ADVERTISEMENT

ಕಟ್ಟಿಗೆ ಅಡ್ಡೆಯಾದ ವೀರಗಲ್ಲು ಸ್ಥಳ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2011, 9:40 IST
Last Updated 1 ಏಪ್ರಿಲ್ 2011, 9:40 IST
ಕಟ್ಟಿಗೆ ಅಡ್ಡೆಯಾದ ವೀರಗಲ್ಲು ಸ್ಥಳ
ಕಟ್ಟಿಗೆ ಅಡ್ಡೆಯಾದ ವೀರಗಲ್ಲು ಸ್ಥಳ   

ಗುತ್ತಲ: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ಗುಂಡಿಗೆ ಬಲಿಯಾದ ಹುತಾತ್ಮರು ಮಡಿದ ಸ್ಥಳದಲ್ಲಿರುವ ವೀರಗಲ್ಲು ರಾಷ್ಟ್ರೀಯ ಸ್ಮಾರಕವಾಗಬೇಕಾಗಿದ್ದು, ಈಗ ಅದು ಕಟ್ಟಿಗೆ ಅಡ್ಡೆಯಾಗಿ   ಪರಿಣಮಿಸಿದೆ. ಸ್ವಾತಂತ್ರ್ಯಯೋಧ ಮೈಲಾರ ಮಹಾದೇವ, ತಿರಕಪ್ಪ ಮಡಿವಾಳರ ಹಾಗೂ ವೀರಯ್ಯ ಹಿರೇಮಠ ಅವರು ಮಡಿದ ಸ್ಥಳದಲ್ಲಿ ಅವರ ಸವಿನೆನಪಿಗಾಗಿ ಸಮೀಪದ ಹೊಸರಿತ್ತಿಯಲ್ಲಿ ವೀರಗಲ್ಲೊಂದನ್ನು ನಿರ್ಮಿಸಲಾಗಿದೆ. ಆದರೆ, ಈ ವೀರಗಲ್ಲಿನ ಸುತ್ತ ಖಾಸಗಿ ಕಟ್ಟಿಗೆ ಅಡ್ಡಾವೊಂದು ತಲೆ ಎತ್ತಿದೆ.

ಸುಂದರ ಉದ್ಯಾನದಲ್ಲಿ ಕಂಗೋಳಿಸಬೇಕಾಗಿದ್ದ ವೀರಗಲ್ಲು ತನ್ನ ಅಸ್ತಿತ್ವಕ್ಕಾಗಿ ಪರದಾಡುವಂತಹ ಸ್ಥಿತಿ ಬಂದಿದೆ. ವೀರಗಲ್ಲಿನ ಸುತ್ತ ಕಟ್ಟಿಗೆ ಅಡ್ಡಾ ತಲೆ ಎತ್ತಿರುವುದರಿಂದ ಅದರ ಅಸ್ತಿತ್ವಕ್ಕೆ ಧಕ್ಕೆ ಒದಗಿದ್ದು, ಇದರಿಂದ ವೀರಗಲ್ಲು ತನ್ನ ಮಹತ್ವವನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ವೀರಗಲ್ಲಿನ ರಕ್ಷಣೆ ಕುರಿತು ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಐತಿಹಾಸಿಕ ಮಹತ್ವ ಹೊಂದಿರುವ ಈ ಸ್ಥಳವನ್ನು ನಿರ್ಲಕ್ಷಿಸಿರುವ ಜಿಲ್ಲಾಡಳಿತದ ಕ್ರಮಕ್ಕೆ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ. ‘ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿರುವ ಈ ವೀರಗಲ್ಲಿನ ಸುತ್ತ ಕಟ್ಟಿಗೆ ಅಡ್ಡೆ ಹರಡಿಕೊಂಡಿರುವುದರಿಂದ ಆವರಣದಲ್ಲಿ ಧಾರ್ಮಿಕ ವಾತಾವರಣ ಹದಗೆಟ್ಟು ಹೋಗಿದೆ’ ಎನ್ನುತ್ತಾರೆ ಗ್ರಾಮದ ಲಕ್ಷ್ಮಮ್ಮ.

ಕಟ್ಟಿಗೆ ಅಡ್ಡಾದ ತೆರವಿಗೆ ಗ್ರಾಮ ಪಂಚಾಯಿತಿಯೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ಹುತಾತ್ಮ ಮೈಲಾರ ಮಹಾದೇವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಏ. 1ರಂದು ಪ್ರಥಮ ಬಾರಿಗೆ ಈ ಸ್ಥಳದಲ್ಲಿ ಮೈಲಾರ ಮಹಾದೇವರ ಪುಣ್ಯತಿಥಿಯನ್ನು ಆಚರಿಸಲು ನಿರ್ಧರಿಸಿದೆ. ಇದಕ್ಕೂ ಮೊದಲು ಇಲ್ಲಿರುವ ವೀರಗಲ್ಲನ್ನು ಬಂಧನದಿಂದ ಬಿಡುಗಡೆ ಮಾಡುವಂತೆ ಗ್ರಾಮಸ್ಥರು ಟ್ರಸ್ಟ್‌ನ ಅಧ್ಯಕ್ಷ ಹಾಗೂ ಹಾವೇರಿ ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ ಅವರನ್ನು ಒತ್ತಾಯಿಸಿದ್ದಾರೆ.

ಅಂಗನವಾಡಿಗೆ ಮೈದಾನವಿಲ್ಲ: ವೀರಗಲ್ಲಿನ ಪಕ್ಕದಲ್ಲಿರುವ ಅಂಗನವಾಡಿ ಕಟ್ಟಡವಂತೂ ಕಟ್ಟಿಗೆ ಅಡ್ಡಾದಿಂದಲೇ ಸುತ್ತುವರಿದಿದೆ. ಅಂಗನವಾಡಿಗೆ ಬರುವ ಮಕ್ಕಳು ಭಯದಿಂದ ಬದುಕುವ ದಯನೀಯ ಸ್ಥಿತಿ ನಿರ್ಮಾಣವಾಗಿದ್ದು, ಆಟದ ಮೈದಾನವಿಲ್ಲದೇ ಪರದಾಡುವಂತಾಗಿದೆ. ಅಂಗವಾಡಿಯನ್ನು ಸುತ್ತುವರಿದಿರುವ ಕಟ್ಟಿಗೆ ಅಡ್ಡಾದಿಂದ ಮಕ್ಕಳು ಭಯದಿಂದ ಶಾಲೆಗೆ ಬರುತ್ತಿದ್ದಾರೆ. ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸಹ ನಿರ್ಲಕ್ಷ್ಯ ಹೊಂದಿದ್ದಾರಲ್ಲದೆ, ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದಾರೆ ಎಂಬುದು ಪಾಲಕರ ಆರೋಪ.

ಹೊಸರಿತ್ತಿಯಲ್ಲಿ ಜಿಲ್ಲಾಡಳಿತ ಮೈಲಾರ ಮಹಾದೇವ ಅವರ ಪುಣ್ಯತಿಥಿಯನ್ನು ಆಚರಿಸುತ್ತಿರುವುದು ಸ್ವಾಗತಾರ್ಹ. ಆದರೆ, ಜಿಲ್ಲಾಧಿಕಾರಿಗಳು ವೀರಗಲ್ಲಿನ ಸುತ್ತ ಇರುವ ಕಟ್ಟಿಗೆ ಅಡ್ಡಾವನ್ನು ತೆರವುಗೊಳಿಸಿ ವೀರಗಲ್ಲಿನ ಸುತ್ತ ಉದ್ಯಾನ ನಿರ್ಮಿಸಿ ಅದರ ಸಂರಕ್ಷಣೆಗೆ ಮುಂದಾಗಬೇಕು ಎನ್ನುತ್ತಾರೆ ಗ್ರಾಮದ ಈರಣ್ಣ ಕೋರಿ.
ಬಸವರಾಜ ಮರಳಿಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.