ADVERTISEMENT

ಅರಸೀಕೆರೆ | ವೈಕುಂಠ ಏಕಾದಶಿ: ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆ

ಅಮರಗಿರಿ ಮಾಲೇಕಲ್ಲು ತಿರುಪತಿ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯ

​ಪ್ರಜಾವಾಣಿ ವಾರ್ತೆ
Published 10 ಜನವರಿ 2025, 13:28 IST
Last Updated 10 ಜನವರಿ 2025, 13:28 IST
ಅರಸೀಕೆರೆ ಮಾಲೇಕಲ್ಲು ತಿರುಪತಿಯ ಲಕ್ಷ್ಮೀವೆಂಕಟರಮಣ ಸ್ವಾಮಿ ದರ್ಶನ ಪಡೆದ ಕರವೇ ರಾಜ್ಯ ಘಟಕದ ಅಧ್ಯಕ್ಷ ಟಿ.ಎ. ನಾರಾಯಣಗೌಡ ಮತ್ತು ಕುಟುಂಬ
ಅರಸೀಕೆರೆ ಮಾಲೇಕಲ್ಲು ತಿರುಪತಿಯ ಲಕ್ಷ್ಮೀವೆಂಕಟರಮಣ ಸ್ವಾಮಿ ದರ್ಶನ ಪಡೆದ ಕರವೇ ರಾಜ್ಯ ಘಟಕದ ಅಧ್ಯಕ್ಷ ಟಿ.ಎ. ನಾರಾಯಣಗೌಡ ಮತ್ತು ಕುಟುಂಬ   

ಅರಸೀಕೆರೆ: ವೈಕುಂಠ ಏಕಾದಶಿ ಅಂಗವಾಗಿ ಅಮರಗಿರಿ ಮಾಲೇಕಲ್ಲು ತಿರುಪತಿ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯ ಸೇರಿ ತಾಲ್ಲೂಕಿನ ಹಲವೆಡೆ ವಿಷ್ಣು ದೇವಾಲಯಗಳಲ್ಲಿ ಶುಕ್ರವಾರ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.

ತಿರುಪತಿ ಬೆಟ್ಟದ ತಪ್ಪಲಿನಲ್ಲಿರುವ ಗೋವಿಂದರಾಜ ಸ್ವಾಮಿಗೆ ನಾನಾ ಪುಷ್ಪಗಳಿಂದ ಮಾಡಿದ ಗಜೇಂದ್ರ ಮೋಕ್ಷ ಅಲಂಕಾರ ಭಕ್ತರನ್ನು ಸೆಳೆಯಿತು. ಮುಂಜಾನೆ  ಮಹಾಭಿಷೇಕ, ಪಂಚಾಮೃತ ಅಭಿಷೇಕ, ವಿಷ್ಣು ಹೋಮ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.

ದೇವಾಲಯದ ಎಡಭಾಗದಲ್ಲಿ ವೈಕುಂಠ ದ್ವಾರವನ್ನು ನಿರ್ಮಿಸಿ ಪದ್ಮಾವತಿ ಹಾಗೂ ಲಕ್ಷ್ಮೀ ದೇವಿ ಸಮೇತ ವೆಂಕಟರಮಣ ಸ್ವಾಮಿ ಉತ್ಸವ ಮೂರ್ತಿಯನ್ನು ಸಪ್ತ ದ್ವಾರದಲ್ಲಿ ಪ್ರತಿಷ್ಠಾಪಿಸಿ ಭಕ್ತರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಾಲಯದ ಪ್ರಾಂಗಣದಲ್ಲಿ ಭಜನೆ, ಕೀರ್ತನೆ, ಲಲಿತಾ ಮತ್ತು ವಿಷ್ಣು ಸಹಸ್ರನಾಮವನ್ನು ವಿವಿಧ ಸಂಘ ಸಂಸ್ಥೆಯವರು ಪಠಿಸಿದರು.

ADVERTISEMENT

ರಾಜ್ಯದ ತಿರುಪತಿ ಎಂದೇ ಹೆಸರುವಾಸಿಯಾಗಿರುವ ಮಾಲೇಕಲ್ಲು ತಿರುಪತಿ ಸನ್ನಿಧಿಗೆ ಜಿಲ್ಲೆ ಹಾಗೂ ತಾಲ್ಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಬಂದು ಗೋವಿಂದ ನಾಮಸ್ಮರಣೆ ಮಾಡುತ್ತಾ ವೈಕುಂಠ ದ್ವಾರ ಪ್ರವೇಶ ಮಾಡಿ ಪೂಜೆ ಸಲ್ಲಿಸಿದರು. ದೇವಾಲಯದ ಒಳಗೆ ಹಾಗೂ ಹೊರೆಗೆ ಮಾಡಿದ ವಿಶೇಷ ಪುಷ್ಪಲಂಕಾರ ಹಾಗೂ ವಿದ್ಯುತ್‌ ದೀಪಾಲಂಕಾರ ಎಲ್ಲರ ಗಮನ ಸೆಳೆಯಿತು.

ತಾಲ್ಲೂಕಿನ ಗುತ್ತಿನಕೆರೆ ರಂಗನಾಥ ಸ್ವಾಮಿ, ಹಾರನಹಳ್ಳಿ ಚೆನ್ನಕೇಶವ ಸ್ವಾಮಿ, ಬಿಳಿಕಲ್ಲು ರಂಗನಾಥ ಸ್ವಾಮಿ, ಗಂಜಿಗೆರೆ ಪುರ ರಂಗನಾಥ ಸ್ವಾಮಿ ಹಾಗೂ ಬೆಟ್ಟದಪುರ ರಂಗನಾಥ ಸ್ವಾಮಿ ದೇವಾಲಯಗಳಲ್ಲಿಯೂ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಶ್ರೀ ಕ್ಷೇತ್ರಕ್ಕೆ ಕೆಎಸ್‌ಆರ್‌ಟಿಸಿ ಸಂಸ್ಥೆ ಹೆಚ್ಚುವರಿ ಬಸ್‌ವ್ಯವಸ್ಥೆ ಮಾಡಿತ್ತು. ಕರವೇ ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣಗೌಡರ ಸೇವಾರ್ಥವಾಗಿ ಹೂವಿನ ಅಲಂಕಾರ ಹಾಗೂ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾಧಿಕಾರಿ ಸಿ.ಸತ್ಯಭಾಮಾ , ತಹಶೀಲ್ದಾರ್‌ ಸಂತೋಷ್‌ಕುಮಾರ್‌, ಶಾಸಕ ಕೆ.ಎಂ.ಶಿವಲಿಂಗೇಗೌಡ, ಜೆಡಿಎಸ್‌ ಮುಖಂಡ ಎನ್‌.ಆರ್‌. ಸಂತೋಷ್‌, ಟಿ.ಎ.ನಾರಾಯಣಗೌಡ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಬಿ.ಎಸ್.ಅರುಣ್‌ಕುಮಾರ್‌, ಸದಸ್ಯರಾದ ಟಿ.ಆರ್‌.  ನಾಗರಾಜು ಸೇರಿದಂತೆ ಜನಪ್ರತಿನಿಧಿಗಳು ದೇವಾಲಯ ಸೇವಾ ಸಮಿತಿಯ ಅಧ್ಯಕ್ಷರು ಸದಸ್ಯರು ಸೇರಿದಂತೆ ಅಪಾರ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

ಅರಸೀಕೆರೆ ಮಾಲೇಕಲ್ಲು ತಿರುಪತಿಯ ಗೋವಿಂದರಾಜ ಸ್ವಾಮಿಗೆ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಗಜೇಂದ್ರ ಮೋಕ್ಷ ಅಲಂಕಾರ ಮಾಡಲಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.