ಅರಸೀಕೆರೆ: ಆಶ್ರಯ ಮನೆಗಳ ಬೇಡಿಕೆ, ನಗರದ ಸರ್ಕಾರಿ ಆಸ್ಪತ್ರೆಯ ದುಸ್ಥಿತಿ, ಹಕ್ಕುಪತ್ರ, ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ, ಕೃಷಿಗೆ ಸಮರ್ಪಕ ವಿದ್ಯುತ್, ರೈತರ ಸಾಗುವಳಿ ಭೂಮಿಗೆ ಅರಣ್ಯ ಅಧಿಕಾರಿಗಳ ತೊಂದರೆ, ಸಿಸಿ ರಸ್ತೆ, ಜಮೀನುಗಳ ದುರಸ್ತಿ ಸೇರಿದಂತೆ ಹತ್ತು ಹಲವು ಸಮಸ್ಯೆಗಳು ಜನಸಂಪರ್ಕ ಸಭೆಯಲ್ಲಿ ಅನಾವರಣಗೊಂಡವು.
ನಗರದ ತಾಲ್ಲೂಕು ಕಚೇರಿಯ ಆವರಣದಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ದೂರುಗಳಿಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಸ್ಥಳದಲ್ಲೇ ಪರಿಹಾರ ಸೂಚಿಸಲಾಯಿತು. ಕೆಲವು ಸಮಸ್ಯೆಗಳನ್ನು ಪರಿಶೀಲಿಸಿ, ಮುಂದಿನ ಸಭೆಯೊಳಗೆ ಸಮಸ್ಯೆಗಳನ್ನು ಇತ್ಯರ್ಥ ಮಾಡಬೇಕೆಂದು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಶಾಸಕ ಶಿವಲಿಂಗೇಗೌಡ ಸೂಚನೆ ನೀಡಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಕಾಲಕ್ಕೆ ಆಂಬುಲೆನ್ಸ್ ಸೇವೆ, ರಾತ್ರಿಯ ವೇಳೆ ರೋಗಿಗಳಿಗೆ ಸಿಗದ ಸೇವೆ ಸೇರಿದಂತೆ ಕೆಲವು ದೂರುಗಳು ಬಂದವು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು, ಮುಂದಿನ ದಿನಗಳಲ್ಲಿ ಪುನರಾವರ್ತನೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದರು.
ಶ್ಯಾನೆಗೆರೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ರಂಗನಾಯ್ಕನಕೊಪ್ಪಲು ಗ್ರಾಮಸ್ಥರು ವಾಸವಿರುವ 80 ಮನೆಗಳಿಗೆ ಹಕ್ಕುಪತ್ರಗಳನ್ನು ವಿತರಿಸಲು ಪಿಡಿಒಗಳಿಗೆ ಸರ್ವೆ ನಡೆಸಿ ಸೂಚಿಸಲಾಯಿತು. ಗ್ರಾಮೀಣ ಭಾಗದ ಫಾರ್ಮ್ ಹೌಸ್‌ಗಳಿಗೆ ನಿರಂತರ ಜ್ಯೋತಿ ಯೋಜನೆಯನ್ನು ಕ್ಷೇತ್ರದ ಎಲ್ಲ ಗ್ರಾಮಗಳಿಗೆ ನೀಡಬೇಕು. ಇದರ ಬಗ್ಗೆ ಎಇಒ ಮಂಜುನಾಥ್ ಅವರಿಗೆ ಪಟ್ಟಿ ಕೊಡಿ, ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದರು.
ಗ್ಯಾರಘಟ್ಟ ಗ್ರಾಮದ ಗ್ರಾಮಸ್ಥರು ನೂರಾರು ವರ್ಷದಿಂದ ಉಳುಮೆ ಮಾಡುತ್ತಿರುವ ಜಮೀನುಗಳ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ತೊಂದರೆ ನೀಡಲಾಗುತ್ತಿದೆ. ರೈತರ ಜೀವನೋಪಾಯ ಈ ಭೂಮಿಗಳಿಂದ ನಡೆಯುತ್ತಿದ್ದು, ರೈತರಿಗೆ ಅನೂಕೂಲ ಮಾಡಿಕೊಡಬೇಕು. ಜಮೀನು ದಾಖನೆ ಸರಿಪಡಿಸಲು ಅಧಿಕಾರಿ ಹೇಮಂತ್ ಅವರಿಗೆ ಸೂಚನೆ ನೀಡಿದರು.
ತಹಶೀಲ್ದಾರ್ ಎಂ.ಜಿ. ಸಂತೋಷ್‌ಕುಮಾರ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಸತೀಶ್, ನಗರಸಭಾ ಅಧ್ಯಕ್ಷ ಎಂ.ಸಮೀವುಲ್ಲಾ, ಉಪಾಧ್ಯಕ್ಷ ಮನೋಹರ್ ಮೇಸ್ತ್ರೀ, ಗ್ಯಾರಂಟಿ ಯೋಜನಾ ಸಮಿತಿಯ ಅಧ್ಯಕ್ಷ ಧರ್ಮಶೇಖರ್ ಗೀಜಿಹಳ್ಳಿ, ನಗರಸಭೆ ಸದಸ್ಯರಾದ ಗಣೇಶ್, ದರ್ಶನ್, ಮುಖಂಡರಾದ ಬೆಳಗುಂಬ ಜಯಣ್ಣ, ಮಂಜುಳಾಬಾಯಿ, ಗ್ಯಾರಂಟಿ ಸಮಿತಿಯ ಸದಸ್ಯರಾದ ಪ್ರದೀಪ್ ಜಾಜೂರು, ಸಿದ್ದೇಶ್, ಕಮಲಮ್ಮ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.