
ಸಚಿವ ಕೃಷ್ಣ ಬೈರೇಗೌಡ
ಸಕಲೇಶಪುರ: ‘ಕಾಡಾನೆ ಸಮಸ್ಯೆ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿಯ ಕೊರತೆಯಾಗಲಿ, ಅನುದಾನದ ಕೊರತೆಯಾಗಲಿ ಇಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಇಲ್ಲಿಯ ಮಿನಿ ವಿಧಾನಸೌಧದಲ್ಲಿ ಶುಕ್ರವಾರ ನಡೆದ ಜನಸ್ಪಂದನ ಸಭೆಗೆ ಬಂದಿದ್ದ ಸಚಿವರು ಕಾಡಾನೆ ಸಮಸ್ಯೆ ಸಂಬಂಧ ಸಾಮಾಜಿಕ ಹೋರಾಟಗಾರ ಯಡೇಹಳ್ಳಿ ಆರ್. ಮಂಜುನಾಥ್, ಮಲೆನಾಡು ರಕ್ಷಣಾ ಸೇನೆ, ಕರವೇ ಪ್ರವೀಣ್‌ಶೆಟ್ಟಿ ಬಣ ಹಾಗೂ ರಾಜ್ಯ ಬೆಳೆಗಾರರ ಒಕ್ಕೂಟದ ಮುಖಂಡರ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
‘ಸಕಲೇಶಪುರ, ಆಲೂರು, ಬೇಲೂರು, ಮೂಡಿಗೆರೆ ಭಾಗದಲ್ಲಿ ಕಾಡಾನೆ ಸಮಸ್ಯೆ, ಜೀವ ಹಾಗೂ ಬೆಳೆ ಹಾನಿಯ ಸಂಪೂರ್ಣ ಮಾಹಿತಿ ಇದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಅವರ ತಂದೆ ಆರೋಗ್ಯದ ಕಡೆ ಈಗ ಹೆಚ್ಚು ಗಮನ ಕೊಡಬೇಕಾಗಿದೆ. ಇಲ್ಲದೇ ಇದ್ದಿದ್ದರೆ ಇಂದು ಇಲ್ಲಿಗೆ ಅವರೂ ಭೇಟಿ ನೀಡಿ ನಿಮ್ಮೊಂದಿಗೆ ಸಭೆ ನಡೆಸುತ್ತಿದ್ದರು’ ಎಂದರು.
ಆನೆಗಳನ್ನು ಸ್ಥಳಾಂತರ ಮಾಡುವಾಗ ತಜ್ಞರಿಂದ ಪರಿಶೀಲನೆ ಆಗಬೇಕು. ಒಂದು ಕಡೆ ಇದ್ದ ಆನೆಗಳನ್ನು ಮತ್ತೊಂದು ಕಡೆ ಸ್ಥಳಾಂತರ ಮಾಡಿದಾಗ, ಆ ಭಾಗದ ಜನರ ಮೇಲೆ ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಜನರೂ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಹೇಳಿದರು.
‘ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿಲ್ಲದ ರೀತಿಯಲ್ಲಿ, ಆನೆಗಳ ಸಂಖ್ಯೆ ಕಡಿಮೆ ಇರುವ ರಾಜ್ಯ ಮೀಸಲು ಅರಣ್ಯಗಳನ್ನು ಗುರುತಿಸಿ, ಅವುಗಳು ಮನುಷ್ಯರು ವಾಸ ಮಾಡುವ ಜಾಗಕ್ಕೆ ಬರದಂತೆ ಭದ್ರತೆ ಮಾಡಿ, ಅಲ್ಲಿಗೆ ಸ್ಥಳಾಂತರ ಮಾಡುವ ಕೆಲಸ ಸರ್ಕಾರದಿಂದ ಆಗುತ್ತಿದೆ’ ಎಂದರು.
‘ಆನೆ ಮತ್ತು ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನಗಳನ್ನು ಹಂತ ಹಂತವಾಗಿ ಮಾಡಲಾಗುತ್ತಿದೆ. ಶೇ 100ರಷ್ಟು ಪರಿಹಾರ ಮಾಡುತ್ತೇವೆ ಎಂದು ಹೇಳಿದರೆ ಅದು ಸುಳ್ಳಾಗುತ್ತದೆ. ಪ್ರಕೃತಿಯಲ್ಲಿ ಏನೂ ಹೇಳುವುದಕ್ಕೆ ಸಾಧ್ಯವಿಲ್ಲ’ ಎಂದರು.
‘ದಸರಾ ಆನೆ ಅರ್ಜುನ ಸ್ಮಾರಕ ನಿರ್ಮಾಣ ವಿಷಯದಲ್ಲಿ ಹೋರಾಟ ಮಾಡಿದ ಹೋರಾಟಗಾರರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಖಲಿಸಿರುವ ಮೊಕದ್ದಮೆಯನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು. ಯಾವುದೇ ಅಧಿಕಾರಿಯ ಮೇಲಾಗಲಿ, ಆಸ್ತಿಪಾಸ್ತಿ ಹಾನಿಯಾಗಲಿ, ಕೊಲೆ ಬೆದರಿಕೆಯಾಗಲಿ ಅಂತಹ ಕಾನೂನು ಉಲ್ಲಂಘಿಸುವ ರೀತಿ ಪ್ರತಿಭಟನೆ ಮಾಡಿಲ್ಲ. ಆದರೆ ನಮ್ಮ ಮೇಲೆ ನಾಲ್ಕಾರು ಪ್ರಕರಣಗಳನ್ನು ದಾಖಲು ಮಾಡಿರುವುದನ್ನು ಸರ್ಕಾರ ಹಿಂಪಡೆಯಬೇಕು’ ಎಂದು ಯಡೇಹಳ್ಳಿ ಆರ್. ಮಂಜುನಾಥ್ ಸಚಿವರಲ್ಲಿ ಮನವಿ ಮಾಡಿದರು.
ಈ ಬಗ್ಗೆ ಶಾಸಕ ಸಿಮೆಂಟ್ ಮಂಜು ವಿಧಾನ ಸಭೆಯಲ್ಲಿಯೂ ಪ್ರಸ್ತಾಪಿಸಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಈ ಬಗ್ಗೆ ಕಾನೂನಾತ್ಮಕವಾಗಿ ಪರಿಶೀಲನೆ ನಡೆಸಿ ಒಂದು ತೀರ್ಮಾನಕ್ಕೆ ಬರಲಾಗುವುದು ಎಂದು ಕೃಷ್ಣ ಬೈರೇಗೌಡ ಹೇಳಿದರು.
ಶಾಸಕ ಸಿಮೆಂಟ್ ಮಂಜು, ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮುರುಳಿ ಮೋಹನ್, ಮಲೆನಾಡು ರಕ್ಷಣಾ ಸೇನೆ ರಾಜ್ಯ ಅಧ್ಯಕ್ಷ ಸಾಗರ್ ಜಾನೇಕೆರೆ, ಕರವೇ ಪ್ರವೀಣ್‌ಶೆಟ್ಟಿ ಬಣದ ಅಧ್ಯಕ್ಷ ರಮೇಶ್, ರಾಜ್ಯ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ಬೆಕ್ಕನಹಳ್ಳಿ ನಾಗರಾಜ್, ಪ್ರಧಾನ ಕಾರ್ಯದರ್ಶಿ ಟಿ.ಪಿ. ಸುರೇಂದ್ರ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.