
ಹಾಸನ: ಯಾವುದೇ ತರಕಾರಿಗಳು ಆರೋಗ್ಯಕರವಾಗಿ ಬೆಳೆಯಬೇಕಾದರೆ ಮಣ್ಣಿನ ಸತ್ವ ಬಹಳ ಮುಖ್ಯವಾದದ್ದು. ಸಗಣಿ ಗೊಬ್ಬರ, ಎರೆಹುಳು ಗೊಬ್ಬರ, ಪಂಚಗವ್ಯ ಇತ್ಯಾದಿಗಳಿಂದ ತರಕಾರಿಗಳನ್ನು ಚೆನ್ನಾಗಿ ಬೆಳೆದುಕೊಳ್ಳಬಹುದು ಎಂದು 86 ವರ್ಷದ ಎಂ.ಕೆ. ಕೃಷ್ಣಪ್ಪ ಸಲಹೆ ನೀಡಿದರು.
ನಗರದ ಕೆ.ಆರ್. ಪುರಂನ ರೆಡ್ ರೋಸ್ ಮನೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಪುಣ್ಯಭೂಮಿ ಮತ್ತು ಲಯನ್ಸ್ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಸಿರ ಸಿಂಗಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಣ್ಣಿನಲ್ಲಿ ಜೀವ ಇದೆ. ಸಸ್ಯಗಳಲ್ಲೂ ಸಂವೇದನೆ ಇದೆ. ನಾವು ಪ್ರೀತಿಯಿಂದ ತೊಡಗಿಸಿಕೊಂಡಾಗ ಅದರ ಪ್ರತಿಫಲವೇ ಬೇರೆ. ಮಣ್ಣಿನ ಸತ್ವ ಉತ್ತಮವಾಗಿದ್ದರೆ ತರಕಾರಿಗಳಿಗೆ ವಿಷಗಳನ್ನು ಸಿಂಪಡಿಸುವ ಅಗತ್ಯವಿಲ್ಲ ಎಂದರು.
ಆತಿಥ್ಯ ವಹಿಸಿ ಮಾತನಾಡಿದ ಪ್ರಗತಿಪರ ರೈತ ಮಹಿಳೆ ಹೇಮಾ ಅನಂತ್, ನಗರವಾಸಿಗಳು ತಮ್ಮ ಮನೆಯ ತ್ಯಾಜ್ಯವನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಂಡು ಮನೆಗಳ ಆಸುಪಾಸಿನಲ್ಲಿ ವಿಭಿನ್ನವಾದ ತರಕಾರಿಗಳನ್ನು ಜೈವಿಕ ಪದ್ಧತಿಯಲ್ಲಿ ಬೆಳೆದುಕೊಳ್ಳಬಹುದು ಎಂದು ಹೇಳಿದರು.
ನಾನು ನಮ್ಮ ಮನೆಯಲ್ಲಿ ಸೃಷ್ಟಿಯಾಗುವ ತ್ಯಾಜ್ಯವನ್ನು ಎಂದೂ ಕಸದ ವಾಹನಗಳಿಗೆ ಹಾಕಿಲ್ಲ. ಬದಲಿಗೆ ನಮ್ಮ ಜಾಗದಲ್ಲೇ ಅದನ್ನೆಲ್ಲಾ ಕರಗಿಸಿ, ಸದುಪಯೋಗ ಮಾಡಿಕೊಳ್ಳುತ್ತಿರುವೆ. ಗಿಡಗಳಿಗೆ ಹಾಲು, ಮಜ್ಜಿಗೆ, ಅಕ್ಕಿ ಗಂಜಿ ಇತ್ಯಾದಿಗಳನ್ನು ಸಿಂಪಡಿಸಿ ಉತ್ತಮವಾದ ಪರಿಣಾಮಗಳನ್ನು ಕಂಡಿದ್ದೇನೆ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.
86ನೇ ವರ್ಷದಲ್ಲೂ ಲವಲವಿಕೆಯಿಂದ ಕೃಷಿ ವಿಚಾರಗಳಲ್ಲಿ ತೊಡಗಿಸಿಕೊಂಡಿರುವ ತಮ್ಮ ತಂದೆ ಎಂ.ಕೆ. ಕೃಷ್ಣಪ್ಪ ಮಾರ್ಗದರ್ಶನವನ್ನು ಸ್ಮರಿಸಿಕೊಂಡರು.
ಪುಣ್ಯಭೂಮಿ ಸಂಸ್ಥೆಯ ಮುಖ್ಯಸ್ಥ ಡಾ. ವಿಜಯ್ ಅಂಗಡಿ ಮಾತನಾಡಿ, ನಿತ್ಯವೂ ಪ್ರತಿಯೊಬ್ಬರೂ ಸಸ್ಯಗಳ ಪೋಷಣೆಯಲ್ಲಿ ತೊಡಗಿಸಿಕೊಂಡಾಗ ಜೀವನ ಉಲ್ಲಾಸವಾಗಿರುತ್ತದೆ. ಮನೆಗಳ ಆಸುಪಾಸು ಮತ್ತು ಮನೆಯ ತಾರಸಿಯಲ್ಲಿ ಪ್ರತಿಯೊಬ್ಬರೂ ತರಕಾರಿ, ಹೂವು, ಔಷಧೀಯ ಸಸ್ಯಗಳನ್ನು ಬೆಳೆದುಕೊಳ್ಳಬಹುದು. ಜೇನನ್ನೂ ಸಾಕಿಕೊಳ್ಳಬಹುದು ಎಂದು ತಿಳಿಸಿದರು.
ಲಯನ್ಸ್ ಸಂಸ್ಥೆಯ ಚಂದ್ರೇಗೌಡ, ರಮೇಶ್, ಶಿವಸ್ವಾಮಿ, ಶಿವೇಗೌಡ, ಮಾಲತೇಶ್, ಕುಮಾರಸ್ವಾಮಿ, ವೆಂಕಟೇಗೌಡ, ಪುಟ್ಟಮ್ಮ, ಬಾಲಕೃಷ್ಣ, ಅನಂತ್, ಗಿರಿಜಾಂಬಿಕಾ ಮುಂತಾದವರು ಪಾಲ್ಗೊಂಡಿದ್ದರು.
ಪ್ರಗತಿಪರ ಕೃಷಿಕ ಜಿ.ಎಸ್. ಗಿಡ್ಡೇಗೌಡರು ತಮ್ಮ ತೋಟದಲ್ಲಿ ಬೆಳೆದಿದ್ದ ಬಳ್ಳಿ ಆಲೂಗಡ್ಡೆ, ಮಾಂಗಾಯಿ ಶುಂಠಿ, ಕೋಕೋ ಬೀಜ ಇತ್ಯಾದಿಗಳನ್ನು ತಂದಿದ್ದರು. ಬಂದವರು ಜೈವಿಕ ಉತ್ಪನ್ನಗಳನ್ನು ಪಡೆದುಕೊಂಡರು. ಹೇಮಾ ಅನಂತ್ ಅವರು ಬೆಳೆದಿರುವ ಹತ್ತಾರು ಬಗೆಯ ತರಕಾರಿಗಳನ್ನು ವೀಕ್ಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.