ADVERTISEMENT

ಜಾನಪದ ಕಲೆ ಉಳಿಸಿ: ಮೂಲಗಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 6:19 IST
Last Updated 3 ಜುಲೈ 2013, 6:19 IST

ಬ್ಯಾಡಗಿ: ಪಾಶ್ಚಿಮಾತ್ಯ ಸಂಸ್ಕೃತಿಯ ಅಬ್ಬರಕ್ಕೆ ಭಾರತೀಯ ಜೀವನಾಡಿಯಾಗಿದ್ದ ದೇಸಿ ಜಾನಪದ ಮಾಯವಾಗುತ್ತಿದೆ, ಈ ಹಿನ್ನೆಲೆಯಲ್ಲಿ ಯುವಕರು ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ ಎಂದು ಜಾನಪದ ವಿದ್ವಾಂಸ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಡಾ. ರಾಮು ಮೂಲಗಿ ಹೇಳಿದರು.

ಸೋಮವಾರ ಪಟ್ಟಣದ ಎಸ್‌ಎಸ್‌ಪಿಎನ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಏರ್ಪಡಿಸಿದ್ದ `ಜನರತ್ತ ಜಾನಪದ ವಿಶ್ವವಿದ್ಯಾಲಯ' ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದರು. ಮೊದಲು ಗ್ರಾಮೀಣ ಜನತೆಯ ಜೀವನದಲ್ಲಿ ಹಾಸುಹೊಕ್ಕಾಗಿದ್ದ  ಹತ್ತಾರು ಜಾನಪದ ಕಲೆ ಹಾಗೂ ಕಲಾವಿದರು ನಿರ್ಲಕ್ಷ್ಯಕ್ಕೊಳಗಾಗುತ್ತಿದ್ದಾರೆ. ದೇಶೀಯ ಪರಂಪರೆಯಿಂದ ಬೆಳೆದುಬಂದ ಜಾನಪದ ಕಲೆ ಮತ್ತು ಸಾಹಿತ್ಯವನ್ನು ಮುಂದಿನ ಜನಾಂಗಕ್ಕೆ ಪರಿಚಯಿಸುವ ಉದ್ದೇಶದಿಂದ `ಜನರತ್ತ ಜಾನಪದ ವಿಶ್ವವಿದ್ಯಾಲಯ' ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಲ್.ವಿ. ಮಾಯೇರ ಮಾತನಾಡಿ ಇಂದಿನ ವಿಜ್ಞಾನ ಹಾಗೂ ತಂತ್ರಜ್ಞಾನ ಕಾಲದಲ್ಲಿ ನಮ್ಮ ದೇಶದ ಪರಂಪರೆ ಬಿಂಬಿಸುವ ದೊಡ್ಡಾಟ, ಸಣ್ಣಾಟ, ಪಾರಿಜಾತ, ಬೀಸುವ ಪದ, ಕುಟ್ಟುವ ಪದ, ಲಾವಣಿ ಪದ, ಹಂತಿಪದ, ಗೀಗೀಪದ ಹಾಗೂ ಸೋಬಾನೆಗಳಂತಹ ಅನೇಕ ಜಾನಪದ ಕಲಾ ಪ್ರಕಾರಗಳು ಕಣ್ಮರೆಯಾಗುವ ಹಂತ ತಲುಪಿವೆ ಎಂದರು.

ಜಾನಪದ ಕಲಾವಿದರಾದ ಬಸವರಾಜ ಶಿಗ್ಗಾಂವ, ವೀರೇಶ ಬಡಿಗೇರ, ಬಿ.ಎಸ್.ಸುಧಾಕರ ಜಾನಪದ ಗೀತೆಗಳನ್ನು ಹಾಡುವ ಮೂಲಕ ಹಿಂದಿನ ಪ್ರಪಂಚವನ್ನು ನೆನಪಿಸಿದರು.  ಸವಿತಾ ಸಾವಕ್ಕನವರ ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕ ಎಸ್.ಕೆ.ಆರಾಧ್ಯಮಠ ಸ್ವಾಗತಿಸಿದರು. ಎಂ.ಕೆ.ಬಳ್ಳಾರಿ ನಿರ್ವಹಿಸಿದರು. ಬಿ.ಕೆ. ಹೆಡಿಯಾಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.