ADVERTISEMENT

‘ಭಾಷೆ, ಸಂಸ್ಕೃತಿ ಉಳಿವಿಗೆ ಕನ್ನಡ ಬಳಸಿ’

ಕನ್ನಡಕ್ಕಾಗಿ ನಾವು ಕರ್ನಾಟಕ ರಾಜ್ಯೋತ್ಸವ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 3:33 IST
Last Updated 25 ಅಕ್ಟೋಬರ್ 2021, 3:33 IST
ಹಾಸನ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ‘ಕನ್ನಡಕ್ಕಾಗಿ ನಾವು, ಕರ್ನಾಟಕ ರಾಜ್ಯೋತ್ಸವ ಅಭಿಯಾನ’ದಲ್ಲಿ ಎಚ್‌.ಆರ್‌. ಉನ್ನತ್ ಮತ್ತು ತಂಡ ನೃತ್ಯ ರೂಪಕ ನಡೆಸಿಕೊಟ್ಟರು
ಹಾಸನ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ‘ಕನ್ನಡಕ್ಕಾಗಿ ನಾವು, ಕರ್ನಾಟಕ ರಾಜ್ಯೋತ್ಸವ ಅಭಿಯಾನ’ದಲ್ಲಿ ಎಚ್‌.ಆರ್‌. ಉನ್ನತ್ ಮತ್ತು ತಂಡ ನೃತ್ಯ ರೂಪಕ ನಡೆಸಿಕೊಟ್ಟರು   

ಹಾಸನ: ‘ನಮ್ಮ ಭಾಷೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ನಿತ್ಯ ಕನ್ನಡ ಬಳಕೆ ಮಾಡುವ ಮೂಲಕ ದೇಶದ ಪ್ರಗತಿಗೆ ಮುಂದಾಗಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಬಿ.ಎ ಪರಮೇಶ್ ತಿಳಿಸಿದರು.

ನಗರದ ಹಾಸನಾಂಬಾ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಕನ್ನಡಕ್ಕಾಗಿ ನಾವು ಕರ್ನಾಟಕ ರಾಜ್ಯೋತ್ಸವ ಅಭಿಯಾನ’ ಉದ್ಘಾಟಿಸಿದ ಅವರು, ‘ನಮ್ಮ ಉಸಿರು ಕನ್ನಡ, ಭಾಷೆ, ನೆಲ, ಜಲ ಸಂರಕ್ಷಿಸುವುದು ಪ್ರತಿಯೊಬ್ಬರ ಹೊಣೆಗಾರಿಕೆ’ ಎಂದರು.

‘ಕನ್ನಡದ ಜತೆ ಇತರೆ ಭಾಷೆಗಳನ್ನು ಗೌರವಿಸಬೇಕು. ವಿದ್ಯಾರ್ಥಿಗಳು ಕನ್ನಡದ ಜತೆಗೆ ಇಂಗ್ಲಿಷ್ ಭಾಷೆಯನ್ನು ಅಭ್ಯಾಸ ಮಾಡುವುದರಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ’ ಎಂದು ಸಲಹೆ ನೀಡಿದರು.

ADVERTISEMENT

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಈ.ಕೃಷ್ಣೇಗೌಡ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆ ಬಳಕೆ ಕಣ್ಮರೆಯಾಗುತ್ತಿದ್ದು, ವಿದ್ಯಾರ್ಥಿಗಳು ಕನ್ನಡದ ಬಗ್ಗೆ ಹೆಚ್ಚು ಒಲವು ತೋರಿ ಸಾಹಿತ್ಯ ಪುಸ್ತಕಗಳನ್ನು ಓದುವ ಮೂಲಕ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸುದರ್ಶನ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಬನುಮ ಗುರುದತ್ತ ಮತ್ತು ತಂಡದಿಂದ ಸುಗಮ ಸಂಗೀತ ಹಾಗೂ ಎಚ್‌.ಆರ್‌. ಉನ್ನತ್ ಮತ್ತು ತಂಡದವರಿಂದ ನೃತ್ಯ ರೂಪಕ ನಡೆಸಿಕೊಡಲಾಯಿತು.

ನಗರಸಭೆ ಅಧ್ಯಕ್ಷ ಆರ್‌.ಮೋಹನ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹಾಕಪ್ಪ ಆರ್‌. ಲಮಾಣಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರಾದ ಜಾವಗಲ್ ಪ್ರಸನ್ನ, ಬಿ.ಟಿ ಮಾನವ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.