ಹೊಳೆನರಸೀಪುರ: ಯುಗಾದಿ ಹಬ್ಬದ ದಿನವಾದ ಭಾನುವಾರ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಮುಂದೆ ಹನುಮಂತೋತ್ಸವ, ಕಡ್ಲೆಕಾಯಿ ಪರಸೆ ಹಾಗೂ ಹೊನ್ನಿನ ಕುಡಿಕೆ ಹೊಡೆಯುವ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನಡೆದವು.
ಯುಗಾದಿ ಅಂಗವಾಗಿ ಲಕ್ಷ್ಮೀನರಸಿಂಹಸ್ವಾಮಿಗೆ ಪಂಚಾಮೃತ ಅಭಿಷೇಕ, ಅರ್ಚನೆ, ವಿಶೇಷ ಪೂಜೆ ವಿಧಿ ವಿಧಾನಗಳನ್ನು ನಡೆಸಲಾಯಿತು. ಉತ್ತಾರಾಧಿಮಠದವರು ನೀಡಿರುವ ವಿಶೇಷ ವಜ್ರ ಅಭರಣಗಳಿಂದ ಅಲಂಕರಿಸಿ ನಿತ್ಯಾರಾಧನೆ, ಬಲಿಪ್ರಧಾನಪೂಜೆ, ಕೃಷ್ಣಗಂಧೋತ್ಸವ ನಡೆಸಿದ ನಂತರ ಮಹಾಮಂಗಳಾರತಿ ಮಾಡಿ ಭಕ್ತರಿಗೆ ತೀರ್ಥಪ್ರಸಾದ ನೀಡಿದರು.
ಗೋಧೂಳಿ ಲಗ್ನದಲ್ಲಿ ನಡೆಯುವ ಹನುಮಂತೋತ್ಸವ ಪ್ರಯುಕ್ತ ವಿವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಿದ್ದ ಲಕ್ಷ್ಮೀನರಸಿಂಹನ ಉತ್ಸವ ಮೂರ್ತಿಗಳನ್ನು ರಥಬೀದಿಯಲ್ಲಿ ಉತ್ಸವ ನಡೆಸಿ ಪೂಜಿಸಲಾಯಿತು.
ನಂತರ ಕಡ್ಲೆಕಾಯಿಯನ್ನು ದೇವರ ಮೂರ್ತಿಯ ಮೇಲೆ ಎರಚುತ್ತಾ ಸ್ವಾಮಿಯ ಅಡ್ಡೆಯನ್ನು ಹೊತ್ತು ನೂರಾರು ಭಕ್ತರು ಹನುಮಂತನ ಉತ್ಸವವನ್ನು ರಥಬೀದಿಯಲ್ಲಿ ಸಾಗಿದರು. ಉತ್ಸವದಲ್ಲಿ ಭಾಗಿಯಾಗಿದ್ದ ಭಕ್ತರು ಹನುಮಂತ ಮೇಲೆ ಎಸೆದ ಕಡ್ಲೆಕಾಯಿಯನ್ನು ಆಯ್ದುಕೊಂಡು ಪ್ರಸಾದದ ರೂಪದಲ್ಲಿ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಹನುಮೋತ್ಸವಕ್ಕೆ ಮುನ್ನ ಆಂಜನೇಯ ದೇವಾಲಯದ ಮುಂದೆ ಮೇಲಕ್ಕೆ ಕಟ್ಟಲಾಗಿದ್ದ ಹೊನ್ನಿನ ಮಡಕೆ ಹೊಡೆದು ಅದರಲ್ಲಿನ ಹಣವನ್ನು ತಮ್ಮದಾಗಿಸಿಕೊಳ್ಳಲು ಯುವಕರ ಗುಂಪುಗಳು ಪ್ರಯತ್ನಪಟ್ಟು ಯಶಸ್ವಿಯಾದರು.
ಎಸ್‍ಎಲ್‍ಎನ್‍ಸಿ ಸಂಘದ ಯುವಕರು ಹನುಮಂತೋತ್ಸವ ಆಚರಿಸಿಕೊಂಡು ಬರುತ್ತಿದ್ದು, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಪುರಸಭಾಧ್ಯಕ್ಷ ಎಚ್.ಕೆ.ಪ್ರಸನ್ನ, ಸೇರಿದಂತೆ ಸಾವಿರಾರು ಭಕ್ತರು ಭಾಗಿಗಳಾಗಿ ಸಂಭ್ರಮಿಸಿದರು.
ಯುಗಾದಿ ಅಂಗವಾಗಿ ಅಯ್ಯಪ್ಪಸ್ವಾಮಿ, ಲಕ್ಷ್ಮಣೇಶ್ವರ, ಯಲ್ಲಮ್ಮ, ಕನ್ನಿಕಾಪರಮೇಶ್ವರಿ, ಚೌಡೇಶ್ವರಿ ದೇವಾಲಯ ಹಾಗೂ ರಾಘವೇಂದ್ರ ಮಠಗಳಲ್ಲಿ ವಿಶೇಷ ಪೂಜೆಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.