥಗಳನ್ನು ಶ್ರಾವಕಿಯರು ಮಸ್ತಕದಲ್ಲಿ ಹೊತ್ತು ಮೆರವಣಿಗೆಯಲ್ಲಿ ಸಾಗಿದರು.
ಜೈನರಗುತ್ತಿಗೆ ತಲುಪಿದ ನಂತರ ಆಚಾರ್ಯ ಚಂದ್ರಪ್ರಭ ಮುನಿ ಮಹಾರಾಜ್ ಹಾಗೂ ವೀರ ಸಾಗರ ಮುನಿ ಮಹಾರಾಜರು, ಆಚಾರ್ಯ ವಿಶುದ್ಧ ಸಾಗರ ಮುನಿ ಮಹಾರಾಜರಿಗೆ ಪಾದಪೂಜೆ ನೆರವೇರಿಸಿದರು. ನಂತರ ಮುನಿಗಳ ಸಂಘ ಕ್ಷೇತ್ರ ದರ್ಶನ ಮಾಡಿತು. ಶ್ರಾವಕ, ಶ್ರಾವಕಿಯರು, ಜೈನ ಮುನಿಗಳನ್ನು ಶಾಸ್ತ್ರೋಕ್ತವಾಗಿ ವಿಧಿ ವಿಧಾನದೊಂದಿಗೆ ಆಹಾರದ ಚೌಕಕ್ಕೆ ಆಹ್ವಾನಿಸಿದರು.
ವಿಶುದ್ಧ ಸಾಗರ ಮುನಿ ಮಹಾರಾಜರ ಸಂಘ ಅಕ್ಟೋಬರ್ ನಂತರ ಮಹಾರಾಷ್ಟ್ರದ ನಾಂದಣಿಯಿಂದ ಕಾಲ್ನಡಿಗೆಯ ವಿಹಾರ ಕೈಗೊಂಡಿತ್ತು. 600ಕಿ.ಮೀ. ದೂರ ನಡೆದು ಜೈನರಗುತ್ತಿ ಕ್ಷೇತ್ರಕ್ಕೆ ಆಗಮಿಸಿದೆ.
ಜೈನರಗುತ್ತಿ ಪ್ರವೇಶಿಸುವ ಮೊದಲು ಅಡಗೂರಿನಲ್ಲಿಯೂ ವಿಶುದ್ಧ ಸಾಗರ ಮುನಿ ಮಹಾರಾಜರ ಸಂಘದ ಸಾಧು ಪರಿವಾರವನ್ನು ವೈಭವದಿಂದ ಸ್ವಾಗತಿಸಿದರು. ಅಡಗೂರಿನ ಶ್ರಾವಕ– ಶ್ರಾವಕಿಯರು ಮುನಿಗಳ ಪಾದಪೂಜೆ ನೆರರವೇರಿಸಿ, ಆಶೀರ್ವಾದ ಪಡೆದರು. ಜೈನರು ಮಾತ್ರವಲ್ಲದೇ ವಿವಿಧ ಜಾತಿ, ಧರ್ಮದವರು ದಿಗಂಬರ ಜೈನ ಮುನಿಗಳ ದರ್ಶನ ಪಡೆದರು.
ಗರ್ಭಕಲ್ಯಾಣಕ ಉತ್ತರದಲ್ಲಿ ಮೊಳಗಿದ ಸುಪ್ರಭಾತ
ಜೈನರಗುತ್ತಿಯಲ್ಲಿ ನಡೆಯುತ್ತಿರುವ ಪಂಚಕಲ್ಯಾಣಕದ 2ನೇ ದಿನವಾದ ಶನಿವಾರ ಗರ್ಭಕಲ್ಯಾಣಕ ಉತ್ತರ ಕ್ರಿಯಾ ಸುಪ್ರಭಾತ ಮಂಗಳವಾದ್ಯದೊಂದಿಗೆ ವೈಭವದಿಂದ ಆರಂಭವಾಯಿತು. ಜಿನಮಂದಿರದಲ್ಲಿ ಜಿನೇಂದ್ರ ಅಭಿಷೇಕ ನೆರವೇರಿಸಿ ಶಾಂತಿಧಾರಾ ನೆರವೇರಿಸಲಾಯಿತು. ನಂತರ ಪಂಚಕಲ್ಯಾಣಕ ಮಂಟಪದಲ್ಲಿಯೂ ಜಿನೇಂದ್ರ ಅಭಿಷೇಕ ನಡೆಸಿ ಶಾಂತಿಧಾರ ನಡೆಸಲಾಯಿತು. ಯಾಗ ಮಂಡಲ ಆರಾಧನೆಯೊಂದಿಗೆ ಶಾಂತಿ ಹೋಮ ಹಾಗೂ ನಿತ್ಯ ಪೂಜನ ನಡೆಯಿತು.
ನಾಮ ಸಂಪ್ರೋಕ್ಷಣ ಮಂದಿರ ವೇದಿ ಶುದ್ಧಿ ನಡೆಸಿದ ನಂತರ ಚರ್ತುದಿಕ್ಷು ಹೋಮ ನಡೆಯಿತು. ಸಂಗೀತಮಯ ಆರತಿಯೊಂದಿಗೆ ನಡೆದ ಗರ್ಭಕಲ್ಯಾಣಿಕ ಉತ್ತರ ಕ್ರಿಯಾ ವಿಧಾನವನ್ನು ವಿವಿಧ ಊರಿನಿಂದ ಆಗಮಿಸಿದ ಭಕ್ತರು ಕಣ್ತುಂಬಿಕೊಂಡರು. ತೀರ್ಥಂಕರರ ಮಾತೆ ತಾನು 16 ಸಪ್ನಗಳನ್ನು ಕಂಡ ಫಲಗಳನ್ನು ತನ್ನ ಪತಿಯಿಂದ ತಿಳಿದುಕೊಂಡು ಸಂಭ್ರಮ ಪಡುವ ವಿಧಾನವನ್ನು ಪ್ರತಿಷ್ಠಾಚಾರ್ಯರು ಹಾಗೂ ಪುರೋಹಿತರು ಆಚಾರ್ಯ ಚಂದ್ರಪ್ರಭ ಮಹಾರಾಜ್ ಹಾಗೂ ವೀರಸಾಗರ ಮಹಾರಾಜರು ಮಾರ್ಗದರ್ಶನದಲ್ಲಿ ನೆರವೇರಿಸಿದರು.
ಅಷ್ಟ ಕುಮಾರಿಕೆಯರು ಮಾತೆಯ ಸೇವೆ ಮಾಡುವುದನ್ನು ವಿಶೇಷ ಪೋಷಾಕು ಧರಿಸಿದ ಮಕ್ಕಳು ಹಾಡು ನೃತ್ಯ ಹಾಗೂ ಪುರೋಹಿತರ ಮಂತ್ರದೊಂದಿಗೆ ಪ್ರಸ್ತುತ ಪಡಿಸಿದರು. ನಂತರ ಪೂಜಾ ವಿಧಾನ ಹಾಗೂ ಸಂಗೀತಮಯ ಆರತಿಯೊಂದಿಗೆ ಗರ್ಭ ಕಲ್ಯಾಣ ಪೂಜೆ ನೆರವೇರಿಸಿದರು. ಪ್ರತಿಷ್ಠಾಚಾರ್ಯರು ಹಾಗೂ ಪುರೋಹಿತರು ಬಿಡುವಿಲ್ಲದಂತೆ ಜಿನ ಮಂತ್ರ ಘೋಷಿಸಿದರು.
ಆಚಾರ್ಯ ಚಂದ್ರಪ್ರಭ ಮುನಿ ಮಹಾರಾಜರು ಯುವ ಸಾಮ್ರಾಟ್ ಬಿರುದಿನಿಂದ ಪ್ರಸಿದ್ಧರಾಗಿದ್ದು ಜೈನ ಧರ್ಮದ ಹೆಮ್ಮೆಯ ಸಂತರಾಗಿದ್ದಾರೆ. ಅವರ ಅಶಿರ್ವಾದ ಪಡೆದು ಧನ್ಯರಾದೆವು–ಪದ್ಮಶ್ರೀ ವಿ.ಪಿ. ಶ್ರಾವಕಿ ಗುಬ್ಬಿ
ವೀರ ಸಾಗರ ಮುನಿ ಮಹಾರಾಜರ ಪಾದ ಸ್ಪರ್ಶದಿಂದ ಜೈನರಗುತ್ತಿ ಅಭಿವೃದ್ಧಿ ಹೊಂದುತ್ತಿದೆ. ಜಿನ ಧರ್ಮದ ಸಾರವನ್ನು ಶ್ರಾವಕರಿಗೆ ತಿಳಿಸಿ ಜಿನ ಧರ್ಮ ಪ್ರಭಾವಕರಾಗಿದ್ದಾರೆ– ವಿ.ಪಿ.ಪಾರ್ಶ್ವನಾಥ್ ನಿವೃತ್ತ ಎಂಜಿನಿಯರ್ ಬೆಂಗಳೂರು
ಪಂಚ ಕಲ್ಯಾಣಕ ಮಹೋತ್ಸವಕ್ಕೆ ವಿಶುದ್ಧ ಸಾಗರ ಮಹಾರಾಜರು ಆಗಮಿಸಿರುವುದು ನಮ್ಮ ಪುಣ್ಯ. ಚರ್ಯಶಿರೋಮಣಿ ಬಿರುದಿಗೆ ವಿಶುದ್ಧ ಸಾಗರ ಮುನಿ ಮಹಾರಾಜರು ಪಾತ್ರರಾಗಿದ್ದಾರೆ–ಎನ್.ಸಿ.ಧರಣೇಂದ್ರ ಜೈನ್ ಗುಬ್ಬಿ ಜೈನ ಸಮಾಜದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.