ADVERTISEMENT

‘ಅಂತರ್ಜಲ ಹೆಚ್ಚಿಸಲು ಪತ್ರಿಯೊಬ್ಬರು ಮುಂದಾಗಿ’

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 11:14 IST
Last Updated 30 ಮಾರ್ಚ್ 2018, 11:14 IST
ಹಿರೇಕೆರೂರಿನಲ್ಲಿ ವಿಶ್ವ ಜಲದಿನ ಕುರಿತು ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಹಿರಿಯ ಸಿವಿಲ್‌ ನ್ಯಾಯಾಧೀಶ ಕೆ.ಎಂ.ಪುಟ್ಟಸ್ವಾಮಿ ಉದ್ಘಾಟಿಸಿದರು
ಹಿರೇಕೆರೂರಿನಲ್ಲಿ ವಿಶ್ವ ಜಲದಿನ ಕುರಿತು ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಹಿರಿಯ ಸಿವಿಲ್‌ ನ್ಯಾಯಾಧೀಶ ಕೆ.ಎಂ.ಪುಟ್ಟಸ್ವಾಮಿ ಉದ್ಘಾಟಿಸಿದರು   

ಹಿರೇಕೆರೂರ: ‘ಅಮೂಲ್ಯವಾಗಿರುವ ನೀರನ್ನು ಮಿತವಾಗಿ ಬಳಕೆ ಮಾಡಬೇಕು. ಅಂತರ್ಜಲ ಹೆಚ್ಚಿಸಲು ಪತ್ರಿಯೊಬ್ಬರು ಮುಂದಾಗಬೇಕು’ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಕೆ.ಎಂ.ಪುಟ್ಟಸ್ವಾಮಿ ಹೇಳಿದರು.ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾ ಭವನದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನೆ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ‘ವಿಶ್ವ ಜಲದಿನ’ ಕುರಿತು ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮುಂದಿನ ದಿನಗಳಲ್ಲಿ ನೀರಿನ ಹಾಹಾಕಾರ ಎದುರಾಗದಂತೆ ಎಚ್ಚರವಹಿಸಿ, ಅಂತರ್ಜಲದ ಮಟ್ಟ ಹೆಚ್ಚಿಸಿ ನೀರಿನ ಮಿತವ್ಯಯಕ್ಕೆ ಪ್ರತಿಯೊಬ್ಬರು ಶ್ರಮಿಸಬೇಕು. ನೀರಿನ ಸಂರಕ್ಷಣೆಗೆ ತಳಮಟ್ಟದ ಅಧಿಕಾರಿಗಳ ಸಹಭಾಗಿತ್ವ ಬಹುಮುಖ್ಯವಾಗಿದ್ದು, ನೀರಿನ ಮಹತ್ವ ಮತ್ತು ಮಿತಬಳಕೆಯ ಕುರಿತು ಜನರಲ್ಲಿ ಅರಿವು ಮೂಡಿಸಬೇಕು’ ಎಂದು ಹೇಳಿದರು.

ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಸಚಿನ್ ಡಿ. ಮಾತನಾಡಿ, ‘ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮಳೆಕೊಯ್ಲು, ಇಂಗುಗುಂಡಿ ನಿರ್ಮಾಣಕ್ಕೆ ಮುಂದಾಗಬೇಕು’ ಎಂದ ಅವರು, ‘ಪ್ರತಿಯೊಬ್ಬರು ಕಾನೂನಿನ ಅರಿವು ಹೊಂದಬೇಕು. ಸಾರ್ವಜನಿಕರಿಗೆ ಏನಾದರೂ ಕಾನೂನಿನ ತೊಡಕುಗಳ ಕುರಿತು ಮತ್ತು ಸಲಹೆಗಳನ್ನು ತಾಲ್ಲೂಕು ಕಾನೂನು ಸೇವಾ ಸಮಿತಿಯಿಂದ ಪಡೆದುಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

ವಿಶ್ವ ಜಲ ದಿನದ ಕುರಿತು ಮುಖ್ಯಲಿಪಿಕ ಅಧಿಕಾರಿ ಮಲ್ಲಿಕಾರ್ಜುನ ಬರಗಿ ಉಪನ್ಯಾಸ ನೀಡಿದರು. ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ.ಹಂಚಿನಮನಿ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಪಿ.ಎಚ್.ಪಾಟೀಲ, ಸರ್ಕಾರಿ ವಕೀಲ ಎಸ್.ಬಿ.ತಿಪ್ಪಣ್ಣನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.