ಹಾಸನ: ಬಯಲು ಸೀಮೆ, ಅರೆ ಮಲೆನಾಡು, ಮಲೆನಾಡಿನ ಬೆಟ್ಟ ಗುಡ್ಡಗಳ ಸೌಂದರ್ಯ ಹೊಂದಿರುವ ಜಿಲ್ಲೆಯಲ್ಲಿ ವಾರದಿಂದ ನಿರಂತರ ಮಳೆ ಬೀಳುತ್ತಿದ್ದು, ತಂಪಾದ ವಾತಾವರಣ ನಿರ್ಮಾಣವಾಗಿದೆ.
‘ಬಡವರ ಊಟಿ’ ಪ್ರವಾಸಿಗರ ಸ್ವರ್ಗ ಎಂಬಂತಾಗಿದೆ. ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸುವ ಹಾಸನ ನಗರದಿಂದ ಮಂಗಳೂರಿನವರೆಗೆ ಸಾಗುವ ದಾರಿಯಂತೂ ನಿಸರ್ಗದ ರಮಣೀಯ ಬೆಟ್ಟ ಗುಡ್ಡಗಳ ಸಾಲನ್ನೇ ಹೊಂದಿದೆ.
ಪಶ್ಚಿಮ ಘಟ್ಟದ ಬೆಟ್ಟಗುಡ್ಡಗಳ ಸಾಲಿನಿಂದ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ಹರಿಯುವ ಸಣ್ಣಪುಟ್ಟ ಜಲಧಾರೆ ನೋಡುಗರ ಕಣ್ಮನ ಸೆಳೆಯುತ್ತಿವೆ. ಅದೇ ರಸ್ತೆಯಲ್ಲಿ ಮಾರನಹಳ್ಳಿಯ ಸಮೀಪ ಜಲಧಾರೆ ಮಾದರಿ ಹರಿಯುತ್ತಿರುವ ತೊರೆ ನಿಂತು ನೋಡುವಂತೆ ಮಾಡುತ್ತದೆ. ಮುಂದೆ ಸಾಗಿದರೆ ನಾಲ್ಕೈದು ಜಲಪಾತಗಳು ಆಕರ್ಷಿಸುತ್ತವೆ.
ಸಕಲೇಶಪುರದ ಮಂಜರಾಬಾದ್ ಕೋಟೆ, ಸುಬ್ರಮಣ್ಯ ಸಕಲೇಶಪುರ ನಡುವೆ ಇರುವ ಬಿಸಿಲೆ ಘಾಟ್, ಕಾಫಿ ತೋಟಗಳು ರಸ್ತೆ ಬದಿ ಇದ್ದು ಸೌಂದರ್ಯ ಹೆಚ್ಚಿಸಿದ್ದು, ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ. ಶಿರಾಡಿ ಘಾಟಿಯ ಸೊಬಗು ಇಮ್ಮಡಿಗೊಂಡಿದೆ. ಬೆಟ್ಟದಲ್ಲಿ ಮಂಜಿನ ಹೊದಿಕೆಯನ್ನು ಕಂಡು ಪ್ರವಾಸಿಗರು ಮನಸೂರೆಗೊಳ್ಳುತ್ತಿದ್ದಾರೆ.
ರಸ್ತೆಯುದ್ದಕ್ಕೂ ಸಾಗುವ ಬೆಟ್ಟದ ದಟ್ಟ ಮಂಜಿನ ಕಣ್ಣಾ ಮುಚ್ಚಾಲೆ ಆಟ, ಹಸಿರು ವನಸಿರಿಯ ನಡುವೆ ಸಾಗುವ ಬೆಳ್ಳಿಯ ಮುಗಿಲಿನಲ್ಲಿ ಅಪರೂಪವಾಗಿ ಕಾಣುವ ಸೂರ್ಯ ರಶ್ಮಿ, ಘಾಟಿಯಲ್ಲಿ ಜಲಧಾರೆಯ ಸೊಬಗುಗಳಿಂದ ದೃಶ್ಯಕಾವ್ಯವೇ ಕಣ್ಮುಂದೆ ರಾಚುತ್ತದೆ.
ಪ್ರಕೃತಿಯ ತವರೆಂದೇ ಬಿಂಬಿತವಾಗಿರುವ ಪಶ್ಚಿಮ ಘಟ್ಟದ ಶಿರಾಡಿ ಘಾಟ್‌ನಲ್ಲಿ ಹಚ್ಚ ಹಸಿರಿನ ಪರಿಸರ ಅನಾವರಣಗೊಂಡಿದೆ. ನಡು ನಡುವೆ ಕೆಂಪು ಹೊಳೆಯ ಸಾಲು, ಭೋರ್ಗರೆಯುವ ನಾದ ಮನವನ್ನು ನಾಟುತ್ತದೆ. ಕಾಂಕ್ರೀಟ್ ಬೀಡಿನಲ್ಲಿ ಕಾಲ ಕಳೆದು ಸಂಚರಿಸುವ ಪ್ರಯಾಣಿಕರಂತೂ ಹೊಸ ಲೋಕವನ್ನೇ ಕಂಡಂತಹ ಅನುಭವ ನೀಡುತ್ತದೆ.
ಬೆಳ್ಳಿಯ ನೊರೆಯಂತೆ ಹರಿಯುವ ಜಲಧಾರೆಗಳ ಕಂಡು ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ. ಬಹುತೇಕ ಪ್ರಯಾಣಿಕರು ಶಿರಡಿ ಘಾಟ್ ರಸ್ತೆಯಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ, ಬೆಟ್ಟ ಗುಡ್ಡಗಳ ಸಾಲು, ಜಲ ತೊರೆಗಳ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುವುದು ಸಾಮಾನ್ಯ.
ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವ ಮಂದಿ ದಾರಿಯುದಕ್ಕೂ ಹತ್ತಾರು ಜಲಪಾತಗಳನ್ನು ಕಂಡು, ಮತ್ತೊಮ್ಮೆ ಸ್ವಂತ ವಾಹನದಲ್ಲಿ ಇಲ್ಲಿಗೆ ಬಂದು ಹೆಚ್ಚು ಸಮಯ ಕಳೆಯುವ ಬಯಕೆಯನ್ನು ಹೊರಹಾಕುತ್ತಿದ್ದಾರೆ.
ಕಣ್ಮನ ಸೆಳೆಯುತ್ತಿವೆ ಸಣ್ಣ ಜಲಪಾತಗಳು ಬಸ್‌ಗಳಲ್ಲಿ ಕುಳಿತು ಸೌಂದರ್ಯ ಸವಿಯುವ ಪ್ರಯಾಣಿಕರು ಜಿಲ್ಲೆಯ ದಾರಿಯುದ್ದಕ್ಕೂ ಕಣ್ಮನ ಸೆಳೆಯುವ ದೃಶ್ಯ
ಮಂಜರಾಬಾದ್ ಕೋಟೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಸ್ವಲ್ಪ ಕಾಲ ಕಳೆದು ಮುಂದಿನ ಹಾದಿ ಹಿಡಿಯುತ್ತೇವೆ. ಬಿಸಿ ಬಜ್ಜಿ ಟೀ– ಕಾಫಿ ಸವಿಯುವುದನ್ನು ಮರೆಯುವುದಿಲ್ಲ.ಅರುಣ್ ಕುಮಾರ್ ಬೆಂಗಳೂರಿನ ಉದ್ಯಮಿ
ಗುಡ್ಡ ಕುಸಿಯುವ ಸ್ಥಳಗಳಲ್ಲಿ ಜಾಗೃತಿ ಅವಶ್ಯ. ನಿರ್ದಿಷ್ಟ ಸ್ಥಳಗಳಲ್ಲಿ ಸೆಲ್ಫಿ ತೆಗೆಯುವ ಹುಚ್ಚಾಟ ತಡೆಯುವ ನಿಟ್ಟಿನಲ್ಲಿ ಪೊಲೀಸರ ಗಸ್ತು ಹೆಚ್ಚಿಸಬೇಕು.ಸಂಕೇತ್ ಬೆಂಗಳೂರಿನ ಬ್ಯಾಂಕ್ ಉದ್ಯೋಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.