ADVERTISEMENT

‘ಕೈ’ ಕೊಟ್ಟಿತೇ ಅತಿಯಾದ ಆತ್ಮವಿಶ್ವಾಸ!

ಬ್ಯಾಡಗಿಯಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತ ಹಾಲಿ ಶಾಸಕ ಬಸವರಾಜ ಶಿವಣ್ಣನವರ

ಹರ್ಷವರ್ಧನ ಪಿ.ಆರ್.
Published 17 ಏಪ್ರಿಲ್ 2018, 8:45 IST
Last Updated 17 ಏಪ್ರಿಲ್ 2018, 8:45 IST

ಹಾವೇರಿ: ಶಾಸಕ ಬಸವರಾಜ ಶಿವಣ್ಣನವರ ಅತಿಯಾದ ಆತ್ಮವಿಶ್ವಾಸವೇ ಕಾಂಗ್ರೆಸ್ ಟಿಕೆಟ್‌ ಕೈ ತಪ್ಪಲು ಕಾರಣವಾಯಿತೇ? ಎಂಬ ವಿಶ್ಲೇಷಣೆಯು ರಾಜಕೀಯ ವಲಯದಲ್ಲಿ ಜೋರಾಗಿದೆ.

ಹಾಲಿ ಶಾಸರಾಗಿರುವ ಶಿವಣ್ಣನವರ ಸುಮಾರು ₹5 ಸಾವಿರ ಕೋಟಿಗೂ ಹೆಚ್ಚು ಕಾಮಗಾರಿಗಳನ್ನು ಕ್ಷೇತ್ರಕ್ಕೆ ತಂದವರು. ಟಿಕೆಟ್‌ ಹಂಚಿಕೆಯಲ್ಲಿ ಜಿಲ್ಲೆಯಲ್ಲಿ ಪಕ್ಷದಿಂದ ಸಾಮಾಜಿಕ ನ್ಯಾಯ ಪಾಲನೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ‘ಆಪ್ ಬಳಗ’ದ ಸದಸ್ಯ ಎಂಬಿತ್ಯಾದಿ ಕಾರಣಗಳಿಂದ ಶಿವಣ್ಣನವರ ಅವರಿಗೆ ಬ್ಯಾಡಗಿ ಕ್ಷೇತ್ರದಿಂದ ಮತ್ತೊಮ್ಮೆ ಟಿಕೆಟ್ ಸಿಗಲಿದೆ ಎನ್ನಲಾಗಿತ್ತು.

ಇದಕ್ಕೆ ಪುಷ್ಟಿ ನೀಡುವಂತೆ, ಸ್ವತಃ ಸಿದ್ದರಾಮಯ್ಯ ಅವರೇ ಈಚೆಗೆ ಕ್ಷೇತ್ರದಲ್ಲಿ ನಡೆದಿದ್ದ ಕಾರ್ಯಕ್ರಮಗಳಲ್ಲಿ ಶಿವಣ್ಣನವರ ಹೆಸರನ್ನು ಘೋಷಿಸಿದ್ದರು. ಇದು ಆತ್ಮವಿಶ್ವಾಸ ಹೆಚ್ಚಲೂ ಕಾರಣವಾಗಿತ್ತು.

ADVERTISEMENT

ಆದರೆ, ‘ಸ್ಥಳೀಯರಿಗೆ ಟಿಕೆಟ್ ನೀಡಬೇಕು’ ಎಂದು ಹಿರಿಯ ಕಾಂಗ್ರೆಸಿಗ ಎಸ್.ಆರ್. ಪಾಟೀಲ್‌ ಅವರು ಬಂಡಾಯದ ಬಾವುಟ ಹಾರಿಸಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಕುರಿತು ಬೆಂಬಲಿಗರ ಜೊತೆ ಸಭೆಯನ್ನೂ ನಡೆಸಿದ್ದರು. ‘ನುಡಿದಂತೆ ನಡೆದು ಟಿಕೆಟ್ ನೀಡಿ’ ಎಂದು ಸಿ.ಎಂ. ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದರು. ಇವೆಲ್ಲ ಬೆಳವಣಿಗೆಗಳ ಕಾರಣ ಶಿವಣ್ಣನರ ತಮಗೇ ಟಿಕಟ್ ಸಿಗುವ ಭರವಸೆಯಲ್ಲಿದ್ದರು.

ನಿರ್ಲಕ್ಷ್ಯ: ‘ನೀವೂ ಟಿಕೆಟ್‌ಗೆ ಪ್ರಯತ್ನ ಪಡಿ. ತಪ್ಪೇನಿಲ್ಲ. ಯಾರಿಗೆ ಪಕ್ಷ ಟಿಕೆಟ್ ನೀಡುತ್ತದೆಯೋ ಅವರ ಪರವಾಗಿ ಎಲ್ಲರೂ ಕೆಲಸ ಮಾಡಬೇಕಾಗುತ್ತದೆ. ಪ್ರಯತ್ನ ಮಾಡೋಣ’ ಎಂದೂ ಎಸ್.ಆರ್. ಪಾಟೀಲ ಬೆಂಬಲಿಗರಿಗೆ ಅತಿಯಾದ ವಿಶ್ವಾಸದಿಂದ ಶಿವಣ್ಣನವರು ಹೇಳಿದ್ದರು ಎಂಬ ಮಾತುಗಳು ಕ್ಷೇತ್ರದಲ್ಲಿ ಹರಿದಾಡುತ್ತಿವೆ.

ಇನ್ನೊಂದೆಡೆ, ಟಿಕೆಟ್‌ಗಾಗಿ ಶಿವಣ್ಣನವರ ಪದೇ ಪದೇ ಹೈಕಮಾಂಡ್ ಬಾಗಿಲನ್ನೂ ಬಡಿದಿಲ್ಲ. ಆದರೆ, ಇತ್ತ ಎಸ್.ಆರ್‌. ಪಾಟೀಲ್ ಬೆಂಬಲಿಗರು ಬಂಡಾಯದ ಬಾವುಟದ ಜೊತೆಗೇ, ಟಿಕೆಟ್‌ಗಾಗಿ ಪಕ್ಷದ ಕದವನ್ನೂ ತಟ್ಟಿದ್ದಾರೆ.

ಮೂಲ ಕಾಂಗ್ರೆಸಿಗರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ ಮತ್ತಿತರ ಬಣವು ಅವರಿಗೆ ಬೆನ್ನೆಲುಬಾಗಿ ನಿಂತಿದೆ. ಪಕ್ಷದಲ್ಲಿ ಹೆಚ್ಚುತ್ತಿರುವ ಸಿದ್ದರಾಮಯ್ಯ ಅಧಿಪತ್ಯಕ್ಕೆ ಕಡಿವಾಣ ಹಾಕುವ ಸಲುವಾಗಿ ಟಿಕೆಟ್‌ ತಪ್ಪಿಸಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

ಸೃಷ್ಟಿಯಾದ ಅನುಕಂಪ: ಟಿಕೆಟ್ ಕೈ ತಪ್ಪಿದ ಕಾರಣ ಶಾಸಕ ಬಸವರಾಜ ಶಿವಣ್ಣನವರ ಪರ ಅನುಕಂಪ ಹೆಚ್ಚಿದ್ದು, ವಿವಿಧ ಸಮುದಾಯಗಳ ಮುಖಂಡರು ಸೋಮವಾರ ಬೆಳಿಗ್ಗೆಯಿಂದಲೇ ಅವರ ಮನೆ ಹಾಗೂ ಕಚೇರಿಗೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಲು ಶುರು ಮಾಡಿದ್ದಾರೆ. ಹೀಗಾಗಿ ಬ್ಯಾಡಗಿ ರಾಜಕೀಯ ಧ್ರುವೀಕರಣವು ಹೊಸ ತಿರುವು ಪಡೆದುಕೊಂಡಿದೆ.

ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮುನ್ಸೂಚನೆ!

ಟಿಕೆಟ್‌ ಕೈ ತಪ್ಪಿರುವ ವಿಚಾರವನ್ನು ಸಿ.ಎಂ. ಸಿದ್ದರಾಮಯ್ಯ ಅವರು ಭಾನುವಾರ ಕರೆ ಮಾಡಿ ಶಾಸಕ ಶಿವಣ್ಣನವರಿಗೆ ತಿಳಿಸಿದ್ದಾರೆ. ಅಲ್ಲದೇ, ಯಾವುದೇ ಕಾರಣಕ್ಕೂ ವ್ಯತಿರಿಕ್ತ ನಿರ್ಧಾರ ಕೈಗೊಳ್ಳಬಾರದು ಎಂದು ಕಾಗಿನೆಲೆ ಕನಕ ಗುರುಪೀಠದ ಮೂಲಕ ಮನವೊಲಿಸಲು ಯತ್ನಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಅಲ್ಲದೇ, ‘ತಮ್ಮನ್ನು ಭೇಟಿಯಾಗಬೇಕು’ ಎಂಬ ಎಸ್.ಆರ್. ಪಾಟೀಲ್‌ ಬೇಡಿಕೆಯನ್ನು ತಿರಸ್ಕರಿಸಿರುವ ಶಿವಣ್ಣನವರ, ‘ಏನಿದ್ದರೂ ಕಾರ್ಯಕರ್ತರ ಮುಂಭಾಗದಲ್ಲೇ ನಡೆಯಲಿ’ ಎಂದು ಖಡಕ್‌ ಆಗಿ ಹೇಳಿದ್ದಾರೆ ಎಂದು ಆಪ್ತ ವಲಯ ತಿಳಿಸಿವೆ.

ಪಕ್ಷವು ಅಧಿಕಾರಕ್ಕೆ ಬಂದ ಬಳಿಕ ಸೂಕ್ತ ಸ್ಥಾನಮಾನ ನೀಡಿ, ಉತ್ತಮ ಹುದ್ದೆಗಳನ್ನು ನೀಡುವ ಕುರಿತೂ ಭರವಸೆ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಆದರೆ, ‘ನಾನು ಟಿಕೆಟ್‌ಗಾಗಿ ಬೆಂಗಳೂರಿಗೆ ಹೋಗುವುದಿಲ್ಲ. ಕ್ಷೇತ್ರದ ಕಾರ್ಯಕರ್ತರ ನಿರ್ಣಯವೇ ಅಂತಿಮ’ ಎಂದು ‘ಪಕ್ಷೇತರ’ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮುನ್ಸೂಚನೆಯನ್ನು ಶಿವಣ್ಣನವರ ನೀಡಿದ್ದಾರೆ.

**

ನನ್ನ ಮೇಲೆ ಅಭಿಮಾನ ಇಟ್ಟುಕೊಂಡಿರುವ ಕ್ಷೇತ್ರದ ಕಾರ್ಯಕರ್ತರು ಕೈಗೊಳ್ಳುವ ನಿರ್ಧಾರದ ಪ್ರಕಾರ ಮುಂದಿನ ಹೆಜ್ಜೆಯನ್ನು ಇಡುತ್ತೇನೆ – ಬಸವರಾಜ ಶಿವಣ್ಣ, ಬ್ಯಾಡಗಿ ಶಾಸಕ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.