
ಅರಸೀಕೆರೆ: ಕ್ಷೇತ್ರದ ಎಲ್ಲ ಕೆರೆಗಳಿಗೆ ನೀರು ಹರಿಸಿ ರೈತರು ಸದಾ ಕೃಷಿಯಲ್ಲಿ ನಿರತರಾಗುವಂತೆ ಮಾಡುವುದೇ ನನ್ನ ಧ್ಯೇಯವಾಗಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ತಾಲ್ಲೂಕಿನ ಬಾಗೇಶಪುರ ಗ್ರಾಮದ ಅಜ್ಜಿಗುಡ್ಡ ಹಾಗೂ ದೊಡ್ಡಗುಡ್ಡ ನಡುವೆ ಚೆಕ್‌ಡ್ಯಾಮ್ ನಿರ್ಮಾಣಕ್ಕೆ ಬುಧವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ತಾಲ್ಲೂಕಿನ ಬಹುತೇಕ ಮಂದಿ ರೈತಾಪಿ ವರ್ಗದವರಾಗಿದ್ದು ಕೃಷಿ ಕ್ಷೇತ್ರವೇ ಜೀವಾನಧಾರವಾಗಿದೆ. ಇದನ್ನು ಮನಗಂಡು ನೂರಾರು ಚೆಕ್ ಡ್ಯಾಮ್‌ಗಳನ್ನು ನಿರ್ಮಾಣ ಮಾಡಿ ನೀರು ಶೇಖರಣೆಗೆ ಒತ್ತು ನೀಡುವುದರ ಪರಿಣಾಮವಾಗಿ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಇಂದು ಬಾಗೇಶಪುರದ ಅಜ್ಜಿಗುಡ್ಡ ಹಾಗೂ ದೊಡ್ಡಗುಡ್ಡದ ಮಳೆ ನೀರು ಸಮುದ್ರ ಸೇರುತ್ತಿತ್ತು .ಇವತ್ತು ಅ ನೀರನ್ನು ತಡೆಗಟ್ಟಿ ಚೆಕ್‌ಡ್ಯಾಮ್ ನಿರ್ಮಾಣ ಮಾಡಿ ಕಾಲುವೆ ಮಾಡಿ ಕೆನಾಲ್ ಒಡೆದು ಬಾಗೇಶಪುರದ ಕೆಂಗೆಟ್ಟೆ ಕೆರೆಗೆ ನೀರು ತಿರುಗಿಸಲು ಮುಂದಾಗಿದ್ದೇನೆ. ಇದರ ಕಾಮಗಾರಿ ವೆಚ್ಚ ₹2.50 ರಿಂದ 3 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಇದರಿಂದ ಬಾಗೇಶಪುರದ 2 ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಗ್ರಾಮಸ್ಥರ ಸಹಕಾರದೊಂದಿಗೆ ಮಾಡಲಾಗುವುದು.ಇನ್ನಿತರ ಗ್ರಾಮದ ಅವಶ್ಯಕತೆಗಳನ್ನು ತಿಳಿದು ಅಭಿವೃದ್ಧಿ ಕೆಲಸಗಳನ್ನು ಸಹ ಮಾಡಲು ಪ್ರಯತ್ನ ಮಾಡಲಾಗುವುದು’ ಎಂದು ಹೇಳಿದರು.
ಮಡಿವಾಳ ಸಮಾಜದ ಅಧ್ಯಕ್ಷ ಬಾಗೇಶಪುರ ಶಿವಣ್ಣ ಮಾತನಾಡಿ, ‘ಈ ಕಾಮಗಾರಿಯೂ ಗ್ರಾಮದ ಜನರಿಗೆ ಬಹಳ ಅವಶ್ಯಕತೆ ಇತ್ತು. ಇದನ್ನು ಮನಗಂಡು ಶಾಸಕರು ಕೆಲಸಕ್ಕೆ ಕೈ ಹಾಕಿರುವುದು ಸಂತಸವಾಗಿದ್ದು ಬೇಸಿಗೆ ಕಾಲದಲ್ಲಿ ನೀರಿನ ಬವಣೆ ತಲೆದೋರುವುದಿಲ್ಲ’ ಎಂದು ಹೇಳಿದರು.
ಬಾಗೇಶಪುರದ ಗ್ರಾಮಸ್ಥರು, ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.