ADVERTISEMENT

26.06 ಲಕ್ಷ ಭಕ್ತರಿಂದ ಹಾಸನಾಂಬ ದರ್ಶನ: ಸಿದ್ದೇಶ್ವರ ಜಾತ್ರಾ ಮಹೊತ್ಸವ ಸಂಪನ್ನ

ವಿಶೇಷ ದರ್ಶನದ ಟಿಕೆಟ್, ಲಾಡು ಮಾರಾಟದಿಂದ ₹21.82 ಕೋಟಿ ಆದಾಯ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 3:14 IST
Last Updated 24 ಅಕ್ಟೋಬರ್ 2025, 3:14 IST
ಹಾಸನಾಂಬಾ ದೇಗುಲದಲ್ಲಿ ಗುರುವಾರ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿದ ಬಳಿಕ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಯಿತು
ಹಾಸನಾಂಬಾ ದೇಗುಲದಲ್ಲಿ ಗುರುವಾರ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿದ ಬಳಿಕ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಯಿತು   

ಹಾಸನ: ವರ್ಷಕ್ಕೆ ಕೆಲವೇ ದಿನ ದರ್ಶನ ಭಾಗ್ಯ ಕರುಣಿಸುವ ಜಿಲ್ಲೆಯ ಅಧಿದೇವತೆ ಹಾಸನಾಂಬಾ ದರ್ಶನೋತ್ಸವ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಗುರುವಾರ ವಿಧ್ಯುಕ್ತ ತೆರೆ ಎಳೆಯಲಾಯಿತು. 

ಹಿಂದೂ ಧಾರ್ಮಿಕ ವಿಧಿ–ವಿಧಾನದೊಂದಿಗೆ ಪೂಜೆ ನೆರವೇರಿಸುವ ಮೂಲಕ ಕಳೆದ 15 ದಿನದಿಂದ ನಡೆದ ದರ್ಶನೋತ್ಸವಕ್ಕೆ ಗುರುವಾರ ಮಧ್ಯಾಹ್ನ ಸುಮಾರು 1.07 ಗಂಟೆಗೆ ಗರ್ಭಗುಡಿಯ ಬಾಗಿಲನ್ನು ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ರಾಜ್ಯ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಜಿಲ್ಲಾಧಿಕಾರಿ ಕೆ.ಎಸ್ ಲತಾಕುಮಾರಿ, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್ ಪೂರ್ಣಿಮಾ, ದೇವಸ್ಥಾನ ಆಡಳಿತಾಧಿಕಾರಿ ಮಾರುತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ಹಾಗೂ ಇತರೆ ಗಣ್ಯರ ಸಮ್ಮುಖದಲ್ಲಿ ಗರ್ಭಗುಡಿ ಬಾಗಿಲು ಮುಚ್ಚಲಾಯಿತು.

ಗರ್ಭಗುಡಿ ಬಾಗಿಲು ಮುಚ್ಚುವ ಮುನ್ನ ಪ್ರಧಾನ ಅರ್ಚಕರಾದ ನಾಗರಾಜ್ ಅವರು ದೇವರ ಮುಂದೆ ದೀಪ ಹಚ್ಚಿ, ಹೂವು, ನೈವೇದ್ಯ ಇಟ್ಟು ವಿಶೇಷ ಪೂಜೆ ಸಲ್ಲಿಸಿದರು. 

ADVERTISEMENT

ಗರ್ಭಗುಡಿ ಬಾಗಿಲನ್ನು ಅಕ್ಟೋಬರ್ 9ರಿಂದ ಅಕ್ಟೋಬರ್ – 23 ರವರೆಗೆ ತೆರೆದಿದ್ದು, 15 ದಿನದಲ್ಲಿ 13 ದಿನ ಮಾತ್ರ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಸುಮಾರು 26.06 ಲಕ್ಷ ಭಕ್ತರು ದೇವಿ ದರ್ಶನ ಪಡೆದಿದ್ದಾರೆ ಎಂದು ಅಂದಾಜಿಸಲಾಗಿದೆ.

ಗರ್ಭಗುಡಿ ಬಾಗಿಲು ಹಾಕಿದ ಬಳಿಕ ಸುದ್ದಿಗಾರರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ‘2025ನೇ ಹಾಸನಾಂಬ ದಶನೋತ್ಸವ ಗುರುವಾರ ವಿಧ್ಯುಕ್ತವಾಗಿ ಮುಕ್ತಾಯವಾಗಿದೆ. ಸ್ಥಳೀಯರು ಹಾಗೂ ದೇವಾಲಯದ ಸುತ್ತಮುತ್ತಲಿನ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿದ ಬಳಿಕ ಶಾಸ್ತ್ರೋಕ್ತವಾಗಿ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಯಿತು’ ಎಂದರು.

ಶಾಸಕ ಕೆ.ಎಂ ಶಿವಲಿಂಗೇಗೌಡ ಅವರು ಮಾತನಾಡಿ, ಇತಿಹಾಸದಲ್ಲೆ ಇಷ್ಟೊಂದು ಮಂದಿ ದರ್ಶನಕ್ಕೆ ಆಗಮಿಸಿಲ್ಲ. ಹಾಸನಾಂಬ ಚಿಕ್ಕ ಚಾಗದಲ್ಲಿ ನೆಲೆಸಿದ್ದು‌, ದೇವಿಯ ಕೃಪೆ ಅನುಗುಣವಾಗಿ ಭಕ್ತಿಯ ಸಾಗರ ಹರಿದುಬರುತ್ತಿದೆ ಎಂದರು.

ಈ ವೇಳೆ ಶಾಸಕರಾದ ಸ್ವರೂಪ್ ಪ್ರಕಾಶ್, ಸಿಮೆಂಟ್ ಮಂಜು, ಐಜಿಪಿ ಡಾ.ಬೋರಲಿಂಗಯ್ಯ, ಡಿಸಿಎಫ್ ಸೌರಬ್ ಕುಮಾರ್, ಹುಡಾ ಅಧ್ಯಕ್ಷ ಪಟೇಲ್ ಶಿವಪ್ಪ, ಮೇಯರ್ ಗಿರೀಶ್ ಚನ್ನವೀರಪ್ಪ, ಉಪ ಮೇಯರ್ ಹೇಮಲತಾ, ಮಾಜಿ ಎಮ್‌ಎಲ್ ಸಿ ಎಂ.ಎ ಗೋಪಾಲಸ್ವಾಮಿ, ನಿಶ್ಚಲಾನಂದ ನಾಥ ಸ್ವಾಮೀಜಿ, ಕಾಂಗ್ರೆಸ್ ಮಾಧ್ಯಮ ವಕ್ತಾರ ದೇವರಾಜೇಗೌಡ, ಬಾಗೂರು ಮಂಜೇಗೌಡ, ಬನವಾಸೆ ರಂಗಸ್ವಾಮಿ ಹಾಗೂ ಇತರೆ ಅಧಿಕಾರಿಗಳ ಉಪಸ್ಥಿತರಿದ್ದರು.

ಹಾಸನಾಂಬೆಯ ಒಡವೆಗಳನ್ನು ಜಿಲ್ಲಾ ಖಜಾನೆಗೆ ರವಾನಿಸಲಾಯಿತು
ಮುಂದಿನ ವರ್ಷ ಅಕ್ಟೋಬರ್ 29ರಿಂದ ನವೆಂಬರ್ 11 ರವರೆಗೆ ಹಾಸನಾಂಬಾ ದರ್ಶನೋತ್ಸವ ಜರುಗಲಿದೆ. ಕೇವಲ 12 ದಿನ ಮಾತ್ರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.
– ಕೃಷ್ಣ ಬೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ

ದರ್ಶನೋತ್ಸವ: ದಾಖಲೆ ನಿರ್ಮಾಣ

‘ಈ ವರ್ಷ ಎಲ್ಲರ ಉತ್ತಮ ಸಹಕಾರದಿಂದ ದರ್ಶನೋತ್ಸವ ಯಶಸ್ವಿಯಾಗಿ ಪೂರ್ಣಗೊಂಡಿದೆ. ಗದ್ದಲ ನೂಕುನುಗ್ಗಲು ಇಲ್ಲದೆ ಬಂದವರೆಲ್ಲ ಹಸನ್ಮುಖರಾಗಿ ದರ್ಶನ ಪಡೆದಿದ್ದಾರೆ. ಸಾಮಾನ್ಯ ಜನರಿಗೂ ಸುಗಮ ದರ್ಶನವಾಗಿದ್ದು ರಾಜ್ಯದ ಮೂಲೆ ಮೂಲೆಗಳಿಂದ ಸೇರಿದಂತೆ ಹೊರ ರಾಜ್ಯದ ಜನರಿಗೂ ತೃಪ್ತಿ ನೀಡಿದಂತಾಗಿದೆ. ಈ ಬಾರಿ ಸುಮಾರು 26.06 ಲಕ್ಷ ಮಂದಿ ದರ್ಶನ ಪಡೆದಿದ್ದು ಕಳೆದ ಬಾರಿಗಿಂತ 8 ಲಕ್ಷಕ್ಕೂ ಹೆಚ್ಚು ಮಂದಿ ದರ್ಶನ ಪಡೆದು ದಾಖಲೆ ನಿರ್ಮಿಸಲಾಗಿದೆ’ ಎಂದರು.

‘ಕಳೆದ ಬಾರಿಯ ದರ್ಶನೋತ್ಸವಕ್ಕೆ ₹6.80 ಕೋಟಿ ವೆಚ್ಚ ಮಾಡಲಾಗಿತ್ತು. ಈ ಬಾರಿ ₹10 ಕೋಟಿಗೂ ಹೆಚ್ಚು ವೆಚ್ಚವಾಗಿದೆ. ದೊನ್ನೆ ಪ್ರಸಾದ ಲಾಡು ವಿತರಣೆಗೆ ₹4.5 ಕೋಟಿ ವೆಚ್ಚವಾಗಿದ್ದು ಈ ಎಲ್ಲಾ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗುವುದು. ವಿಶೇಷ ದರ್ಶನ ಟಿಕೆಟ್ಲಾಡು ಮಾರಾಟದಿಂದ ₹21 ಕೋಟಿಗೂ ಅಧಿಕ ಹಣ ಬಂದಿದ್ದು ಯುಪಿಐ ಕ್ಯುಆರ್ ಕೋಡ್-ಕಾಣಿಕೆ ಹುಂಡಿಯ ಹಣ ಏಣಿಕೆ ಆಗಬೇಕಿದೆ’ ಎಂದು ಸಚಿವರು ತಿಳಿಸಿದರು

ಹಾಸನಾಂಬ ದರ್ಶನ ಪಡೆದ ಗಣ್ಯರು

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಸಚಿವ ಶಿವರಾಜ್ ತಂಗಡಗಿ, ಶಾಸಕರಾದ ಸಿ.ಎನ್.ಬಾಲಕೃಷ್ಣ, ಸಿಮೆಂಟ್ ಮಂಜು,  ಎಚ್‌.ಡಿ ರೇವಣ್ಣ, ಎ.ಮಂಜು, ಕೇಂದ್ರ ಸಚಿವ ಎಚ್.ಡಿ .ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ, ಮಾಜಿ ಸಚಿವ ಕೆ.ಗೋಪಾಲಯ್ಯ, ಮಾಜಿ ಶಾಸಕ ಪ್ರೀತಂ ಗೌಡ, ರಾಜ್ಯ ಗೃಹ ಮಂಡಳಿ ಅಧ್ಯಕ್ಷ  ಕೆ.ಎಂ. ಶಿವಲಿಂಗೇಗೌಡ, ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ, ಸಾಲುಮರದ ತಿಮ್ಮಕ್ಕ, ಆದಿಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದ ನಾಥ ಸ್ವಾಮೀಜಿ, ತುಮಕೂರು ಸಿದ್ದಗಂಗಾ ಮಠದ ಕಿರಿಯ ಸ್ವಾಮೀಜಿಗಳಾದ ಶಿವಸಿದ್ದೇಶ್ವರ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಎಸ್ .ಎಲ್ ಬೋಜೇಗೌಡ, ನೊಣವಿನಕೆರೆ ಕಾಡ ಸಿದ್ದೇಶ್ವರ ಮಠದ ಕರಿವೃಷಭ ದೇಶಿಕೇಂದ್ರ ಶಿವಯೋಗಿ ಸ್ವಾಮೀಜಿ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಟಿ.ಎ ನಾರಾಯಣಗೌಡ, ಕೆ ಆರ್ ಪೇಟೆಯ ಶಾಸಕ ಮಂಜುನಾಥ್, ದಾವಣಗೆರೆ ಲೋಕಸಭಾ ಸದಸ್ಯ ಪ್ರಭಾ ಮಲ್ಲಿಕಾರ್ಜುನ್ ಸೇರಿದಂತೆ ವಿವಿಧ ಮಠಗಳ ಮಠಾಧೀಶರುರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರುಚಲನಚಿತ್ರ ಕಲಾವಿದರು ಹಲವಾರು ಗಣ್ಯರು ದರ್ಶನ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.