ADVERTISEMENT

ಮಾನ್ಪಡೆ ಹೋರಾಟ ಇಂದಿಗೂ ಜೀವಂತ

ನುಡಿ ನಮನ ಕಾರ್ಯಕ್ರಮದಲ್ಲಿ ಸಿಐಟಿಯು ಧರ್ಮೇಶ್‌

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 12:09 IST
Last Updated 24 ಅಕ್ಟೋಬರ್ 2020, 12:09 IST
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಆಯೋಜಿಸಿದ್ದ ಮಾರುತಿ ಮಾನ್ಪಡೆ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್‌ ಮಾತನಾಡಿದರು.
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಆಯೋಜಿಸಿದ್ದ ಮಾರುತಿ ಮಾನ್ಪಡೆ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್‌ ಮಾತನಾಡಿದರು.   

ಹಾಸನ: ಮಾರ್ಕ್ಸ್‌‌ವಾದಿ, ಕಮ್ಯೂನಿಸ್ಟ್‌ ಚಿಂತನೆಗಳಿಗೆ ಆಕರ್ಷಿತರಾಗಿದ್ದ ಮಾರುತಿ ಮಾನ್ಪಡೆ ಅವರು ಜಾತಿ, ಧರ್ಮಗಳನ್ನು ಮೀರಿ ಬೆಳೆದ ನಾಯಕ. ಅವರ ಅಗಲಿಕೆಯಿಂದ ರೈತರ, ಕಾರ್ಮಿಕರ ಪರವಾದ ಧ್ವನಿ ಇಂದು ಇಲ್ಲದಂತಾಗಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್‌ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಶನಿವಾರ ಕೆಪಿಆರ್‌ಎಸ್‌, ಸಿಐಟಿಯು, ಡಿಎಚ್‌ಎಸ್‌ ಸಂಘಟನೆ ವತಿಯಿಂದ
ಆಯೋಜಿಸಿದ್ದ ಮಾರುತಿ ಮಾನ್ಪಡೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಗನವಾಡಿ, ಕಾರ್ಮಿಕರು, ರೈತ ಚಳವಳಿಗಳಲ್ಲಿ ಪೂರ್ಣಾವಧಿಯಲ್ಲಿ ತೊಡಗಿಸಿಕೊಂಡಿದ್ದರು. ಜಿಲ್ಲೆಯಲ್ಲಿ ನಡೆದ ಸಿಗರನಹಳ್ಳಿ ಹೋರಾಟ, ರೈತ ಚಳವಳಿ ಸೇರಿದಂತೆ ಅನೇಕ ಹೋರಾಟಗಳಲ್ಲಿ ಅವರು ಭಾಗಿಯಾಗಿದ್ದರು. ಗ್ರಾಮ ಪಂಚಾಯಿತಿ ನೌಕರರನ್ನು ಸಂಘಟಿಸಿ ಕನಿಷ್ಟ ವೇತನಕ್ಕಾಗಿ ಅವಿರತ ಹೋರಾಟ ನಡೆಸಿದವರಲ್ಲಿ ಇವರೇ ಪ್ರಮುಖರು. ತೊಗರಿ ಬೆಳೆಗಾರರನ್ನು ಸಂಘಟಿಸಿ ಹೋರಾಟ ನಡೆಸಿ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾದವರು ಎಂದು ನುಡಿದರು.

ರೈತರು, ಕೂಲಿ ಕಾರ್ಮಿಕರು, ನಿರ್ಗತಿಕರು ಹಸಿವಿನಿಂದ ಸಾಯುತ್ತಿದ್ದಾರೆ. ಅವರಿಗೂ ಪರಿಹಾರ ಕೊಡಬೇಕು ಎಂದು ಲಾಕ್‌ಡೌನ್‌ ಸಂದರ್ಭದಲ್ಲಿ ರಸ್ತೆಗಿಳಿದು ಹೋರಾಟ ನಡೆಸಿದ್ದರು. ಮಾನ್ಪಡೆ ಇಲ್ಲವಾದರೂ ಅವರ ಹೋರಾಟಗಳು ಇಂದಿಗೂ ಜೀವಂತವಾಗಿವೆ ಎಂದು ಹೇಳಿದರು.

ADVERTISEMENT

ಕೇಂದ್ರ ಸರ್ಕಾರದ ರೈತ, ದಲಿತ, ಮಹಿಳಾ, ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ನ.26 ರಂದು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ದೇಶದಾದ್ಯಂತ ಮುಷ್ಕರಕ್ಕೆ ಕರೆ ಕೊಡಲಾಗಿದೆ. ಎಲ್ಲರೂ ಮುಷ್ಕರವನ್ನು ಬೆಂಬಲಿಸುವ ಮೂಲಕ ಹೋರಾಟ ಯಶಸ್ವಿಗೆ ಕೈಜೋಡಿಸಿ ಎಂದು ಕರೆನೀಡಿದರು.

ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿ ಸಂಚಾಲಕ ಎಚ್‌.ಕೆ. ಸಂದೇಶ್‌, ದಲಿತ ಹಕ್ಕುಗಳ ಸಮಿತಿ ಸಂಚಾಲಕ ಎಂ.ಜಿ. ಪೃಥ್ವಿ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್‌.ಆರ್‌. ನವೀನ್‌ ಕುಮಾರ್‌, ಡಿವೈಎಫ್‌ಐ ನ ಮಧುಸೂದನ್ ಮೊಸಳೆ, ರೈತ ಸಂಘದ ಬಾಬು, ಮುಖಂಡರಾದ ಅರವಿಂದ್‌, ಪುಷ್ಪ, ಕೆ.ಈರಪ್ಪ, ಸತ್ಯನಾರಾಯಣ, ವಸಂತ್ ಕುಮಾರ್, ಗ್ರಾಮ ಪಂಚಾಯಿತಿ ನೌಕರರ ಸಂಘದ ಅಶೋಕ್ ಧರ್ಮಯ್ಯ ಹಾಜರಿದ್ದರು.

ಕಲಾವಿದ ಗ್ಯಾರಂಟಿ ರಾಮಣ್ಣ ಅವರು ಮಾನ್ಪಡೆ ಕುರಿತು ರಚಿಸಿದ್ದ ಹಾಡು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.