ADVERTISEMENT

ಕೈಬೀಸಿ ಕರೆಯುತಿದೆ ಮದಗದ ಕೆರೆ!

​ಪ್ರಜಾವಾಣಿ ವಾರ್ತೆ
Published 10 ಜುಲೈ 2013, 9:55 IST
Last Updated 10 ಜುಲೈ 2013, 9:55 IST

ಹಿರೇಕೆರೂರ: ಎರಡು ಗುಡ್ಡಗಳನ್ನು ಸೀಳಿ ಮುಂದೆ ಸಾಗುವ ಕುಮುಧ್ವತಿ ನದಿ ಧುಮ್ಮಿಕ್ಕಿ ಹರಿಯುವ ನೋಟ ಅಪೂರ್ವ. ಇಕ್ಕೆಲಗಳಲ್ಲಿ ಕಂಗೊಳಿಸುತ್ತಿದೆ ಹಸಿರು.

ತಾಲ್ಲೂಕಿನಲ್ಲಿರುವ ಐತಿಹಾಸಿಕ ಮದಗ ಮಾಸೂರು ಕೆರೆ ಹಾಗೂ ಸುತ್ತಮುತ್ತಲಿನ ಪ್ರದೇಶ ಮತ್ತೆ ಮತ್ತೆ ನೋಡಬೇಕು ಎನ್ನುವಂತಿದೆ! ಭರ್ತಿಯಾಗಿರುವ ವಿಶಾಲವಾದ ಮದಗದ ಕೆರೆ, ಮೈದುಂಬಿ ಹರಿಯುವ ಕುಮುಧ್ವತಿಯ ಭವ್ಯ ನೋಟ, ಹಚ್ಚ ಹಸಿರು ಗುಡ್ಡಗಳ ನಡುವಿನ ರಮಣೀಯ ನೋಟವು ಪ್ರವಾಸಿಗರನ್ನು ಕೈಮಾಡಿ ಕರೆಯುತ್ತಿದೆ.

ಹಿರೇಕೆರೂರಿನಿಂದ 16 ಕಿ.ಮೀ. ದೂರದಲ್ಲಿ ತಾಲ್ಲೂಕಿನ ಗಡಿಯಲ್ಲಿರುವ ಮದಗ ಮಾಸೂರು ಕೆರೆಗೆ ಸಂಕ್ರಾಂತಿಯ ದಿನ ಮಾತ್ರ ಬರುತ್ತಿದ್ದ ಪ್ರವಾಸಿಗರು ಈಗ ಕುತೂಹಲದ ವೀಕ್ಷಣೆಗೆ, ಆಕರ್ಷಕ ಪರಿಸರವನ್ನು ಸವಿಯಲು ಭೇಟಿ ನೀಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರವಾಸಿ ತಾಣವಾಗಿ ರೂಪಗೊಳ್ಳುತ್ತಿದೆ. ದೂರದಿಂದ ಪ್ರವಾಸಿಗರು ಸಹ ಆಗಮಿಸುತ್ತಿದ್ದಾರೆ. ಮದಗ ಮಾಸೂರು ಕೆರೆಗೆ ದಕ್ಷಿಣ ಭಾಗಕ್ಕಿರುವ ಶಿಕಾರಿಪುರದ ಕಡೆಯಿಂದ ಕುಮುಧ್ವತಿ ಹರಿದು ಬಂದು ಸೇರುತ್ತಾಳೆ. ಮುಂದೆ ಕೆರೆಯ ಕೋಡಿಯಿಂದ ಮಾಸೂರು, ರಟ್ಟೀಹಳ್ಳಿ ಮೂಲಕ ಸಾಗುತ್ತಾಳೆ.

ಎರಡು ಗುಡ್ಡಗಳ ಮಧ್ಯೆ ನಿರ್ಮಾಣಗೊಂಡು, ನಂತರ ಶಿಥಿಲವಾಗಿದ್ದ ಮದಗ ಮಾಸೂರು ಕೆರೆ ಒಡ್ಡನ್ನು 1858ರಲ್ಲಿ ಬ್ರಿಟಿಷ್ ಸರ್ಕಾರ ವಿಶೇಷ ಆಸಕ್ತಿಯಿಂದ ದುರಸ್ತಿಗೊಳಿಸಿದ ದಾಖಲೆ ಇದೆ. ಕೆರೆಯ ಕೋಡಿ ಮತ್ತು ತೂಬನ್ನು ವ್ಯವಸ್ಥಿತಗೊಳಿಸಿ ಎಂಟೂವರೆ ಮೈಲು ಉದ್ದದ ಬಲದಂಡೆ ಕಾಲುವೆ ಹಾಗೂ ಐದೂವರೆ ಮೈಲು ಉದ್ದದ ಎಡದಂಡೆ ಕಾಲುವೆ ನಿರ್ಮಿಸಿ, 3000 ಎಕರೆ ಕೃಷಿ ಜಮೀನಿಗೆ ನೀರುಣಿಸುವಂತೆ ಮಾಡಿದ್ದಾರೆ. 1889ರಲ್ಲಿ ಕಾಮಗಾರಿ ಮುಕ್ತಾಯವಾದ ಬಗ್ಗೆ ಗೆಝಿಟಿಯರ್‌ನಲ್ಲಿ ದಾಖಲಾಗಿದೆ.

ಬಚಾವತ್ ಆಯೋಗದ ಪ್ರಕಾರ ಮದಗ ಮಾಸೂರು ಕೆರೆ ನೀರಾವರಿ ಯೋಜನೆಗೆ 2.71 ಟಿಎಂಸಿ ಅಡಿ ನೀರನ್ನು ನಿಗದಿಪಡಿಸಿದೆ. ಕೋಡಿಯನ್ನು 11.27 ಅಡಿ ಎತ್ತರಿಸಿ, ಎಡದಂಡೆ ಕಾಲುವೆಯನ್ನು 36.4 ಕಿ.ಮೀ ಹಾಗೂ ಬಲದಂಡೆ ಕಾಲುವೆಯನ್ನು 38.2 ಕಿ.ಮೀ ನಿರ್ಮಿಸುವ ಮೂಲಕ ಹಿರೇಕೆರೂರ, ರಾಣೇಬೆನ್ನೂರು ಹಾಗೂ ಹರಿಹರ ತಾಲ್ಲೂಕುಗಳ 45 ಹಳ್ಳಿಗಳ 21ಸಾವಿರ ಎಕರೆ ಕೃಷಿ ಜಮೀನಿಗೆ ನೀರುಣಿಸುವ ಯೋಜನೆಯನ್ನು ಸರ್ಕಾರ 1974-75ರಲ್ಲಿ ಸಿದ್ಧಪಡಿಸಿತಾದರೂ ಯೋಜನೆ ಅನುಷ್ಠಾನಗೊಳ್ಳಲಿಲ್ಲ, ನಂತರದ ಯಾವುದೇ ಸರ್ಕಾರಗಳು ಇದರ ಬಗ್ಗೆ ಗಮನ ಹರಿಸಲಿಲ್ಲ ಎಂಬುದು ಈ ಭಾಗದ ರೈತರ ನೋವಿನ ನುಡಿಯಾಗಿದೆ.

ವ್ಯರ್ಥವಾಗಿ ಹರಿದು ಹೋಗುತ್ತಿರುವ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಸೂಕ್ತವಾದ ಯೋಜನೆ ರೂಪಿಸುವುದು ಇಂದಿನ ಅಗತ್ಯವಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಈ ಸ್ಥಳವನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಗಳು ಸಹ ಅರ್ಧಕ್ಕೆ ನಿಂತಿವೆ. ಅಗತ್ಯ ಮೂಲ ಸವಲತ್ತುಗಳನ್ನು ಕಲ್ಪಿಸಿದರೆ ಅತ್ಯುತ್ತಮ ಪ್ರವಾಸಿ ತಾಣವಾಗುವ ಎಲ್ಲ ಅರ್ಹತೆ ಮದಗ ಮಾಸೂರು ಕೆರೆಗೆ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.