ADVERTISEMENT

ಕ್ರಮಕ್ಕಾಗಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2011, 10:55 IST
Last Updated 14 ಜನವರಿ 2011, 10:55 IST

ಹಿರೇಕೆರೂರ: ತಾಲ್ಲೂಕಿನ ತಡಕನಹಳ್ಳಿ ಗ್ರಾಮ ಪಂಚಾಯಿತಿಯ ಪಿಡಿಒ ಮೇಲೆ ಅದೇ ಗ್ರಾ.ಪಂ. ಅಧ್ಯಕ್ಷ ಬಸನಗೌಡ ಪಾಟೀಲ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳ ಸಂಘದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಹಸೀಲ್ದಾರರಿಗೆ ಮನವಿ ಅರ್ಪಿಸಲಾಯಿತು.

‘ಪಿಡಿಒ ಗುಡ್ಡಪ್ಪ ನಾಯಕ ಪಂಚಾಯಿತಿ ವಸತಿ ಯೋಜನೆಯ ಬಗ್ಗೆ ವಿವರ ನೀಡುತ್ತಿರುವಾಗ ಗ್ರಾಪಂ ಅಧ್ಯಕ್ಷ ಬಸನಗೌಡ ಪಾಟೀಲ ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಕೈಯಿಂದ ಹೊಡೆದು ಹಲ್ಲೆ ನಡೆಸಿ, ಕೆಲಸಕ್ಕೆ ಅಡ್ಡಿ ಮಾಡಿದ್ದಾರೆ’ ಎಂದು ದೂರಲಾಗಿದೆ. ಈ ಬಗ್ಗೆ ರಟ್ಟೀಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಹಲ್ಲೆಯ ಹಿನ್ನೆಲೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳು ಗುರುವಾರ ಕಪ್ಪು ಪಟ್ಟಿ ಕಟ್ಟಿಕೊಂಡು ಕೆಲಸ ನಿರ್ವಹಿಸಿದ್ದಾರೆ. ಮಧ್ಯಾಹ್ನ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಅರ್ಪಿಸಿದ ನಂತರ ತಹಸೀಲ್ದಾರ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಮನವಿ ಸಲ್ಲಿಸಿದರು.

ಪಿ.ಡಿ.ಒ.ಗಳ ಮೇಲೆ ಪದೇಪದೇ ಹಲ್ಲೆ ಪ್ರಕರಣಗಳು ನಡೆಯುತ್ತಿವೆ. ಅನೇಕರು ಇದರಿಂದ ನೌಕರಿ ತೊರೆದು ಹೋಗಿದ್ದು, ಉಳಿದವರು ಆತಂಕದ ಸ್ಥಿತಿ ಎದುರಿಸುತ್ತಿದ್ದಾರೆ.ಹಲ್ಲೆ ಪ್ರಕರಣಗಳು ನಡೆಯದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಪಿಡಿಒ ಗುಡ್ಡಪ್ಪ ನಾಯಕ ಮೇಲೆ ಹಲ್ಲೆ ನಡೆಸಿದ ತಡಕನಹಳ್ಳಿ ಗ್ರಾ.ಪಂ. ಅಧ್ಯಕ್ಷ ಬಸನಗೌಡ ಪಾಟೀಲ ಇವರನ್ನು ತಕ್ಷಣ ಬಂಧಿಸಿ, ಅವರ ಪಂಚಾಯಿತಿ ಸದಸ್ಯತ್ವ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ಸಂಘದ ಪದಾಧಿಕಾರಿಗಳಾದ ಬಿ.ಎಸ್. ಪಾಟೀಲ, ವೆಂಕಟರಾಮ, ಬಿ.ಕೆ.ನಾಗರಾಜಪ್ಪ, ನಾಗರತ್ನಾ ಮುದ್ದಳವರ, ಗುಡ್ಡಪ್ಪ ನಾಯಕ, ನಾಗರಾಜಪ್ಪ ಹಡಗಲಿ, ದೇವರಾಜ ದೊಡ್ಡಕಾರಗಿ, ಕೇವಶಮೂರ್ತಿ ರಾಠೋಡ, ಮನುಕುಮಾರ, ಲಿಂಗರಾಜ, ಸತೀಶ ಮೂಡೇರ, ಕೆ.ಜಿ.ಅಡಿವೇರ, ಎಸ್.ಎಂ.ಬಣಕಾರ, ಶೃತಿ ಕೆ.ಎನ್., ಎಸ್.ಎಚ್. ಮಾವಿನತೋಪ, ಆರ್.ಎಸ್. ಪಾಟೀಲ, ಎ.ಎಸ್. ಸೆರೆಗಾರ, ಎ.ಎಂ. ಸವಣೂರ, ಪ್ರಕಾಶ ಮಳೆಹೊಳಿ, ಎನ್.ಎಂ. ಕೋಣಸಾಲಿ, ಎಚ್.ಎನ್. ಪಾಟೀಲ, ಮಾನೆ, ಗುರುಪ್ರಸಾದ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.