ಸಕಲೇಶಪುರ: ‘ಎತ್ತಿನಹೊಳೆ ಯೋಜನೆ ಪೈಪ್‌ಲೈನ್‌ನಿಂದ ನಮ್ಮ ತೋಟ ಪ್ರತಿ ವರ್ಷ ಕುಸಿಯುತ್ತಿದ್ದು, ಕಾಫಿ, ಅಡಿಕೆ ಮರಗಳು ಉರುಳಿ ಬೀಳುತ್ತಿವೆ. ಈ ಯೋಜನೆಯಿಂದ ಬಯಲುಸೀಮೆಗೆ ನೀರು ಹೋಗುತ್ತದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮೂರಿನ ಪರಿಸರವೇ ಹಾಳಾಗಿ ಹೋಗಿದೆ’.
ಹೀಗೆ ಅಳಲು ತೋಡಿಕೊಂಡವರು, ತಾಲ್ಲೂಕಿನ ಆಲುವಳ್ಳಿ ಗ್ರಾಮದ ಎ.ಎನ್. ವಿನಯ್. ‘ಆಲುವಳ್ಳಿ ಗ್ರಾಮದ ನಮ್ಮ ತೋಟವನ್ನು ಸೀಳಿ ಎತ್ತಿನಹೊಳೆ ಯೋಜನೆಯ ಬೃಹತ್ ಪೈಪ್‌ಗಳನ್ನು ಅಳವಡಿಸಿದ್ದಾರೆ. ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಸುಮಾರು 30 ಅಡಿ ಅಗಲ, 20 ಅಡಿ ಆಳಕ್ಕೆ ಭೂಮಿಯನ್ನು ಬಗೆದು 10 ಅಡಿ ಸುತ್ತಳತೆಯ ಮೂರು ಪೈಪ್‌ಲೈನ್ ಅಳವಡಿಸಿದ್ದಾರೆ’ ಎಂದು ಹೇಳಿದರು.
‘ಭೂಮಿ ಬಗೆದು ಪೈಪ್ ಅಳವಡಿಸಿದ ಮೇಲೆ ಪೈಪ್ ಸುತ್ತಲೂ ಮಣ್ಣು ಹಾಕಿ ಗುಂಡಿಯನ್ನು ಸರಿಯಾಗಿ ಮುಚ್ಚಿಲ್ಲ. ತರಾತುರಿಯಲ್ಲಿ ಕಾಮಗಾರಿ ಮಾಡಿದ್ದಾರೆ. ಅಗೆದ ಗುಂಡಿಗೆ ಸರಿಯಾಗಿ ಮಣ್ಣು ಹಾಕಿ ಭದ್ರಪಡಿಸದೇ ಇರುವುದರಿಂದ, ಪೈಪ್ ತಳಭಾಗದಲ್ಲಿ ನೀರು ನಿಂತು ಅಕ್ಕಪಕ್ಕದ ಭೂಮಿ ಕುಸಿಯುತ್ತಿದೆ. ಕಳೆದ ನಾಲ್ಕು ವರ್ಷಗಳಿಂದಲೂ ನಮ್ಮ ತೋಟದಲ್ಲಿ ಹಂತ ಹಂತವಾಗಿ ಕುಸಿಯುತ್ತಲೇ ಇದೆ. ಅಡಿಕೆ, ಬಾಳೆ, ಕಾಫಿ ಗಿಡಗಳು ಬಿದ್ದು ಹೋಗಿವೆ. ನೀರು ನಿಲ್ಲುವುದರಿಂದ ಶೀತ ಹೆಚ್ಚಾಗಿ ಗಿಡಗಳು ಸಹ ಕೊಳೆ ರೋಗಕ್ಕೆ ತುತ್ತಾಗುತ್ತಿವೆ’ ಎಂದು ವಿವರಿಸಿದರು.
‘ಯೋಜನೆಗೆ ಸ್ವಾಧೀನ ಆಗಿರುವ ಭೂಮಿಗೆ ಹಿಂದೆಯೇ ಪರಿಹಾರ ದೊರಕಿದೆ. ಆದರೆ ಈ ಪೈಪ್‌ಲೈನ್ ಅವೈಜ್ಞಾನಿಕ ಕಾಮಗಾರಿಯಿಂದ ಹಾನಿ ಆಗಿರುವ ಹಾಗೂ ಮುಂದೆ ಹಾನಿ ಆಗುತ್ತಿರುವ ಭೂಮಿ ಹಾಗೂ ಬೆಳೆ ನಷ್ಟಕ್ಕೆ ಯಾವುದೇ ಪರಿಹಾರ ಇಲ್ಲ. ನಮಗೆ ಆಗಿರುವ ನಷ್ಟಕ್ಕೆ ಪರಿಹಾರ ನೀಡುವಂತೆ ಹಲವು ಬಾರಿ ಅರ್ಜಿ ಸಲ್ಲಿಸಿದರೂ ಪರಿಹಾರ ನೀಡಿಲ್ಲ’ ಎಂದು ಕಾಫಿ ಬೆಳೆಗಾರ ಎ.ಎನ್. ನಾಗೇಶ್ ಹೇಳುತ್ತಾರೆ.
ಸ್ಥಳೀಯರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು
ಎತ್ತಿನಹೊಳೆ ಯೋಜನೆಯಲ್ಲಿ ಹರಿಸುವ ಸಂಪೂರ್ಣ ನೀರು ಸಕಲೇಶಪುರ ತಾಲ್ಲೂಕಿನ ನದಿ ಮೂಲಗಳದ್ದು. ಆದರೆ ಇಲ್ಲಿಯ ಜನರಿಗೆ ಉಪಯೋಗಕ್ಕಿಂತ ಸಮಸ್ಯೆಯೇ ಹೆಚ್ಚಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಅಸಮಾಧಾನ ವ್ಯಕ್ತಪಡಿಸಿದರು. ರೈತರು ಭೂಮಿ ಕಳೆದುಕೊಂಡಿದ್ದಾರೆ.
ಬೆಳೆ ನಷ್ಟ ರಸ್ತೆಗಳು ಹಾಳಾಗುತ್ತಿವೆ. ಸಾಕಷ್ಟು ಪ್ರಮಾಣದಲ್ಲಿ ಪರಿಸರ ಹಾನಿ ಆಗಿದೆ. ಆಗಿರುವ ನಷ್ಟಕ್ಕೆ ಸರ್ಕಾರ ಪರಿಹಾರ ಬಿಡುಗಡೆ ಮಾಡುತ್ತಿಲ್ಲ. ಎತ್ತಿನಹೊಳೆ ಯೋಜನೆಯಿಂದ ಬೆಳೆ ಆಸ್ತಿ– ಪಾಸ್ತಿ ಹಾನಿ ಆಗಿರುವ ರೈತರಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು. ಮುಖ್ಯಮಂತ್ರಿ ಉಪಮುಖ್ಯಮಂತ್ರಿಗೆ ಮೇಲಿಂದ ಮೇಲೆ ಮನವಿ ಸಲ್ಲಿಸುತ್ತಲೇ ಬಂದಿದ್ದೇನೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.