ಹಾಸನ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಪೊಲೀಸರ ದೌರ್ಜನ್ಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ರಾಜ್ಯಪಾಲರು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಸದಸ್ಯರು ಶುಕ್ರವಾರ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮುಖಂಡರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಹಿಂದೂ ವಿರೋಧಿ ವಾತಾವರಣ ನಿರ್ಮಾಣವಾಗುತ್ತಿದೆ. ನಾಗರಿಕರ ಖಾಸಗಿ ಜೀವನ ಮತ್ತು ಗೌರವ, ಘನತೆಗೆ ಧಕ್ಕೆ ತರುವಂತಹ ಘಟನೆಗಳಿಗೆ ಪೊಲೀಸರಿಗೆ ಕಾರಣರಾಗುತ್ತಿದ್ದಾರೆ ಎಂದು ಆರೋಪಿಸಿದರು.
ಪೊಲೀಸರು ವಾರದಿಂದ ಕೋಮು ಸೌಹಾರ್ದದ ನೆಪದಲ್ಲಿ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿ, ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದ್ದಾರೆ. ವಿಚಾರಣೆ ನೆಪದಲ್ಲಿ ಮಧ್ಯರಾತ್ರಿ ದೂರವಾಣಿ ಕರೆ ಮಾಡಿ ಹಿಂದೂ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದ್ದಾರೆ. ಬಲವಂತವಾಗಿ ರಾತ್ರಿ ಅವರ ಫೋಟೋ ತೆಗೆಯುವುದು, ಅವರ ಮನೆಗೆ ತೆರಳಿ ಜಿಪಿಎಸ್ ಲೊಕೇಶನ್ ಸಂಗ್ರಹ ಮಾಡುವುದು, ಕೂಲಿ ಕಾರ್ಮಿಕರು, ಹಿರಿಯ ನಾಗರಿಕರನ್ನೇ ಗುರಿಯಾಗಿಸಿ ಪೊಲೀಸರು ತೊಂದರೆ ನೀಡುತ್ತಿದ್ದಾರೆ. ಈ ಕುರಿತು ರಾಜ್ಯಪಾಲರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸದಸ್ಯರು ಸಕ್ರಿಯರಾಗಿದ್ದಾರೆ. ಈ ಸಂಘಟನೆಯಿಂದ ಕೋಮು ದ್ವೇಷ ಕೃತ್ಯಗಳು ನಡೆದಿದ್ದು, ಹಿಂದೂ ಮುಖಂಡ ಸುಹಾಸ್ ಶೆಟ್ಟಿ ಹತ್ಯೆಯ ಗಮನಿಸಿದಾಗ ಪಿಎಫ್‌ಐ ವ್ಯವಸ್ಥಿತವಾಗಿ ಸಂಚು ಮಾಡಿ ಹತ್ಯೆ ಮಾಡಿರುವುದು ಗಮನಕ್ಕೆ ಬಂದಿದೆ. ಪೊಲೀಸರು ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲರನ್ನೂ ಬಂಧಿಸದೇ ಇರುವುದು ಖಂಡನೀಯ. ಶರತ್ ಮಡಿವಾಳ, ಪ್ರವೀಣ್ ಪೂಜಾರಿ, ಪ್ರವೀಣ್ ನೆಟ್ಟಾರು ಮುಂತಾದ ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣದಲ್ಲಿ ಸಹ ಪಾಪುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ಪಿಎಫ್‌ಐ ಸಂಘಟನೆಯ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಿಂದೂಗಳ ಮೇಲೆ ಆಗುತ್ತಿರುವ ಪೊಲೀಸರ ದೌರ್ಜನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸಬೇಕು ಎಂದು ಮನವಿ ಸಲ್ಲಿಸಿದರು. ಚಂದ್ರಶೇಖರ್, ಸುಜಾತಾ, ಡಾ. ರಮೇಶ್ ವೇಣುಗೋಪಾಲ್, ಲಾವಣ್ಯ, ಅನಂತರಾಜು, ವೆಂಕಟೇಶ್, ನಿಟ್ಟೂರ್ ಲಕ್ಷ್ಮಣ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.