ADVERTISEMENT

ಉತ್ತಮ ಆಲೋಚನೆಗಳಿಂದ ಶಾಂತಿ ನೆಮ್ಮದಿ ಸಾಧ್ಯ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 6:30 IST
Last Updated 5 ಫೆಬ್ರುವರಿ 2011, 6:30 IST

ಹಾವೇರಿ: ‘ಮೂಲತಃ ಮನುಷ್ಯ ಕೆಟ್ಟವನಲ್ಲ. ಆತನ ಸುತ್ತ ಮುತ್ತಲಿನ ಪರಿಸರ ಹಾಗೂ ಪರಿಸ್ಥಿತಿಯ ಕೈಗೆ ಸಿಕ್ಕು ದುರಾಲೋಚನೆಗಳ ದಾಸ್ಯಕ್ಕೆ ಸಿಲುಕಿಬಿಡುತ್ತಾನೆ. ಅದೇ ಕಾರಣದಿಂದ ಸಮಾಜದಲ್ಲಿ ಅಪರಾಧಿಗಳ ಸಂಖ್ಯೆ ಹೆಚ್ಚಾಗುತ್ತಿದೆ’ ಎಂದು ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.ನಗರದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಶುಕ್ರವಾರ ಕೆರೆಮತ್ತಿಹಳ್ಳಿಯಲ್ಲಿರುವ ಉಪಕಾರಾಗ್ರಹದಲ್ಲಿ ಏರ್ಪಡಿಸಿದ ಕೈದಿಗಳ ಮನ ಪರಿವರ್ತನಾ ಶಿಬಿರದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಸಮಾಜದಲ್ಲಿ ಶಾಂತಿ ನೆಮ್ಮದಿ ಕಾಣಬೇಕಾದರೆ, ಕೆಟ್ಟ ಆಲೋಚನೆಗಳ ಪ್ರಭಾವಕ್ಕೆ ಒಳಗಾಗದೇ ಉತ್ತಮ ಆಲೋಚನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.ಕೇವಲ ಜೈಲಿನಲ್ಲಿ ಇರುವವರು ಬಂಧಿಗಳಲ್ಲ. ಬದುಕನ್ನು ಅನುಭವಿಸಲು ಸಾಧ್ಯವಾಗದ ಮನುಷ್ಯನು ಸಹ ಬಂಧಿಯೇ ಆಗಿದ್ದಾನೆ. ಜೈಲಿನಲ್ಲಿರುವ ಬಂಧಿಗಳು ಇದೊಂದು ಕೆಟ್ಟ ಅನುಭವ ಎಂದು ಮರೆತು, ಜೈಲಿನಿಂದ ಹೊರ ಬಂದಮೇಲೆ ಸುಂದರ ಜೀವನ ನಿರ್ವಹಿಸಬೇಕೆಂದು ಸಲಹೆ ಮಾಡಿದರು.

ಯಾರೊಬ್ಬರು ಬೇರೆಯವರಿಂದ ಅಪಹಾಸ್ಯಕ್ಕೊಳಗಾಗುವುದಿಲ್ಲ. ತಾನು ಮಾಡಿದ ಕೃತ್ಯದಿಂದ ಅಪಹಾಸ್ಯಕ್ಕೊಳಗಾಗುತ್ತಾರೆ. ಪ್ರತಿಯೊಬ್ಬರು ಇದನ್ನು ಪ್ರತಿಯೊಬ್ಬರು ಅರಿತುಕೊಂಡರೆ, ಯಾರೊಬ್ಬರ ಮೇಲೆ ದ್ವೇಷ, ಅಸೂಯೆ ತಾಳುವ ಪ್ರಶ್ನೆಯೇ ಬರುವುದಿಲ್ಲ ಎಂದರು. ಇದೇ ಸಂದರ್ಭದಲ್ಲಿ ಬೆಳಗಾವಿ ಹಾಗೂ ಬೆಂಗಳೂರು ಜೈಲಿನ ಇಬ್ಬರು ಕೈದಿಗಳು ಪರಿವರ್ತನೆಗೊಂಡು ಉತ್ತಮ ಜೀವನ ನಡೆಸುತ್ತಿರುವುದನ್ನು ವಿವರಿಸಿದರು.

ಜಮುರು ಕಲಾವಿದರು ಶರಣರು ರಚಿಸಿದ ವಚನಗಾಯನ ನಡೆಸಿದರೆ, ಜೈಲಿನಲ್ಲಿದ್ದ ಖೈದಿ ಶಾಂತಪ್ಪ ಅಳಲಗೇರಿ ಸಂತ ಶಿಶಿನಾಳ ಷರೀಫರ ಗೀತೆಯನ್ನು, ಕೈದಿ ಪ್ರಕಾಶ ಹರಿಜನ ಕಟ್ಟತ್ತೇವೆ ನಾವು ಕಟ್ಟತ್ತೇವೆ ಈನಾಡು ಕಟ್ಟತ್ತೇವೆ ಎಂದು ನಾಡನ್ನು ಕಟ್ಟುವ ಕ್ರಾಂತಿ ಹಾಡಿ ರಂಜಿಸಿದರು. ಇದೇ ಸಂದರ್ಭದಲ್ಲಿ ಹೊಸಮಠದಿಂದ ಉಪಕಾರಾಗ್ರಹಕ್ಕೆ ಕೈದಿಗಳ ಬೇಡಿಕೆಯಂತೆ ಡಿಶ್ ಟಿವಿಯನ್ನು ಕೊಡುಗೆಯಾಗಿ ವಿತರಿಸಲಾಯಿತು.

ನಂತರ ಖೈದಿಗಳಿಗೆ ಹಣ್ಣು ಬ್ರೆಡ್‌ಗಳನ್ನು ಶ್ರೀಗಳು ವಿತರಿಸಿದರು.ಹೊಸಮಠದ ಬಸವ ಶಾಂತಲಿಂಗ ಶ್ರೀಗಳು, ಶಂಕರಾನಂದ ಶ್ರೀಗಳು, ನಗರಸಭೆ ಸದಸ್ಯರಾದ ನಾಗೇಂದ್ರ ಕಟಕೋಳ, ಶೋಭಾ ಮಾಗಾವಿ, ಮಂಜುಳಾ ಕರಬಸಮ್ಮನವರ, ಮುಖಂಡರಾದ ಪರಮೇಶಪ್ಪ ಮೇಗಳಮನಿ, ರಾಜೇಂದ್ರ ಸಜ್ಜನರ ಸೇರಿದಂತೆ ಅನೇಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.