ಹಾಸನ: ಹೊಳೆನರಸೀಪುರ ತಾಲ್ಲೂಕಿನ ಅಗ್ರಹಾರ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದ ಸಾರ್ವಜನಿಕ ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಪಕ್ಷ ವಿರೋಧಿಗಳನ್ನು ಅವಾಚ್ಯವಾಗಿ ನಿಂದಿಸಿದರು.
ತಮ್ಮ ಜನ್ಮದಿನದ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಅವರು, ‘ಮಹಿಳೆಯರ ಬಗ್ಗೆ ತಪ್ಪಾಗಿ ಮಾತನಾಡುತ್ತಿಲ್ಲ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವಿರುದ್ಧ ಬಿಂಬಿಸಿಕೊಳ್ಳದೇ, ಪಕ್ಷದೊಳಗಿದ್ದು ಮೋಸ ಮಾಡಿದವರಿಗೆ ಈ ಮಾತನ್ನು ಹೇಳುತ್ತಿದ್ದೇನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಹಾಸನ ಜಿಲ್ಲೆಯಲ್ಲಿ ಯಾವುದೇ ಪಕ್ಷ ಇಲ್ಲ. ಇರುವುದು ಎರಡೇ ಪಕ್ಷ. ಒಂದು ಎಚ್.ಡಿ. ದೇವೇಗೌಡರ ಪರ, ಇನ್ನೊಂದು ದೇವೇಗೌಡರ ವಿರುದ್ಧ ಪಕ್ಷ. ನಮ್ಮ ತಾತ ಹೇಳಿರುವ ಮಾತು ನನಗೆ ಈಗ ಅನುಭವ ಆಗುತ್ತಿದೆ’ ಎಂದರು.
‘ಪೆನ್ಡ್ರೈವ್ ಹಂಚಿ ನಾನು ಎಂಎಲ್ಸಿ ಆಗಿಲ್ಲ. ಪಕ್ಷದ ಕಾರ್ಯಕರ್ತರಿಗೆ ಯಾವುದೇ ಇಲಾಖೆಯಲ್ಲಿ ತೊಂದರೆಯಾದರೆ ನನ್ನ ಗಮನಕ್ಕೆ ತನ್ನಿ. ಯಾರು ಬರುತ್ತಾರೋ, ಬಿಡುತ್ತಾರೋ, ನಾನು ಮಾತ್ರ ಬರುತ್ತೇನೆ’ ಎಂದು ಹೇಳಿದರು.
‘ಯಾವುದೇ ಜಾತಿ ಹಾಗೂ ಜನಾಂಗ ನೋಡದೇ ಕೆಲಸ ಮಾಡುತ್ತೇನೆ. ನಮ್ಮ ತಾತ ದೇವೇಗೌಡರು ಯಾವುದೇ ಜಾತಿ ನೋಡಬೇಡ ಎಂದಿದ್ದಾರೆ. ಒಮ್ಮೆ ಒಂದು ಸಮುದಾಯ ಕೈಬಿಡಬಹುದು. ಆದರೆ, ಅವರಿಗೆ ಅರ್ಥವಾದ ಬಳಿಕ ನಿನ್ನ ಕೈಹಿಡಿಯುತ್ತಾರೆ ಎಂದು ಹೇಳಿದ್ದಾರೆ’ ಎಂದರು.
‘ಹೋದ ಲೋಕಸಭಾ ಚುನಾವಣೆಯಲ್ಲಿ ಜಾತಿಯ ವಿಷ ಬೀಜ ಬಿತ್ತಿದ್ದರು. ಎಚ್.ಡಿ.ರೇವಣ್ಣನವರು ಎಷ್ಟು ದೇವಸ್ಥಾನ ಕಟ್ಟಿದ್ದಾರೆ ಎಂಬುದು ಇಲ್ಲಿನ ಸಂಸದರಿಗೆ ಗೊತ್ತಾ? ಕೇಳಿಕೊಂಡು ಬರಲು ಹೇಳಿ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.