ADVERTISEMENT

ಗುಟ್ಕಾ ಮಾರಾಟ: ಕಾಲಾವಕಾಶ ನೀಡಲು ಮನವಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 5:59 IST
Last Updated 4 ಜೂನ್ 2013, 5:59 IST

ಹಾವೇರಿ: ಕಿರುಕುಳ ವ್ಯಾಪಾರಸ್ಥರು ಸಂಗ್ರಹಿಸಿರುವ ಗುಟ್ಕಾ ಪ್ಯಾಕೆಟ್‌ಗಳನ್ನು ಖಾಲಿ ಮಾಡಲು ಮೂರು ವಾರಗಳ ಕಾಲ ಸಮಯ ನೀಡಬೇಕು ಎಂದು ಹುಬ್ಬಳ್ಳಿಯ ಉತ್ತರ ಕರ್ನಾಟಕದ ಪಾನ್ ಮಸಲಾ ಮತ್ತು ಕನ್‌ಫೆಕ್ಷ್ಯನರಿ ವ್ಯಾಪಾರಸ್ಥರ ಸಂಘ ಮುಖ್ಯಮಂತ್ರಿಗಳ್ನನು ಒತ್ತಾಯಿಸಿದ್ದಾರೆ.

ಭಾನುವಾರ ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಉತ್ತರ ಕರ್ನಾಟಕ ಪಾನ್ ಮಸಾಲಾ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು, ಸಾರ್ವಜನಿಕರ ಹಿತದೃಷ್ಟಿಯಿಂದ ಗುಟ್ಕಾ ನಿಷೇಧಿಸಿರುವುದನ್ನು ಬೆಂಬಲಿಸುತ್ತೇವೆ ಮತ್ತು ಗುಟ್ಕಾ ನಿಷೇಧ ಆದೇಶವನ್ನು ಪಾಲೀಸುತ್ತೇವೆ ಎಂದು ಹೇಳಿದ್ದಾರೆ.

ಆದರೆ, ಏಕಾಏಕಿ ಗುಟ್ಕಾ ನಿಷೇಧ ಮಾಡಿರುವುದರಿಂದ ಬಹಳಷ್ಟು ಸಣ್ಣ-ಪುಟ್ಟ ವ್ಯಾಪಾರಸ್ಥರು ಬೀದಿಗೆ ಬರಬೇಕಾಗುತ್ತದೆ. ಅದು ಅಲ್ಲದೇ ಈಗಾಗಲೇ ಕಿರುಕುಳ ವ್ಯಾಪಾರಸ್ಥರು ಕೆಲವೊಂದಿಷ್ಟು ಗುಟ್ಕಾ ಬಾಕ್ಸ್‌ಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಅವುಗಳನ್ನು ಖಾಲಿ ಮಾಡಲು ಕಾಲವಕಾಶ ನೀಡದಿದ್ದರೆ ಲಕ್ಷಾಂತರ ರೂಪಾಯಿ ಹಾನಿಯಾಗುತ್ತದೆ. ಅದಕ್ಕಾಗಿ ಮೂರು ವಾರಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಪಾನ್ ಮಸಲಾ ಮತ್ತು ಕನ್‌ಫೆಕ್ಷ್ಯನರಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಲಲಿತ ಚೊಪ್ರಾ, ಉಪಾಧ್ಯಕ್ಷ ರವಿ ಎಲಿಗಾರ, ಕಾರ್ಯದರ್ಶಿ ಚನ್ನವೀರಪ್ಪ ಡಿಗ್ಗಿ(ಅನಿಲ), ಸಹಕಾರ್ಯದರ್ಶಿ ಮಹಾಂತೇಶ ಫಿರಂಗಿ, ಖಜಾಂಚಿ ಮಂಜುನಾಥ ಪಾವಟೆ ಸೇರಿದಂತೆ ಅನೇಕರು ಹಾಜರಿದ್ದರು.

ಲಮಾಣಿಗೆ ಸ್ಥಾನ ನೀಡಲು ಒತ್ತಾಯ
ಹಾವೇರಿ: ಎರಡನೇ ಬಾರಿಗೆ ಶಾಸಕ ರಾಗಿ ಆಯ್ಕಯಾಗಿರುವ ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಅವರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನಿಡಬೇಕು ಎಂದು ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಜಿಲ್ಲಾ ಪದಾಧಿಕಾರಿಗಳು ಮುಖ್ಯಮಂತ್ರಿ ಗಳನ್ನು ಒತ್ತಾಯಿಸಿದ್ದಾರೆ.

ಭಾನುವಾರ ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆಗೆ ಆಗಮಿಸಿದ ಸಂದರ್ಭದಲ್ಲಿ ಈ ಕುರಿತು ಮನವಿ ಸಲ್ಲಿಸಿದ ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ಜಿಲ್ಲಾ ಪದಾಧಿಕಾರಿಗಳು, ಬಂಜಾರ ಸಮಾಜದಿಂದ ವಿಧಾನಸಭೆಗೆ ಆಯ್ಕೆ ಯಾದ ರುದ್ರಪ್ಪ ಲಮಾಣಿ ಅವರು, ದಕ್ಷ ಮತ್ತು ಸಮರ್ಥ ನಾಯಕರು. ಅವರಿಗೆ ರಾಜ್ಯದ ಅನುಸೂಚಿತ ಜಾತಿ ಮತ್ತು ಅನುಸೂಚಿತ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ಅಥವಾ ರಾಜ್ಯದ ಬಂಜಾರ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಲು ಮನವಿ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಬಳ್ಳಾರಿ ಜಿಲೆಯ್ಲ ಹೂವಿನಹಡಗಲಿ ಕ್ಷೇತ್ರದ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಅವರಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಗೌರವಾಧ್ಯಕ್ಷ ಎಲ್.ಎಲ್.ನಾಯಕ, ಅಧ್ಯಕ್ಷ ಕೃಷ್ಣ ನಾಯಕ, ಉಪಾಧ್ಯಕ್ಷ ಡಾ.ಎಂ.ಆರ್.ಚವ್ಹಾಣ, ತೇಜಪ್ಪ ಎಚ್.ಲಮಾಣಿ, ಜೆ.ಉಮಾ ಶಂಕರ, ಪೂರಪ್ಪ ಎಚ್.ನಾಯಕ, ಕಾರ್ಯದರ್ಶಿ ರಾಮಪ್ಪ ಎಚ್.ಲಮಾಣಿ ಸೇರಿದಂತೆ ನೂರಾರು ಬಂಜಾರ ಸಮುದಾಯದ ಮುಖಂಡರು ಹಾಜರಿದ್ದರು.

ಮಾಹಿತಿಗೆ ಕೋರಿಕೆ
ಹಿರೇಕೆರೂರ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಭಾಷೆ  ಕನ್ನಡ ವಿಷಯಕ್ಕೆ ನೂರಕ್ಕೆ ನೂರು ಅಂಕ ಗಳಿಸಿದ  ವಿದ್ಯಾರ್ಥಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಗೌರವಿಸಲಿದೆ. ಕಾರಣ ತಾಲ್ಲೂಕಿನಲ್ಲಿ ಇಂತಹ ವಿದ್ಯಾರ್ಥಿಗಳ ಮಾಹಿತಿಯನ್ನು ವಿದ್ಯಾಸಂಸ್ಥೆಗಳ ಮುಖ್ಯಸ್ಥರು   ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಪಿ.ಗೌಡರ  (ಮೊ.9481281809, 94482 59614) ಇವರಿಗೆ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.