ಹಾಸನ: ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದು ಮತ್ತೊಮ್ಮೆ ಬಯಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ವಹಿಸಿಕೊಂಡ ನಂತರ ಪ್ರಥಮ ಬಾರಿಗೆ ಜಿಲ್ಲೆಯ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಲು ಬಂದಿದ್ದ ಸಚಿವ ಕೃಷ್ಣ ಬೈರೇಗೌಡರ ಎದುರೇ ಕಾರ್ಯಕರ್ತರು, ಮುಖಂಡರು ತಮ್ಮ ಅಸಮಾಧಾನ ಹೊರಹಾಕಿದರು.
ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ರೆಸಾರ್ಟ್‍ನಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಎಐಸಿಸಿ ಸದಸ್ಯ ಬಿ.ಶಿವರಾಂ, ‘ಅನುದಾನವನ್ನು ಹೆಚ್ಚಾಗಿ ಅರಸೀಕೆರೆಗೆ ಕೊಡುವುದಲ್ಲ. ಕಾಂಗ್ರೆಸ್ ಪಕ್ಷಕ್ಕೆ ಜಿಲ್ಲೆಯ ಎಲ್ಲ ಕ್ಷೇತ್ರಗಳ ಮತದಾರರೂ ಮತ ಹಾಕಿದ್ದಾರೆ’ ಎಂದು ಪರೋಕ್ಷವಾಗಿ ಶಾಸಕ ಕೆ.ಎಂ.ಶಿವಲಿಂಗೇಗೌಡರ ವಿರುದ್ಧ ಅಸಮಾಧಾನ ಹೊರಹಾಕಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೆ.ಎಂ.ಶಿವಲಿಂಗೇಗೌಡ, ‘ನನ್ನ ಕ್ಷೇತ್ರಕ್ಕೆ ಅನುದಾನ ಎಲ್ಲಿಂದ ತಂದೆ ಎಂಬುದು ನನಗೆ ಗೊತ್ತು. ಅದೆಲ್ಲವನ್ನು ಇಲ್ಲಿ ಹೇಳಲು ಆಗಲ್ಲ. ದಯವಿಟ್ಟು ಯಾರೂ ಯಾರ ಕ್ಷೇತ್ರಕ್ಕೂ ಬರಬೇಡಿ. ಹಸ್ತಕ್ಷೇಪ ಮಾಡಬೇಡಿ. ನಾನಂತೂ ಬೇಲೂರಿಗೆ ಬರುವುದಿಲ್ಲ/ ಆಯಾಯ ಕ್ಷೇತ್ರಗಳಲ್ಲಿ ಅವರವರು ಕೆಲಸ ಮಾಡಿಕೊಳ್ಳಲು ಬಿಟ್ಟು ಬಿಡಿ’ ಎಂದು ಹೇಳಿದರು.
‘ಅರಸೀಕೆರೆಯಲ್ಲಿ ಮೂಲ ಕಾಂಗ್ರೆಸಿಗರನ್ನು ಕಡೆಗಣಿಸುತ್ತಿದ್ದೀರಿ’ ಎಂದು ಶಿವರಾಂ ಬಣದವರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿವಲಿಂಗೇಗೌಡ, ‘ನಾನೂ ಯುವ ಕಾಂಗ್ರೆಸ್ ಅವಧಿಯಿಂದಲೂ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ನಾನೂ ಮೂಲ ಕಾಂಗ್ರೆಸ್ಸಿಗ. ನಂಜೇಗೌಡರು ಟಿಕೆಟ್ ನೀಡಲಿಲ್ಲ ಎಂದು ಬೇರೆ ಪಕ್ಷಕ್ಕೆ ಹೋಗಿದ್ದೆ’ ಎಂದು ಸ್ಪಷ್ಟನೆ ನೀಡಿದರು.
ಸಭೆಯಲ್ಲಿ ಮಾತನಾಡಿದ ಹಲವು ಮುಖಂಡರು, ‘ಸರ್ಕಾರದ ವಿವಿಧ ಸಮಿತಿಗಳಿಗೆ ಪಕ್ಷಕ್ಕೆ ದುಡಿದಿರುವ ಮುಖಂಡರನ್ನು ನಾಮನಿರ್ದೇಶನ ಮಾಡಬೇಕು. ಎರಡೂವರೆ ವರ್ಷಗಳಿಂದ ಖಾಲಿ ಇರುವ ಹುಡಾ ಅಧ್ಯಕ್ಷ ಸ್ಥಾನಕ್ಕೆ ಯಾರನ್ನೇ ನೇಮಕ ಮಾಡಿದರೂ, ಶೀಘ್ರ ನೇಮಿಸಿ. ಹುಡಾ ವಿಚಾರದಲ್ಲಿ ನಡೆಯಬಾರದ ಬೆಳವಣಿಗೆ ನಡೆಯುತ್ತಿದ್ದು, ಇದಕ್ಕೆ ಪೂರ್ಣವಿರಾಮ ನೀಡಿ’ ಎಂದು ಮನವಿ ಮಾಡಿದರು.
ಸಂಸದ ಶ್ರೇಯಸ್ ಪಟೇಲ್, ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ್, ಮಾಜಿ ಶಾಸಕರಾದ ಸಿ.ಎಸ್.ಪುಟ್ಟೇಗೌಡ, ಎಂ.ಎ. ಗೋಪಾಲಸ್ವಾಮಿ, ಮುಖಂಡರಾದ ದೇವರಾಜೇಗೌಡ, ಎಚ್.ಕೆ. ಮಹೇಶ್, ಡಿ.ಸಿ.ಸಣ್ಣಸ್ವಾಮಿ, ಬಾಗೂರು ಮಂಜೇಗೌಡ, ಶಂಕರ್, ಎಚ್.ಎಸ್. ವಿಜಯಕುಮಾರ್, ಬನವಾಸೆ ರಂಗಸ್ವಾಮಿ, ಶ್ರೀಧರ್‌ಗೌಡ, ಎಂ.ಟಿ.ಕೃಷ್ಣೇಗೌಡ, ವೈ.ಎನ್.ಕೃಷ್ಣೇಗೌಡ, ಬೈರಮುಡಿ ಚಂದ್ರು, ಪ್ರಸನ್ನ ಕುಮಾರ್, ಬಾಚಿಹಳ್ಳಿ ಪ್ರದೀಪ್ ಗೌಡ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.