ADVERTISEMENT

ಕೊನೆ ಕ್ಷಣವೂ ಕುಳಿದು ಕುಪ್ಪಳಿಸಿದ ಜನತೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2018, 10:36 IST
Last Updated 27 ಫೆಬ್ರುವರಿ 2018, 10:36 IST
ಜಿಲ್ಲಾ ಉತ್ಸವದಲ್ಲಿ ಹಾಡುತ್ತಲೇ ಪ್ರೇಕ್ಷಕರ ಜೊತೆ ಹೆಜ್ಜೆ ಹಾಕಿದ ಜೋಗಿ ಸುನಿತಾ
ಜಿಲ್ಲಾ ಉತ್ಸವದಲ್ಲಿ ಹಾಡುತ್ತಲೇ ಪ್ರೇಕ್ಷಕರ ಜೊತೆ ಹೆಜ್ಜೆ ಹಾಕಿದ ಜೋಗಿ ಸುನಿತಾ   

ಹಾವೇರಿ: ಸಮಾನತೆ ಮತ್ತು ಕನ್ನಡತನವನ್ನು ಎತ್ತಿ ಹಿಡಿಯುವ ‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ, ಮತದಲ್ಲಿ ಮೇಲ್ಯಾವುದೋ...’ ಮತ್ತು ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗಾಯನದೊಂದಿಗೆ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ‘ಜಿಲ್ಲಾ ಮತ್ತು ಜಾನಪದ ಉತ್ಸವ’ದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭಾನುವಾರ ತೆರೆ ಬಿತ್ತು.

ಫೆ.23ರಿಂದ ಮೂರು ದಿನಗಳ ಕಾಲ ನಡೆದ ಉತ್ಸವದ ಕೊನೆಯ ದಿನ ಸ್ಥಳೀಯ ಕಲಾವಿದರ ವೈವಿಧ್ಯಮಯ ಪ್ರದರ್ಶನದ ಜೊತೆಗೆ ಹಾಡು, ಹಾಸ್ಯ ಹಾಗೂ ಸಾಹಸ ಪ್ರದರ್ಶನವು ಗಮನ ಸೆಳೆಯಿತು.

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಗೋವಿಂದ ಗೌಡ, ಮುತ್ತುರಾಜ್, ದಿವ್ಯಾ ಹಾಗೂ ಮಿಮಿಕ್ರಿ ರಾಜಣ್ಣ ಪ್ರೇಕ್ಷಕರನ್ನು ಹಾಸ್ಯದಲ್ಲಿ ಮುಳುಗಿಸಿದರು. ‘ಜೀ...ಜೀ...’ ಎಂದೇ ಖ್ಯಾತಿ ಪಡೆದ ಗೋವಿಂದ ಗೌಡ ಮತ್ತು ದಿವ್ಯಾ ಅವರ ‘ಪತಿ–ಪತ್ನಿ’ ಅಭಿನಯವು ಕಚುಗುಳಿ ಇಟ್ಟಿತು. ‘ಹೆಣ್ಣು ಮೇಲೋ ಗಂಡು ಮೇಲೋ’ ಎಂದು ವಾಗ್ವಾದ ನಡೆಸುತ್ತಲೇ ಗಂಡು ‘ಮೇಲು’(male)– ಹೆಣ್ಣು ಫೀಮೇಲ್ (female) ಎನ್ನುವ ಚಾಕ್ಯತೆ, ‘ಬಣ್ಣದ ತಗಡಿನ ತುತ್ತೂರಿ’ ಹಾಡನ್ನು ವಿವಿಧ ಪ್ರಕಾರ ಮತ್ತು ಗಾಯಕರ ಸ್ವರದಲ್ಲಿ ಪ್ರಸ್ತುತ ಪಡಿಸಿದ ರೀತಿ, ದಂಪತಿಗಳ ನಡುವಿನ ಸರಸ– ವಿರಸಗಳ ಘಟನಾವಳಿಗಳ ಮೂಲಕ ನಗುವಿನ ಅಲೆಯನ್ನು ಸೃಷ್ಟಿಸಿದರು. ರಾಜಣ್ಣ ಮಿಮಿಕ್ರಿ, ಆಂಗಿಕ ಅಭಿನಯ, ಉಚ್ಛಾರಗಳ ಎಡವಟ್ಟುಗಳು, ನೃತ್ಯದ ಮೂಲಕ ಮನ ಸೆಳೆದರು. ಮುತ್ತುರಾಜ್ ಮಾತಿನ ಮೂಲಕವೇ ಜನರನ್ನು ರಂಜಿಸಿದರು.

ADVERTISEMENT

ಆ ಬಳಿಕ ವೇದಿಕೆಯಲ್ಲಿ ಅನುರಣಿಸಿದ್ದು, ‘ಎಲ್ಲೋ ಜೋಗಪ್ಪ ನಿನ್ನ ಅರಮನೆ...’ ಖ್ಯಾತಿಯ ಜೋಗಿ ಸುನಿತಾ ಕಂಠಸಿರಿ ಹಾಗೂ ಅವರು ಹಾಕಿದ ಹೆಜ್ಜೆಗಳು. ‘ತೆರೆದಿದೆ ಮನ... ಓ ಬಾ ಅತಿಥಿ’ ಹಾಡಿನ ಮೂಲಕ ಸುನಿತಾ ಹಾಗೂ ವರ್ಷಾ ಸಂಗೀತ ಆರಂಭಿಸಿದರೆ, ಉದಯ್ ಅಂಕೋಲಾ ಹಳೇ ಹಾಡುಗಳ ಮೂಲಕವೇ ಮನ ಗೆದ್ದರು. ಕನ್ನಡದ ಶ್ರೇಷ್ಠ ಸಿನಿಮಾಗಳಲ್ಲೊಂದಾದ ಮಣಿರತ್ನಂ ನಿರ್ದೇಶನದ ‘ಪಲ್ಲವಿ ಅನುಪಲ್ಲವಿ’ಯ ‘ನಗುವಾ ನಯನಾ ಮಧುರ ಮೌನ...’ ಪ್ರೇಕ್ಷಕರ ನಡುವೆ ಪ್ರೀತಿಯ ಅಲೆ ಎಬ್ಬಿಸಿತು.

ಕ್ರೀಡಾಂಗಣದಲ್ಲಿ ಕಿಕ್ಕಿರಿದ ಪ್ರೇಕ್ಷಕರು ತಮ್ಮ ಮೊಬೈಲ್ ಲೈಟ್‌ ಆನ್ ಮಾಡಿ ಅತ್ತಿತ್ತ ಬೀಸುತ್ತಾ ಹಾಡಿಗೆ ತಲೆದೂಗುತ್ತಿದ್ದರೆ, ಬೆಳದಿಂಗಳ ರಾತ್ರಿಯಲ್ಲಿ ನಕ್ಷತ್ರ ಲೋಕವೇ ಭುವಿಗಿಳಿದಂತೆ ಭಾಸವಾಯಿತು. ಹಳೇಯ, ಮಧುರ, ಪ್ರಣಯ ಗೀತೆಗಳ ಜೊತೆಗೆ ಯುವಕರು ನರ್ತಿಸುವ ‘ಬಂದಾ ಶಿವಾ...’ ‘ಜೋಕೆ ನಾನು ಮಿಂಚಿನ ಬಳ್ಳಿ ಹಾಡುಗಳನ್ನೂ ಹಾಡಿದರು. ‘ದೂರದಿಂದ ಬಂದಂತ ಸುಂದರಾಂಗ ಜಾಣ...’ ಹಾಡಿಗೆ ಪ್ರೇಕ್ಷಕರ ನರ್ತನವು ಸ್ವತಃ ಗಾಯಕರೇ ಸಂಭ್ರಮಿಸುವಂತೆ ಮಾಡಿತು.

ಇದಕ್ಕೂ ಮೊದಲು ಕೊಪ್ಪಳದ ವೀರಸಿಂಗ್ ಮತ್ತು ತಂಡದವರು ನೀಡಿದ ಸಾಹಸ ಪ್ರದರ್ಶನವು ಮೈಝುಮ್ಮೆನಿಸುವಂತಿತ್ತು. ಕೊನೆ ದಿನದ ಕೊನೆ ಕ್ಷಣ ತನಕವೂ ಸಚಿವರು, ಜಿಲ್ಲಾಧಿಕಾರಿ, ಎಸ್ಪಿ, ಶಾಸಕರು ಸೇರಿದಂತೆ ಬಹುತೇಕ ಗಣ್ಯರು ದಂಪತಿ ಸಮೇತ ಹಾಜರಾಗಿ ಉತ್ಸವಕ್ಕೂ ಕೌಟುಂಬಿಕ ಸ್ಪರ್ಶ ನೀಡಿದರು. ಮಧ್ಯರಾತ್ರಿ 2 ಗಂಟೆ 10 ನಿಮಿಷವಾದರೂ ಇನ್ನೊಂದು ಹಾಡು, ಇನ್ನೊಂದು ಹಾಡು ಎಂಬ ಪ್ರೇಕ್ಷಕರ ಬೇಡಿಕೆಯು ಜಿಲ್ಲೆಯ ಜನತೆಯ ಸಾಂಸ್ಕೃತಿಕ ಹಿರಿಮೆ ಹಾಗೂ ಉತ್ಸವದ ಯಶಸ್ಸಿಗೆ ಸಾಕ್ಷಿಯಂತಿತ್ತು. ‘ಸರಿಹೊತ್ತಿನಲ್ಲಿ ಇಷ್ಟೊಂದು ಜನ ಸಂಭ್ರಮಿಸುವುದೇ ನಮಗೊಂದು ವಿಸ್ಮಯ’ ಎಂಬ ಜೋಗಿ ಸುನಿತಾ ಹಾಗೂ ಗಾಯಕರು ಪದೇ ಪದೇ ಉದ್ಘರಿಸಿದರು.

* * 

ಜಿಲ್ಲಾ ಮತ್ತು ಜಾನಪದ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾವೇರಿಗೆ ಹೊಸ ಮೆರುಗು ನೀಡಿವೆ
–ರುದ್ರಪ್ಪ ಲಮಾಣಿ
ಜಿಲ್ಲಾ ಉಸ್ತುವಾರಿ ಸಚಿವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.