
ಹಳೇಬೀಡು: ಗೋಣೆಸೋಮನಹಳ್ಳಿಯ ದೊಡ್ಡಕೆರೆಯಲ್ಲಿ ಶುಕ್ರವಾರ ಹುಲಿಕಲ್ ವೀರಭದ್ರೇಶ್ವರಸ್ವಾಮಿ ತೆಪ್ಪೋತ್ಸವ ವೈಭವದಿಂದ ನಡೆಯಿತು.
ಹುಲಿಕಲ್ಲೇಶ್ವರ ಬೆಟ್ಟದಿಂದ ಸ್ವಾಮಿಯ ಉತ್ಸವಮೂರ್ತಿಯನ್ನು ಬೆಳ್ಳಿರಥದಲ್ಲಿ ಕೂರಿಸಿ ವಾದ್ಯಮೇಳಗಳೊಂದಿಗೆ ಗೋಣಿಸೋಮನಹಳ್ಳಿ ಕೆರೆ ಬಳಿ ಕರೆ ತರಲಾಯಿತು.
ಕೆರೆ ದಡದಲ್ಲಿ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಉತ್ಸವಮೂರ್ತಿಯನ್ನು ಅಲಂಕೃತ ತೆಪ್ಪದ ಪೀಠದ ಮೇಲೆ ಆರೋಹಣ ಮಾಡಲಾಯಿತು. ನಂತರ ಉತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ಉತ್ಸವ ಕಣ್ತುಂಬಿಕೊಂಡರು.
ತಳಿರು–ತೋರಣಗಳಿಂದ ತೆಪ್ಪವನ್ನು ಸಿಂಗರಿಸಲಾಗಿತ್ತು. ಹಸಿರಿನಿಂದ ಕಂಗೊಳಿಸುತ್ತಿದ್ದ ತೆಪ್ಪಕೆರೆಯನ್ನು ಸುತ್ತಿ ಸ್ವಸ್ಥಾನಕ್ಕೆ ಬಂದು ನಿಂತಿತು. ನೆರೆದಿದ್ದ ಜನರು ದೇವರ ದರ್ಶನ ಪಡೆದರು. ಮತ್ತೆ ಬೆಳ್ಳಿ ರಥದಲ್ಲಿ ವೀರಭದ್ರೇಶ್ವರ ಸ್ವಾಮಿಯನ್ನು ಹುಲಿಕಲ್ಲೇಶ್ವರ ಬೆಟ್ಟದ ದೇವಾಲಯಕ್ಕೆ ಕರೆದೊಯ್ಯಲಾಯಿತು.
ಸುತ್ತಮುತ್ತಲಿನ ಗ್ರಾಮ ದೇವತೆಗಳ ಉತ‌್ಸವಮೂರ್ತಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.