
ಹಾಸನ: ಜಿಲ್ಲೆಯ ಜೀವನಾಡಿ ಹೇಮಾವತಿ ನದಿಗೆ ತಾಲ್ಲೂಕಿನ ಗೊರೂರು ಬಳಿ ಜಲಾಶಯ ನಿರ್ಮಿಸಲಾಗಿದ್ದು, ಈ ಜಲಾಶಯದ ಆವರಣದಲ್ಲಿ ಕೆಆರ್‌ಎಸ್ ಮಾದರಿಯ ಉದ್ಯಾನ ನಿರ್ಮಾಣ ಮಾಡಬೇಕು ಎನ್ನುವ ದಶಕಗಳ ಬೇಡಿಕೆ ಇನ್ನೂ ಈಡೇರುತ್ತಿಲ್ಲ.
ಖಾಸಗಿ ಸಹಭಾಗಿತ್ವದಲ್ಲಿ ಹೇಮಾವತಿ ಜಲಾಶಯದ ಬಳಿ ಉದ್ಯಾನ ಅಭಿವೃದ್ಧಿ ಪಡಿಸುವ ಯೋಜನೆಯನ್ನು ಜಲಾಶಯದ ಅಧಿಕಾರಿಗಳು ಸಿದ್ಧಪಡಿಸಿ, ಕಾವೇರಿ ನೀರಾವರಿ ನಿಗಮಕ್ಕೆ ಸಲ್ಲಿಸಿದ್ದಾರೆ.
ಹೇಮಾವತಿ ಜಲಾಶಯವನ್ನು 1979ರಲ್ಲಿ ನಿರ್ಮಿಸಲಾಗಿದೆ. ಜಲಾಶಯದ ಮುಂಭಾಗ 446 ಎಕರೆ ಜಾಗವಿದ್ದು, ಇದರಲ್ಲಿ ಕೆಆರ್‌ಎಸ್ ಮಾದರಿ ಉದ್ಯಾನ ನಿರ್ಮಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು ಎಂಬುದು ದಶಕದ ಕನಸು.
ರಾಜ್ಯ ಸರ್ಕಾರದ ಪ್ರತಿ ಬಜೆಟ್ ವೇಳೆ ಗೊರೂರಿನಲ್ಲಿ ಕೆಆರ್‌ಎಸ್ ಮಾದರಿ ಉದ್ಯಾನ ನಿರ್ಮಾಣದ ಪ್ರಸ್ತಾವ ಸರ್ಕಾರಕ್ಕೆ ಸಲ್ಲಿಕೆಯಾಗುತ್ತದೆ. ಇನ್ನೇನು ಮಂಜೂರಾಯಿತು ಸಿಕ್ಕಿತು ಎನ್ನುವಷ್ಟರಲ್ಲಿಯೇ ಅದು ನೇಪಥ್ಯಕ್ಕೆ ಸರಿದು ಬಿಡುತ್ತದೆ.
ಹೇಮಾವತಿ ಡ್ಯಾಂ ಮುಂಭಾಗದ 446 ಎಕರೆ ಪ್ರದೇಶ ಸುತ್ತ ತಂತಿಬೇಲಿ ಹಾಕಿ, ಒಂದಷ್ಟು ಸಸಿ ಬೆಳೆಸಲಾಗಿದೆ. 84 ಎಕರೆ ಪ್ರದೇಶವನ್ನು ತೋಟಗಾರಿಕೆ ಇಲಾಖೆಗೆ ನೀಡಲಾಗಿದೆ. ಇಷ್ಟು ವಿಶಾಲವಾದ ಪ್ರದೇಶವನ್ನು ಕೆಆರ್‌ಎಸ್ ಮಾದರಿಯಲ್ಲಿ ಅಭಿವೃದ್ಧಿಪಡಿಸಿದರೆ ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ.
ಮಳೆಗಾಲದಲ್ಲಿ ಜಲಾಶಯ ಭರ್ತಿಯಾಗಿ ಕ್ರಸ್ಟ್‌ಗೇಟ್ ತೆರೆದಾಗ ಮಾತ್ರ ಜಿಲ್ಲೆಯ ಜನತೆ ಹಾಗೂ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಹಾಸನ-ಮಡಿಕೇರಿ ಮಾರ್ಗದ ಗೊರೂರಿನಲ್ಲಿ ಕೆಆರ್‌ಎಸ್ ಮಾದರಿ ಬೋಟಿಂಗ್, ನೀರಿನ ಕಾರಂಜಿ, ಸಂಗೀತ ನೃತ್ಯ ಕಾರಂಜಿ, ಹೂದೋಟ, ನೀರಿನ ಝರಿ ಮತ್ತಿತರ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಿದ್ದೇ ಆದಲ್ಲಿ ವಾರ್ಷಿಕವಾಗಿ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡಬಹುದು. ಆ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದಂತಾಗಲಿದ್ದು, ಆರ್ಥಿಕ ಚಟುವಟಿಕೆ ವೃದ್ಧಿಸುತ್ತದೆ.
ಇದರ ಜೊತೆಗೆ ಬೇಲೂರಿನ ಯಗಚಿ ಜಲಾಶಯದ ಮುಂಭಾಗವೂ ಸುಂದರ ಉದ್ಯಾನ ಹಾಗೂ ಯಗಚಿ ಜಲಾಶಯದಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಿದರೆ ಪ್ರವಾಸೋದ್ಯಮಕ್ಕೆ ಒತ್ತು ನೀಡಿದಂತಾಗುತ್ತದೆ ಎನ್ನುವುದು ಜಿಲ್ಲೆಯ ಜನರ ಬೇಡಿಕೆ.
‘ಗೊರೂರು ಹೇಮಾವತಿ ಜಲಾಶಯ ಆವರಣದ ಉದ್ಯಾನವನ್ನು ಖಾಸಗಿ ಸಹಭಾಗಿತ್ವದಲ್ಲಿ ಕೆಆರ್‌ಎಸ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಕಾವೇರಿ ನೀರಾವರಿ ನಿಗಮಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಗೊರೂರು ಹೇಮಾವತಿ ಜಲಾಶಯ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಹೇಮಾವತಿ ಜಲಾಶಯದ ಬಳಿ ಉದ್ಯಾನ ನಿರ್ಮಾಣ ಮಾಡಬೇಕು ಎನ್ನುವ ಬೇಡಿಕೆ ದಶಕಗಳದ್ದಾಗಿದೆ. ಈ ಬಗ್ಗೆ ಸರ್ಕಾರ ಈಗಲಾದರೂ ಕ್ರಮ ಕೈಗೊಳ್ಳಬೇಕು.
-ರಘು ಹೊಂಗೆರೆ ಜೆಡಿಎಸ್ ಜಿಲ್ಲಾ ವಕ್ತಾರ
ಉದ್ಯಾನ ನಿರ್ಮಾಣದಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. ಹೇಮಾವತಿ ಜಲಾಶಯಕ್ಕೂ ಮೆರುಗು ಸಿಗಲಿದೆ. ಸರ್ಕಾರ ಯೋಜನೆಗೆ ಆದ್ಯತೆ ನೀಡಬೇಕು.
-ಅಮಿತ್ ಶೆಟ್ಟಿ ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ
ಪ್ರಸ್ತಾಪಿಸದ ಉಸ್ತುವಾರಿ ಸಚಿವ
ಪ್ರತಿ ಬಾರಿ ಹೇಮಾವತಿ ಜಲಾಶಯಕ್ಕೆ ಬಾಗಿನ ಅರ್ಪಿಸುವ ಸಂದರ್ಭದಲ್ಲಿ ಉದ್ಯಾನ ನಿರ್ಮಾಣ ವಿಷಯ ಪ್ರಸ್ತಾಪವಾಗುತ್ತದೆ. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಗೋಪಾಲಯ್ಯ ಕೆ.ಎನ್. ರಾಜಣ್ಣ ಸಹ ಉದ್ಯಾನ ನಿರ್ಮಾಣದ ಕುರಿತು ಮುಖ್ಯಮಂತ್ರಿ ಜೊತೆ ಚರ್ಚಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈ ಬಾರಿ ಬಾಗಿನ ಅರ್ಪಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರು ಉದ್ಯಾನ ನಿರ್ಮಾಣದ ಕುರಿತು ಪ್ರಸ್ತಾಪವನ್ನೂ ಮಾಡದೇ ಇರುವುದು ಜನರಲ್ಲಿ ಬೇಸರ ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.