ADVERTISEMENT

ಬೇಲೂರು ಮೋರ್ ಬಜಾರ್‌ನಲ್ಲಿ ಬಿಸ್ಕೀಟ್, ಅಕ್ಕಿಯಲ್ಲಿ ಹುಳು: ಗ್ರಾಹಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 4:18 IST
Last Updated 12 ಫೆಬ್ರುವರಿ 2026, 4:18 IST
ಬೇಲೂರು ಪುರಸಭೆಯ ಆಹಾರ ನಿರೀಕ್ಷಕರು, ಮೋರ್‌ ಸೂಪರ್ ಮಾರ್ಕೆಟ್‌ ಅನ್ನು ಬಂದ್ ಮಾಡಿಸಿದರು
ಬೇಲೂರು ಪುರಸಭೆಯ ಆಹಾರ ನಿರೀಕ್ಷಕರು, ಮೋರ್‌ ಸೂಪರ್ ಮಾರ್ಕೆಟ್‌ ಅನ್ನು ಬಂದ್ ಮಾಡಿಸಿದರು   

ಬೇಲೂರು: ಇಲ್ಲಿನ ನೆಹರು ನಗರದ ಮೋರ್ ಬಜಾರ್‌ನಲ್ಲಿ ಹುಳ ಬಂದಿರುವ ಬಿಸ್ಕೀಟ್‌ ಮತ್ತು ಅಕ್ಕಿಯನ್ನು ಮಾರಾಟಲಾಗುತ್ತಿದೆ ಎಂದು ಗ್ರಾಹಕರು ಮೋರ್ ಬಜಾರ್ ಎದುರು ಬುಧವಾರ ಸಂಜೆ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಹಕ ಬಕ್ರವಳ್ಳಿಯ ಸಂದಿಲ್ ಕುಮಾರ್ ಮಾತನಾಡಿ, ನಾನು ಮಂಗಳವಾರ ಬಿಸ್ಕೀಟ್‌ ತೆಗೆದುಕೊಂಡು ಹೋಗಿದ್ದೆ. ಇಂದು ತಿನ್ನಲು ಬಿಚ್ಚಿ ನೋಡಿದಾಗ ಹುಳುಗಳು ಇದ್ದವು. ಬಿಸ್ಕೀಟ್‌ ತಂದು ವ್ಯವಸ್ಥಾಪಕರಿಗೆ ತೋರಿಸಿದಾಗ ತಪ್ಪಾಯಿತು. ಮುಖ್ಯ ವ್ಯವಸ್ಥಾಪಕರಿಗೆ ಹೇಳ್ತಿವಿ ಬಿಡಿ ಎಂದು ಹೇಳುತ್ತಾರೆ. ಮಕ್ಕಳು ತಿಂದು ಏನಾದರೂ ಆಗಿದ್ದರೆ, ಯಾರು ಜವಾಬ್ದಾರರು? ಆಫರ್ ಎಂದು ಇಲ್ಲಿಗೆ ಬಂದು ತೆಗೆದುಕೊಳ್ಳುವುದೇ ತಪ್ಪು. ಕಾನೂನು ಹೋರಾಟ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬ್ಯಾಡರಹಳ್ಳಿಯ ಚನ್ನೇಗೌಡ ಮಾತನಾಡಿ, ನಾನು ಮಂಗಳವಾರ ಇಲ್ಲಿ ಸೋನಾಮಸೂರಿ ಅಕ್ಕಿ ಖರೀದಿಸಿದ್ದೆ. ಇಂದು ಸುರಿದು ನೋಡಿದರೆ ಹುಳುಗಳಾಗಿದ್ದು, ಅಕ್ಕಿ ಹಾಳಾಗಿದೆ. ವಾಪಸ್ ತಂದು ಕೊಟ್ಟಿದ್ದೇನೆ. ಈಗ ಮೋರ್‌ನವರು ಬೇರೆ ಅಕ್ಕಿಯನ್ನು ಕೊಡುವುದಾಗಿ ಹೇಳುತ್ತಿದ್ದಾರೆ. ಕಳಪೆ ಗುಣಮಟ್ಟದ ಪದಾರ್ಥಗಳನ್ನು ನೀಡಿ ಗ್ರಾಹಕರಿಗೆ ವಂಚಿಸುತ್ತಿದ್ದಾರೆ ಎಂದು ದೂರಿದರು.

ADVERTISEMENT

ಗ್ರಾಹಕರ ದೂರಿನ ಮೇರೆಗೆ ಪುರಸಭೆ ಆರೋಗ್ಯಾಧಿಕಾರಿ ಲೋಹಿತ್ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿ, ಮೋರ್ ಮಾರ್ಕೆಟ್‌ಗೆ ಬೀಗ ಹಾಕಿದರು. ವ್ಯಾಪಾರ ನಡೆದಂತೆ ಸೂಚಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಮೋರ್‌ನ ವ್ಯವಸ್ಥಾಪಕ ಇರ್ಫಾನ್‌, ಇವು ಕಂಪನಿಯಿಂದ ಬಂದ ಬಿಸ್ಕೀಟ್‌. ಅವಧಿ ಮುಗಿದಿಲ್ಲ. ಘಟನೆಯ ಬಗ್ಗೆ ಕಂಪನಿಯ ಮುಖ್ಯಸ್ಥರಿಗೆ ತಿಳಿಸಲಾಗುವುದು ಎಂದರು.

ಅಕ್ಕಿಯಲ್ಲಿ ಹುಳು ಆಗಿರುವುದನ್ನು ತೋರಿಸುತ್ತಿರುವ ಗ್ರಾಹಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.