ADVERTISEMENT

ಹಾಸನ: ಭಯಬೇಡ, ಸಾಮಾನ್ಯ ಜ್ವರದಂತೆ ಕೋವಿಡ್‌

ಕೊರೊನಾ ಜಯಸಿ ಬಂದಿರುವ ಗೃಹಿಣಿ ಗೌರಿ ಮನದಾಳ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 14:38 IST
Last Updated 16 ಜುಲೈ 2020, 14:38 IST
ಕೋವಿಡ್‌ ಗೆದ್ದು ಬಂದ ಅರಕಲಗೂಡು ತಾಲ್ಲೂಕು ನಿಂಗಾಪುರ ಗ್ರಾಮದ ಗೌರಿ ಅವರನ್ನು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಚ್‌.ಜಿ.ಕಾಂತಮಣಿ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.
ಕೋವಿಡ್‌ ಗೆದ್ದು ಬಂದ ಅರಕಲಗೂಡು ತಾಲ್ಲೂಕು ನಿಂಗಾಪುರ ಗ್ರಾಮದ ಗೌರಿ ಅವರನ್ನು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಚ್‌.ಜಿ.ಕಾಂತಮಣಿ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.   

ಹಾಸನ: ‘ಕೋವಿಡ್‌ ಕಾಯಿಲೆ ಎಂಬುದು ಸಾಮಾನ್ಯ ಜ್ವರ ಇದ್ದಂತೆ. ಪಾಸಿಟಿವ್‌ ಅಂತ ಗೊತ್ತಾದಾಗ ಧೃತಿಗೆಡದೆ, ಧೈರ್ಯ ತಂದುಕೊಳ್ಳಬೇಕು. ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಸಂಪೂರ್ಣ ಗುಣಮುಖಳಾಗಿ ಸಹಜ ಜೀವನ ನಡೆಸುತ್ತಿದ್ದೇನೆ..’

ಇದು ಕೋವಿಡ್‌ ಗೆದ್ದು ಬಂದ ಅರಕಲಗೂಡು ತಾಲ್ಲೂಕಿನ ನಿಂಗಾಪುರ ಗ್ರಾಮದ 24 ವರ್ಷದ ಗೌರಿ ಅವರ ಆತ್ಮವಿಶ್ವಾಸದ ನುಡಿ.

‘ಕುಟುಂಬ ಸಮೇತ ಮುಂಬೈನಿಂದ ಬಸ್‌ನಲ್ಲಿ ತವರಿಗೆ ಮರಳಿದೆವು. ಪತಿ ಹಾಗೂ ಮಗುವಿಗೆ ನೆಗೆಟಿವ್‌ ಬಂತು. ರೋಗ ಲಕ್ಷಣಗಳಾದ ಜ್ವರ, ಶೀತ, ನೆಗಡಿ ಇರಲಿಲ್ಲ. ಸ್ವಲ್ಪ ಕೆಮ್ಮು ಮಾತ್ರ ಇತ್ತು. ಗಂಟಲು ಮಾದರಿ ಪರೀಕ್ಷೆಯಿಂದ ಪಾಸಿಟಿವ್ ಅಂತ ಗೊತ್ತಾದಾಗ ಆರಂಭದ ನಾಲ್ಕೈದು ದಿನ ಭಯ ಇತ್ತು. ಆರೋಗ್ಯ ಕೇಂದ್ರದ ವೈದ್ಯರು, ಕುಟುಂಬದ ಸದಸ್ಯರು ಕರೆ ಮಾಡಿ ಆತ್ಮಸ್ಥೈರ್ಯ ತುಂಬಿದರು’ಎಂದು ಹೇಳಿದರು.

ADVERTISEMENT

‘22 ದಿನ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಸಂಪೂರ್ಣ ಗುಣಮುಖಳಾಗಿದ್ದೇನೆ. ನನ್ನಂತೆ ನೂರಾರು ಮಂದಿ
ಸೋಂಕಿತರು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿ ಜೀವನ ನಡೆಸುತ್ತಿದ್ದಾರೆ. ಹೆದರುವ ಅವಶ್ಯಕತೆ ಇಲ್ಲ’ಎಂದರು.

‘ಕೋವಿಡ್‌ ಕಾಯಿಲೆಗೆ ಅಂತ ವಿಶೇಷ ಚಿಕಿತ್ಸೆ ಏನು ನೀಡಲಿಲ್ಲ. ಆಸ್ಪತ್ರೆ ವೈದ್ಯರು, ನರ್ಸ್‌‌ಗಳು ಔಷಧ ನೀಡುತ್ತಿದ್ದರು.
ಕುಡಿಯಲು, ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ ಇತ್ತು. ಸಮಯಕ್ಕೆ ಸರಿಯಾಗಿ ಉಪಹಾರ, ಊಟ ಜೊತೆಗೆ ಮೊಟ್ಟೆ, ಹಾಲು, ಪೌಷ್ಟಿಕ ಆಹಾರ ಕೊಡುತ್ತಿದ್ದರು. ಸಂಪೂರ್ಣ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ಬಂದ ನಂತರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿಲ್ಲ. ಕುಟುಂಬದ ಸದಸ್ಯರು ಸಹ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ’ಎಂದು ತಿಳಿಸಿದರು.

‘ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಆಗಾಗ ಕೈಗಳನ್ನು ಸೋಪಿನಿಂದ ತೊಳೆಯಬೇಕು. ಅಂತರ ಪಾಲನೆ ಮಾಡಬೇಕು. ಮಾಸ್ಕ್‌ ಕಡ್ಡಾಯವಾಗಿ ಧರಿಸಬೇಕು. ಗುಂಪು ಇರುವ ಕಡೆ ಸೇರಬಾರದು. ರೋಗ ಲಕ್ಷಣಗಳಿದ್ದರೆ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆದು ಆರೋಗ್ಯವಂತ ಜೀವನ ನಡೆಸಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.