ADVERTISEMENT

ಹಾಸನ: ಖರೀದಿ ಕೇಂದ್ರಗಳಿಗೆ ತರಲು ಉತ್ಪನ್ನವೇ ಇಲ್ಲ

ಜನವರಿ 1 ರಿಂದ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಭತ್ತ ಖರೀದಿ: ಡಿ.1 ರಿಂದ ನೋಂದಣಿ ಆರಂಭ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2024, 7:45 IST
Last Updated 16 ಡಿಸೆಂಬರ್ 2024, 7:45 IST
<div class="paragraphs"><p>ಹಿರೀಸಾವೆ ಹೋಬಳಿಯಲ್ಲಿ ಮಳೆಯ ಹೊಡೆತದಿಂದ ರಾಗಿ ಕಾಳು ಉದುರಿದೆ.</p></div>

ಹಿರೀಸಾವೆ ಹೋಬಳಿಯಲ್ಲಿ ಮಳೆಯ ಹೊಡೆತದಿಂದ ರಾಗಿ ಕಾಳು ಉದುರಿದೆ.

   

ಹಾಸನ: ಒಂದೆಡೆ ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಬೆಳೆಗಳು ಕೈಗೆ ಸಿಗದಂತಹ ವಾತಾವರಣ ನಿರ್ಮಾಣವಾಗಿದೆ. ಇನ್ನೊಂದೆಡೆ ಕನಿಷ್ಠ ಬೆಂಬಲ ಬೆಲೆಯಡಿ ರಾಗಿ, ಜೋಳ, ಭತ್ತವನ್ನು ಖರೀದಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ನಡುವೆ ಖರೀದಿ ಕೇಂದ್ರ ಆರಂಭ ಆಗುವವರೆಗೆ ಉತ್ಪನ್ನಗಳನ್ನು ಸಂರಕ್ಷಣೆ ಮಾಡಿಕೊಳ್ಳುವುದು ರೈತರಿಗೆ ಹೊರೆಯಾಗಿ ಪರಿಣಮಿಸಿದೆ.

ಪ್ರತಿ ಕ್ವಿಂಟಲ್ ರಾಗಿ ₹4,290, ಭತ್ತ ₹2,300, ಬಿಳಿ ಜೋಳ ₹3,321 ಬೆಂಬಲ ಬೆಲೆಯಲ್ಲಿ ಜಿಲ್ಲೆಯ 38 ಖರೀದಿ ಕೇಂದ್ರಗಳ ಮೂಲಕ ಜನವರಿ 1 ರಿಂದ ಮಾರ್ಚ್ 31ರ ವರೆಗೆ ರಾಗಿ, ಭತ್ತ, ಬಿಳಿಜೋಳ ಖರೀದಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಡಿಸೆಂಬರ್‌ 1 ರಿಂದ ನೋಂದಣಿ ಶುರುವಾಗಿದೆ.

ADVERTISEMENT

ಇದೆಲ್ಲದರ ಮಧ್ಯೆ ಅಕಾಲಿಕವಾಗಿ ಸುರಿದ ಮಳೆ ಹಾಗೂ ಕಾಡಾನೆಗಳ ಹಾವಳಿಯಿಂದ ಭತ್ತ ಹಾಗೂ ಜೋಳದ ಬೆಳೆಗಳು ಕೈಗೆ ಸಿಗದಂತಾಗಿವೆ. ಮಳೆಯಿಂದಾಗಿ ಭತ್ತದ ಗದ್ದೆಗಳೇ ಕೊಚ್ಚಿ ಹೋಗಿವೆ. ಇನ್ನೊಂದೆಡೆ ಕಾಡಾನೆಗಳು ನಿರಂತರ ದಾಳಿ ಮಾಡುತ್ತಿರುವುದರಿಂದ ಭತ್ತದ ಗದ್ದೆಗಳು ಹಾಳಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಇನ್ನೂ ಒಂದು ತಿಂಗಳು ಬೆಳೆಗಳನ್ನು ಸಂರಕ್ಷಿಸುವುದು ಹೇಗೆ ಎನ್ನುವ ಪ್ರಶ್ನೆ ರೈತರದ್ದು.

ರಾಗಿ ಬೆಳೆಯುವ ಅರಸೀಕೆರೆ, ಚನ್ನರಾಯಪಟ್ಟಣ ತಾಲ್ಲೂಕುಗಳಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಅಧಿಕ ಉಷ್ಣಾಂಶ ದಾಖಲಾಗಿದ್ದು, ರಾಗಿ ಪೈರು ಒಣಗಲು ಆರಂಭಿಸಿತ್ತು. ಈ ಭಾಗದಲ್ಲಿ ಮಳೆ ಆಶ್ರಯದಲ್ಲಿ ಜುಲೈನಿಂದ ನವೆಂಬರ್‌ವರೆಗೆ ರಾಗಿ, ಜೋಳ, ಅವರೆ ಬೆಳೆಗಳನ್ನು ರೈತರು ಬೆಳೆಯುತ್ತಾರೆ. ಜುಲೈ ಕೊನೆಯ ವಾರ ಮತ್ತು ಆಗಸ್ಟ್ ಮೊದಲ ವಾರದಲ್ಲಿ ಬಿದ್ದ ಮಳೆಗೆ ಶೇ 90ರಷ್ಟು ರೈತರು ದೀರ್ಘಾವಧಿಯ ರಾಗಿ ಬಿತ್ತನೆ ಮಾಡಿದ್ದರು. ಸೆಪ್ಟೆಂಬರ್‌ನಲ್ಲಿ ಮಳೆಯಾಗದೇ ಕೆಲವು ರೈತರು ರಾಗಿ, ಹುರಳಿ ಬಿತ್ತನೆ ಮಾಡಲು ಆಗಿಲ್ಲ.

ಅಲ್ಪಾವಧಿ ರಾಗಿ ಬಿತ್ತನೆ ಮಾಡಲು ಹೊಲವನ್ನು ಸಿದ್ದತೆ ಮಾಡಿಕೊಂಡು ರೈತರು ಮಳೆಗೆ ಕಾಯುತ್ತಿದ್ದರು. ಕೊಳವೆಬಾವಿಯಲ್ಲಿ ಹೆಚ್ಚು ನೀರು ಇರುವ ಕೆಲವು ರೈತರು, ರಾಗಿ ಬೆಳೆಗೆ ತುಂತುರು ನೀರಾವರಿ ಮೂಲಕ ನೀರು ಹಾಯಿಸಿ, ಪೈರು ರಕ್ಷಣೆ ಮಾಡಿಕೊಂಡರು.

ಆದರೆ, ಹದವಾದ ಮಳೆಯಾಗಿದ್ದರೆ, ಈ ಸಮಯಕ್ಕೆ ರಾಗಿ ಪೈರು ಬೆಳೆದು ರಾಗಿ ತೆನೆ ಹೊರಡಬೇಕಿತ್ತು. ಮಳೆ ಬೀಳದೇ ರಾಗಿ ಪೈರು ಬೆಳವಣಿಗೆಯಲ್ಲಿ ಕುಂಠಿತವಾಗಿದೆ’ ಎಂದು ರೈತರು ಹೇಳುತ್ತಿದ್ದಾರೆ.

ಹಿರೀಸಾವೆ ಹೋಬಳಿಯಲ್ಲಿ 3,900 ಹೆಕ್ಟೇರ್ ಭೂಮಿಯಲ್ಲಿ ವಿವಿಧ ತಳಿಯ ರಾಗಿಯನ್ನು ಮತ್ತು 300 ಹೆಕ್ಟೇರ್  ಪ್ರದೇಶದಲ್ಲಿ ಜೋಳವನ್ನು ರೈತರು ಬಿತ್ತನೆ ಮಾಡಿದ್ದಾರೆ. ಮಳೆ ಬಂದರೆ ಉತ್ತಮ ರಾಗಿ ಫಸಲು ಬರುತ್ತದೆ’ ಎಂದು ಹಿರೀಸಾವೆ ರೈತ ಸಂಪರ್ಕ ಕೇಂದ್ರ ಅಧಿಕಾರಿ ಜಾನ್ ತಾಜ್ ಹೇಳುತ್ತಾರೆ.

ಇನ್ನೊಂದೆಡೆ ಜೋಳ ಬಿತ್ತನೆ ಮಾಡಿದ ಸುಮಾರು ನಾಲ್ಕು ತಿಂಗಳ ನಂತರ ತೆನೆಗಳನ್ನು ಕಟಾವು ಮಾಡಬೇಕು. ಬಿತ್ತನೆ ಮಾಡಿದ ಸಂದರ್ಭದಲ್ಲಿ ಭಾರಿ ಮಳೆಗೆ ತುತ್ತಾಯಿತು. ನಂತರದ ದಿನಗಳಲ್ಲಿ ಅಳಿದುಳಿದು ಹುಟ್ಟಿದ ಗಿಡಗಳಿಗೆ ರೋಗ ರುಜಿನಗಳು ಎದುರಾಯಿತು. ಗೊಬ್ಬರ, ಕೀಟನಾಶಕಗಳನ್ನು ಸಿಂಪಡಿಸಿ ಗಿಡಗಳನ್ನು ಉಳಿಸಿಕೊಂಡರು. ಕೆಲ ರೈತರು ಕಟಾವು ಮಾಡಿದಾಗ ತುಂತುರು ಮಳೆಯಾಗಿ ಜೋಳ ತೋಯ್ದಿತ್ತು. ಕಾಳು ಬಿಡಿಸಲು ಸಾಧ್ಯವಾಗದೇ ಇದ್ದಲ್ಲೆ ಬೂಸಲಾಗಿ ಬಲೆಗಟ್ಟುತ್ತಿದೆ.

ಸೆಪ್ಟೆಂಬರ್‌ನಲ್ಲಿ ಮಳೆ ಕೊರತೆಯಿಂದ ರಾಗಿ ಪೈರು ಒಣಗಿರುವುದು.
ಕಟಾವು ಮಾಡಿ ಇಟ್ಟಿರುವ ಜೋಳದ ತೆನೆಗಳು.

ನೋಂದಣಿ ಆರಂಭ ಬೆಂಬಲ ಬೆಲೆಯಡಿ ರೈತರ ಉತ್ಪನ್ನಗಳ ಖರೀದಿಗೆ ಜಿಲ್ಲೆಯ 38 ಹೋಬಳಿ ಕೇಂದ್ರಗಳಲ್ಲಿ ಡಿ.1 ರಿಂದ ನೋಂದಣಿ ಕಾರ್ಯ ಪ್ರಾರಂಭ ಮಾಡಲಾಗಿದೆ.

-ಸಿ.ಸತ್ಯಭಾಮಾ ಜಿಲ್ಲಾಧಿಕಾರಿ

ರಾಗಿ ಹುಲ್ಲು ಸಿಗುತ್ತದಷ್ಟೇ ಹದವಾದ ಮಳೆಯಾಗಿದ್ದರೆ ಮಹಾಲಯ ಅಮಾವಾಸ್ಯೆಗೆ ಮೊದಲು ರಾಗಿ ತೆನೆ ಒಡೆಯುತ್ತಿತ್ತು. ಮಳೆಯಾಗದೇ ರಾಗಿ ಬೆಳೆದಿಲ್ಲ. ಈಗ ಮಳೆಯಾದರೆ ಫಸಲು ಕಡಿಮೆಯಾದರೂ ರಾಗಿ ಹುಲ್ಲು ಸಿಗುತ್ತದೆ.

- ಶಿವನಂಜೇಗೌಡ ಮೂಕಿಕೆರೆ ಗ್ರಾಮದ ರೈತ

ಮಳೆ ಇಲ್ಲದೇ ರಾಗಿ ಹಾಳು ದೀರ್ಘಾವಧಿಯ ತಳಿಗಳನ್ನು ಬಿತ್ತನೆ ಮಾಡಿದ್ದ ಹೊಲಗಳಲ್ಲಿ ರಾಗಿ ಪೈರಿಗೆ ಈಗ ಮಳೆ ಅತ್ಯಗತ್ಯವಾಗಿ ಬೇಕಿದೆ. ಅಲ್ಪಾವಧಿ ರಾಗಿ ಬಿತ್ತನೆ ಮಾಡಲು ರೈತರು ಹಿಂದೇಟು ಹಾಕುವಂತಾಗಿದೆ.

-ರಾಮಕೃಷ್ಣ ಹಿರೀಸಾವೆಯ ರೈತ

ಮೊಳಕೆ ಒಡೆಯುತ್ತಿರುವ ತೆನೆ ಕಟಾವು ಮಾಡಿದ ಜೋಳವನ್ನು ಬಿಡಿಸಿ ಒಣಗಿಸಲಾಗದೇ ಮನೆಯಲ್ಲಿ ಶೇಖರಿಸಿಟ್ಟಿರುವುದರಿಂದ ದಿನದಿಂದ ದಿನಕ್ಕೆ ಫಂಗಸ್ ಬರುತ್ತಿದ್ದು ಮೊಳಕೆ ಒಡೆಯುತ್ತಿದೆ.

- ದರ್ಶನ್‌ ಮರಸು ಹೊಸಳ್ಳಿ ಆಲೂರು ತಾಲ್ಲೂಕು.

ಸರ್ಕಾರ ನೆರವಿಗೆ ಧಾವಿಸಲಿ ಹವಾಮಾನ ಸ್ಥಿರವಾಗಿದ್ದರೆ ಮಾತ್ರ ರೈತರು ಬೆಳೆ ಉಳಿಸಿಕೊಳ್ಳಲು ಸಾಧ್ಯ. ಪ್ರಸಕ್ತ ವರ್ಷ ಅತಿವೃಷ್ಟಿಯಿಂದ ರೈತರಿಗೆ ಯಾವ ಬೆಳೆಯೂ ಕೈಹಿಡಿದಿಲ್ಲ. ಸರ್ಕಾರ ರೈತರ ನೆರವಿಗೆ ನಿಲ್ಲಬೇಕಾಗಿದೆ.

-ಬಸವರಾಜು ರಾಜನಶಿರಿಯೂರು ರೈತ

ರೈತರ ಬಳಿ ಉತ್ಪನ್ನ ಇಲ್ಲ ನಿಯಮನುಸಾರವಾಗಿ ಬೆಳೆಹಾನಿ ಪರಿಶೀಲನೆ ನಡೆದಿಲ್ಲ. ಹಾಗಾಗಿ ಈ ಬಾರಿ ಬೆಳೆಹಾನಿಗೆ ಪರಿಹಾರ ದೊರಕುವುದು ಸಂದೇಹ. ಈಗ ಖರೀದಿ ಕೇಂದ್ರಗಳನ್ನು ಆರಂಭಿಸಿದರೂ ಮಾರಾಟ ಮಾಡಲು ರೈತರ ಬಳಿ ಉತ್ಪನ್ನಗಳೇ ಇಲ್ಲ.

-ಭೋಗಮಲ್ಲೇಶ್ ರೈತ ಸಂಘದ ಬೇಲೂರು ತಾಲ್ಲೂಕು ಘಟಕದ ಅಧ್ಯಕ್ಷ

ಉತ್ಪನ್ನಗಳ ಮಾರಾಟ ಬೆಳೆ ಪರಿಹಾರದ ವಿಷಯದಲ್ಲಿ ನಷ್ಟವಾಗಿರುವ ಮೊತ್ತಕ್ಕೂ ಪರಿಹಾರ ನೀಡುವ ಮೊತ್ತಕ್ಕೂ ವ್ಯತ್ಯಾಸವಿರುತ್ತದೆ. ಈಗ ಬೆಂಬಲ ಬೆಲೆಯಡಿ ಖರೀದಿ ಆರಂಭಿಸಲಾಗಿದೆ. ಉತ್ಪನ್ನ ಸಂರಕ್ಷಿಸಲಾಗದೇ ಹಲವು ರೈತರು ಈಗಾಗಲೇ ಮಾರಾಟ ಮಾಡಿದ್ದಾರೆ.

-ನರೇಂದ್ರ ಸನ್ಯಾಸಿಹಳ್ಳಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.