ADVERTISEMENT

ಕಾಸಿಗಾಗಿ ಸುದ್ದಿಯು ಶಿಕ್ಷಾರ್ಹ ಅಪರಾಧ

ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ ಸಭೆ: ಡಾ.ವೆಂಕಟೇಶ್ ಎಂ.ವಿ.

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 11:16 IST
Last Updated 11 ಏಪ್ರಿಲ್ 2018, 11:16 IST

ಹಾವೇರಿ: ಪತ್ರಿಕೆ, ಟಿ.ವಿ. ಮಾಧ್ಯಮ, ಸಾಮಾಜಿಕ ಜಾಲತಾಣಗಳು, ಇ–ಪತ್ರಿಕೆ, ಕೇಬಲ್‌ ಟಿ.ವಿ., ಮೊಬೈಲ್ ಸಂದೇಶಗಳಲ್ಲಿ ರಾಜಕೀಯ ಜಾಹೀರಾತು ನೀಡಲು ‘ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ’ ಅನುಮತಿ ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಕಣ್ಗಾವಲು ಸಮಿತಿ ಸಭೆ ನಡೆಸಿದ ಅವರು, ಜಾಹೀರಾತು ಪ್ರಕಟಿಸುವ ಮೊದಲು ಅನುಮತಿ ಪಡೆಯಬೇಕು. ಜಾಹೀರಾತಿನ ವೆಚ್ಚವನ್ನು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಬೇಕು. ಜಾಹೀರಾತು ಅನುಮತಿ ಹಾಗೂ ‘ಪೇಯ್ಡ್‌ ನ್ಯೂಸ್’ (ಕಾಸಿಗಾಗಿ ಸುದ್ದಿ) ಮೇಲೆ ನಿಗಾ ವಹಿಸಲು ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ ಎಂದು ಹೇಳಿದರು.

‘ಕಾಸಿಗಾಗಿ ಸುದ್ದಿ’ ಪ್ರಕಟಿಸುವುದು ಪ್ರಜಾ ಪ್ರತಿನಿಧಿ ಕಾಯ್ದೆ 1951 ರಡಿ ಶಿಕ್ಷಾರ್ಹ ಅಪರಾಧವಾಗಿದೆ. ಕಾಸಿಗಾಗಿ ಸುದ್ದಿಯು ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಅಪಾಯಕಾರಿಯಾಗಿದೆ. ‘ಕಾಸಿಗಾಗಿ ಸುದ್ದಿ’ಯನ್ನು ಪ್ರೆಸ್‌ ಕೌನ್ಸಿಲ್ ಆಫ್ ಇಂಡಿಯಾ, ಮಾಧ್ಯಮ ಸಂಸ್ಥೆಗಳು ಹಾಗೂ ಸುಪ್ರೀಂ ಕೋರ್ಟ್‌ ಗಂಭೀರವಾಗಿ ಪರಿಗಣಿಸಿದೆ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಕೇಬಲ್ ಟಿ.ವಿ., ಸಾಮಾಜಿಕ ಜಾಲತಾಣ, ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮ, ಇ–ಪತ್ರಿಕೆಗಳ ಸುದ್ದಿಗಳ ಮೇಲೆ ನಿಗಾವಹಿಸಲು ತಂಡಗಳನ್ನು ರಚಿಸಲಾಗಿದೆ. ವಿಧಾನಸಭಾ ಕ್ಷೇತ್ರವಾರು ಈ ತಂಡಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

‘ಕಾಸಿಗಾಗಿ ಸುದ್ದಿ’ ಪ್ರಕಟಗೊಂಡ 96 ಗಂಟೆಯೊಳಗೆ ಸಂಬಂಧಿಸಿದ ಪಕ್ಷ ಅಥವಾ ಅಭ್ಯರ್ಥಿಗಳಿಗೆ ಸ್ಪಷ್ಟೀಕರಣ ಕೇಳಿ ನೋಟಿಸ್ ನೀಡಲಾಗುವುದು. ಅಭ್ಯರ್ಥಿಗಳು 48 ಗಂಟೆಯೊಳಗೆ ಉತ್ತರಿಸಬೇಕು ಎಂದರು.

ಅಭ್ಯರ್ಥಿಯು ತನ್ನ ಚುನಾವಣಾ ಖರ್ಚು –ವೆಚ್ಚದಲ್ಲಿ ಜಾಹೀರಾತಿನ ಮೊತ್ತವನ್ನು ತೋರಿಸಬೇಕು. ಮಾಧ್ಯಮಗಳು ತಮ್ಮ ಅಧಿಕೃತ ವೆಚ್ಚ ಪತ್ರಿಕೆಯಲ್ಲಿ (ಲೆಕ್ಕ ಪರಿಶೋಧನೆ) ದಾಖಲಿಸಬೇಕಾಗುತ್ತದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಾಂತಾ ಹುಲ್ಮನಿ, ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಸಿದ್ದು ಹುಲ್ಲೊಳ್ಳಿ, ನೋಡಲ್ ಅಧಿಕಾರಿ ಶರಣಪ್ಪ ಭೋಗಿ, ವಾರ್ತಾಧಿಕಾರಿ ಬಿ.ಆರ್.ರಂಗನಾಥ್, ಸಾಹಿತಿ ಸತೀಶ ಕುಲಕರ್ಣಿ, ಪತ್ರಕರ್ತ ಪ್ರಕಾಶ ಜೋಷಿ ಮತ್ತು ಗಂಗಾಧರ ಹೂಗಾರ ಇದ್ದರು.

ಏನಿದು ಕಾಸಿಗಾಗಿ ಸುದ್ದಿ ?

ಕಾಸಿಗಾಗಿ ಸುದ್ದಿ (ಪೇಯ್ಡ್ ನ್ಯೂಸ್) ಎಂದರೆ ಚುನಾವಣೆ ಸಂದರ್ಭದಲ್ಲಿ ಪಕ್ಷ ಅಥವಾ ಅಭ್ಯರ್ಥಿಗಳಿಂದ ನಗದು ಅಥವಾ ಇನ್ಯಾವುದೋ ಉಡುಗೊರೆ ಪಡೆದುಕೊಂಡು ಅವರಿಗೆ ಪೂರಕವಾದ ಸುದ್ದಿ ಅಥವಾ ವಿಶ್ಲೇಷಣೆಯನ್ನು ಮಾಧ್ಯಮದಲ್ಲಿ (ಮುದ್ರಣ ಹಾಗೂ ವಿದ್ಯುನ್ಮಾನ) ಪ್ರಕಟಿಸುವುದು. ಇದನ್ನು ‘ಕಾಸಿಗಾಗಿ ಸುದ್ದಿ’ ಎನ್ನುತ್ತಾರೆ.

ಯಾವುದು ‘ಕಾಸಿಗಾಗಿ ಸುದ್ದಿ?

ಯಾವುದೇ ಅಭ್ಯರ್ಥಿ ಸಾಧನೆ ಬಗ್ಗೆ ಬರಹವನ್ನು ನಿರಂತರವಾಗಿ ಪ್ರಕಟಿಸುವುದು, ಜಾತಿ –ಧರ್ಮದ ಆಧಾರದ ಮೇಲೆ ವ್ಯಕ್ತಿ ಗೆಲುವು ಸಾಧ್ಯತೆ ಎಂದು ಬಿಂಬಿಸುವುದು, ಒಬ್ಬನೇ ಅಭ್ಯರ್ಥಿ ಬಗ್ಗೆ ನಿರಂತರವಾಗ ಲೇಖನಗಳನ್ನು ಪ್ರಕಟಿಸುವುದು, ಅಭ್ಯರ್ಥಿ ಅಥವಾ ಪಕ್ಷದ ವಿರುದ್ಧ ಸಕಾರಣ ಇಲ್ಲದೇ ಪರ ಅಥವಾ ವಿರೋಧ ಸುದ್ದಿಗಳನ್ನು ಉದ್ದೇಶ ಪೂರ್ವಕವಾಗಿ ಬರೆಯುವುದು, ತಲೆಬರಹದಲ್ಲಿ ನಿರ್ದಿಷ್ಟ ವ್ಯಕ್ತಿ ಗೆಲುವು ಸಾಧಿಸುತ್ತಾನೆ ಎಂದು ನಮೂದಿಸಿ, ಸುದ್ದಿಯಲ್ಲಿ ಸಕಾರಣ ನೀಡದೇ ಇರವುದು ‘ಕಾಸಿಗಾಗಿ ಸುದ್ದಿ’ ವ್ಯಾಪ್ತಿಗೆ ಒಳಪಡುತ್ತವೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಎಂ.ವಿ. ತಿಳಿಸಿದರು.

**

‘ಕಾಸಿಗಾಗಿ ಸುದ್ದಿ’ ಪ್ರಕಟಿಸಿದರೆ ಪ್ರಜಾ ಪ್ರತಿನಿಧಿ ಕಾಯ್ದೆಯಡಿ ಪ್ರಕರಣ ದಾಖಲಿಸುತ್ತೇವೆ. ತಪ್ಪು ಸಾಬೀತಾದಲ್ಲಿ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು – ಡಾ.ವೆಂಕಟೇಶ್ ಎಂ.ವಿ. ಜಿಲ್ಲಾಧಿಕಾರಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.