ADVERTISEMENT

ನೋವು ಉಂಡವರಿಂದ ಸತ್ಯ ತಿಳಿಯಲು ಸಾಧ್ಯ

ಕೈವಾರ ತಾತಯ್ಯ ಜಯಂತ್ಯುತ್ಸವದಲ್ಲಿ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲೇಶಗೌಡ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 6:37 IST
Last Updated 4 ಮಾರ್ಚ್ 2026, 6:37 IST
ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಮಂಗಳವಾರ ನಡೆದ ಜಯಂತ್ಯುತ್ಸವದಲ್ಲಿ ಕೈವಾರ ತಾತಯ್ಯನವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಪಣೆ ಮಾಡಿದರು.
ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಮಂಗಳವಾರ ನಡೆದ ಜಯಂತ್ಯುತ್ಸವದಲ್ಲಿ ಕೈವಾರ ತಾತಯ್ಯನವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಪಣೆ ಮಾಡಿದರು.   

ಹಾಸನ: ಎಲ್ಲ ವಿದ್ಯಾವಂತರು ವಿವೇಕಿಗಳಲ್ಲ. ಎಲ್ಲ ಜ್ಞಾನಿಗಳು ವಿವೇಕಿಗಳಲ್ಲ. ಬುದ್ಧಿವಂತರೆಲ್ಲ ಜ್ಞಾನಿಗಳಲ್ಲ. ಜ್ಞಾನಿಗಳೆಲ್ಲ ವಿವೇಕರಲ್ಲ. ಯಾರು ವಿವೇಕಿಯೋ ಅವನಿಗೆ ಮಾತ್ರ ಸತ್ಯಗಳು ಗೋಚರವಾಗುತ್ತದೆ. ಅಂತಹ ಪಾತ್ರಕ್ಕೆ ಹೆಸರಾದವರು ಕೈವಾರ ತಾತಯ್ಯನವರು ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್‌.ಎಲ್‌. ಮಲ್ಲೇಶ ಗೌಡ ತಿಳಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಯೋಗಿ ನಾರಾಯಣ (ಕೈವಾರ ತಾತಯ್ಯ) ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತಿನ ಬಹುತೇಕ ಸಾಧಕರು ಮೂಲತಃ ನೋವು ಉಂಡವರು. ಅಂತಹ ತತ್ವಜ್ಞಾನಿಗಳಿಗೆ ಮಾತ್ರ ಜಗತ್ತಿನ ಸತ್ಯಗಳನ್ನು ತಿಳಿಯಲು ಸಾಧ್ಯ. ಸುಖದಲ್ಲಿ ಇದ್ದವರಿಗೆ ಜಗತ್ತಿನ ಸತ್ಯವನ್ನು ತಿಳಿಯಲು ಸಾಧ್ಯವಿಲ್ಲ ಎಂದರು.

ADVERTISEMENT

ಅನೇಕ ವಿದ್ವಾಂಸರು, ಸಾಹಿತಿಗಳು, ತತ್ವಜ್ಞಾನಿಗಳು, ವಚನಕಾರರು ಜನಿಸಿದ ಸ್ಥಳಕ್ಕೆ ವಿಶೇಷವಾದ ಮಹಿಮೆ ಪ್ರಾಪ್ತಿವಾಗುತ್ತದೆ. ಯೋಗಿ ನಾರಾಯಣರು ಜನಿಸಿದ ಕೈವಾರಕ್ಕೂ ವಿಶೇಷವಾದ ಹೊಳಪು ಪ್ರಾಪ್ತಿಯಾಗಿದೆ. ತಾವು ಜನಿಸಿದ ಸ್ಥಳಕ್ಕೆ ಬೆಳಕು ತಂದು ಕೊಡುವ ಕೆಲಸ ಮಹಾಪುರುಷರ ಸ್ವಭಾವ ಎಂದು ಹೇಳಿದರು.

ಮನೆ ಗೆದ್ದು ಮಾರು ಗೆಲ್ಲು ಎನ್ನುವುದು ನಮ್ಮ ಪೂರ್ವಿಕರ ಒಂದು ಆಲೋಚನೆ. ಯಾರು ಮನೆಯಲ್ಲಿ ತನ್ನ ಜವಾಬ್ದಾರಿಯನ್ನು ಸರಳವಾಗಿ ನಿರ್ವಹಿಸುತ್ತಾನೆಯೋ, ಅವನು ಸಮಾಜದಲ್ಲಿ ಜವಾಬ್ದಾರಿಯನ್ನು ಸರಳವಾಗಿ ನಿರ್ವಹಿಸುತ್ತಾನೆ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ರಮೇಶ್ ಮಾತನಾಡಿ, ಸಮಾಜದ ಒಳಿತಿಗಾಗಿ ಕೈವಾರ ತಾತಯ್ಯನವರು ನೀಡಿರುವ ತತ್ವಗಳನ್ನು ಅನುಸರಿಸುತ್ತ, ಸಮಾಜವನ್ನು ಒಳ್ಳೆಯ ಮಾರ್ಗದ ಕಡೆಗೆ ತರುವ ನಿಟ್ಟಿನಲ್ಲಿ ನಾವು ಸಹ ಕೈಜೋಡಿಸೋಣ. ಕೈವಾರ ತಾತಯ್ಯನವರು ನೀಡಿರುವ ಮಾರ್ಗದರ್ಶನದಲ್ಲಿ ನಡೆಯುವ ಮೂಲಕ ಯುವಕರು ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಸಾಹಿತಿ ಎನ್.ಎಲ್. ಚನ್ನೇಗೌಡ ಮಾತನಾಡಿ, ಕೈವಾರ ತಾತಯ್ಯನವರು ಸಂಸಾರದ ಹೊರೆಯನ್ನು ತೊರೆದು ಸನ್ಯಾಸಿ ಪಟ್ಟವನ್ನು ಸ್ವೀಕರಿಸಿ, ಸಮಾಜಕ್ಕೆ ಅನೇಕ ಆಧ್ಯಾತ್ಮಿಕ ತತ್ವಪದಗಳನ್ನು ನೀಡಿದರು. ಪ್ರಾಪಂಚಿಕ ಜ್ಞಾನವನ್ನು ಮರೆತು ಆಧ್ಯಾತ್ಮಿಕವಾಗಿ ಜೀವನ ರೂಪಿಸಿಕೊಳ್ಳುವುದರ ಜೊತೆಗೆ ಸಮಾಜಕ್ಕೆ ಮಾದರಿ ರೂಪಿಸುವಲ್ಲಿ ಕೈವಾರ ತಾತಯ್ಯನವರ ಪಾತ್ರ ಮುಖ್ಯವಾಗಿದೆ ಎಂದರು.

ಕೈವಾರ ತಾತಯ್ಯನವರು ಸುಮಾರು 20 ರಿಂದ 25 ತತ್ವಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇಂತಹ ಮಹನೀಯರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಆಧ್ಯಾತ್ಮಿಕವಾಗಿ ಬದುಕು ನಡೆಸುವುದು ಸುಲಭ. ಇಂತಹ ಸಾಹಿತಿಗಳು, ತತ್ವಪದಕಾರರನ್ನು ನೆನೆಯುವುದು ಮತ್ತು ಇಂತಹ ಜಯಂತಿಗಳನ್ನು ಆಚರಣೆ ಮಾಡುತ್ತ ಸಾಹಿತಿಗಳ ಬಗ್ಗೆ ತಿಳಿದುಕೊಳ್ಳುವುದು ನಮ್ಮ ಪುಣ್ಯ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್. ಪಿ. ತಾರಾನಾಥ್ ಹಾಗೂ ಮತ್ತಿತರರು ಉಪಸ್ಥಿತಿರಿದ್ದರು.