ADVERTISEMENT

ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 6:00 IST
Last Updated 10 ಫೆಬ್ರುವರಿ 2012, 6:00 IST

ಹಾವೇರಿ: ಆಸ್ತಿ ವಿವಾದಕ್ಕೆ ಸಂಬಂದಿಸಿದಂತೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದ ನಾಲ್ಕು ಜನ ಆರೋಪಿಗಳಿಗೆ ಸ್ಥಳಿಯ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ರಾಮನಗೌಡ ಹನುಮಂತಗೌಡ್ರ, ಶಿವಲಿಂಗನಗೌಡ ಹನುಮಂತಗೌಡರ, ಶಂಕರಗೌಡ ಹನುಮಂತಗೌಡ್ರ ಹಾಗೂ ಫಕ್ಕೀರಡ್ಡಿ ನಿಂಗರಡ್ಡಿ ಮುಂಡವಾಡ ಎಂಬುವವರೇ ಜೀವಾವಧಿ ಶಿಕ್ಷೆಗೆ ಒಳಗಾದ ಆರೋಪಿಗಳು.

ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಬೈಲಮಾದಾಪುರದ ಬಸನಗೌಡ ಭೀಮನಗೌಡ ಪಾಟೀಲ ಎಂಬ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿತ್ತಲ್ಲದೇ ಅದೇ ಘಟನೆಯಲ್ಲಿ ಸುರೇಶಗೌಡ ಭೀಮಗೌಡ ದೊಡ್ಡಗೌಡರ ಎಂಬವರನ್ನು ಮಾರಕಾಸ್ತ್ರಗಳಿಂದ ಹೊಡೆದು ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದರ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ಸಿ.ರಾಮಕೃಷ್ಣಯ್ಯ ಅವರು, ಪರ,ವಿರೋಧ ವಾದಗಳನ್ನು ಆಲಿಸಿದ ನಂತರ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದರು.

ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಶಿವನಗೌಡ ಹನುಮಂತಗೌಡ್ರ, ವೀರನಗೌಡ ದೊಡ್ಡಬಸನಗೌಡ ಹನುಮಂತಗೌಡ್ರ, ವಿರುಪಾಕ್ಷಗೌಡ ಶಿವಲಿಂಗನಗೌಡ ಹನುಮಂತಗೌಡ್ರ, ಫಕ್ಕೀರಡ್ಡಿ ನಿಂಗರಡ್ಡಿ ಮುಂಡವಾಡ, ಈರಪ್ಪ ಫಕ್ಕೀರಪ್ಪ ಸವೂರ, ಹನುಮಂತಪ್ಪ ನೀಲಪ್ಪ ಉಂಡಿ ಎಂಬವರಿಗೆ 3 ವರ್ಷ ಜೈಲು ಶಿಕ್ಷೆ ತಲಾ 2 ಸಾವಿರ ರೂ.ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕ ವಿ.ಜಿ. ಭಂಡಿ ವಕಾಲತ್ತು ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.