ADVERTISEMENT

ಜಿಲ್ಲೆಯಾದ್ಯಂತ 220 ಮಿ.ಮೀ.ಮಳೆ

ಜಿಟಿ ಜಿಟಿ ಮಳೆಯಿಂದ ಮಲೆನಾಡು ವಾತಾವರಣ

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 6:45 IST
Last Updated 4 ಜುಲೈ 2013, 6:45 IST

ಹಾವೇರಿ: ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಬಿಟ್ಟು ಬಿಡದೇ ಜಿಟಿ ಜಿಟಿ ಮಳೆ ಬೀಳುತ್ತಿದ್ದು, ಬುಧವಾರ ಒಂದೇ ದಿನ 220.2 ಮಿ.ಮೀ. ಮಳೆಯಾಗಿದೆ. ಯಾವುದೇ ರೀತಿಯ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಮಂಗಳವಾರ ಮಧ್ಯಾಹ್ನದಿಂದಲೇ ಆರಂಭವಾದ ಮಳೆ ಬುಧವಾರ ಸಂಜೆವರೆಗೆ ಅಂದರೆ ಒಂದೂವರೆ ದಿನ ಸತತ ಮಳೆ ಸುರಿಯುತ್ತಿದ್ದು, ಜನರು ಮನೆ ಬಿಟ್ಟು ಹೊರ ಬರದ ಸ್ಥಿತಿ ನಿರ್ಮಾಣವಾಗಿತ್ತಲ್ಲದೇ, ಅದರಲ್ಲಿಯೇ ಮಕ್ಕಳು, ನೌಕರರು ಮಳೆಯಲ್ಲಿಯೇ ಶಾಲೆ, ಕಾಲೇಜು, ಕಚೇರಿಗೆ ತೆರಳುವ ದೃಶ್ಯ ಸಾಮಾನ್ಯವಾಗಿತ್ತು.

ಹಾವೇರಿ ನಗರ ಸೇರಿದಂತೆ ತಾಲ್ಲೂಕಿನ ಇತರಡೆ, ಬ್ಯಾಡಗಿ ಪಟ್ಟಣ, ಹಾನಗಲ್, ಶಿಗ್ಗಾವಿ, ಸವಣೂರು ಹಾಗೂ ರಾಣೆಬೆನ್ನೂರಿನಲ್ಲಿಯೂ ಉತ್ತಮ ರೀತಿಯ ಮಳೆ ಬಿದ್ದಿದೆ.

ತಾಲ್ಲೂಕುವಾರು ಮಳೆ ವಿವರ: ಜಿಲ್ಲೆಯಾದ್ಯಂತ ಬುಧವಾರ 220.2 ಮಿ.ಮೀ. (ಸರಾಸರಿ:31.5 ಮಿ.ಮೀ) ಮಳೆಯಾಗಿದ್ದು, ಹಿರೇಕೆರೂರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಎಂದರೆ, 58.2 ಮಿ.ಮೀ.ಮಳೆಯಾಗಿದ್ದರೆ, ಅತಿ ಕಡಿಮೆ ಹಾವೇರಿಯಲ್ಲಿ 14.6ಮಿ.ಮೀ ಮಳೆ ಬಿದ್ದಿದೆ. ರಾಣೆಬೆನ್ನೂರಿನಲ್ಲಿ 22.6, ಬ್ಯಾಡಗಿಯಲ್ಲಿ 25.0 ಮಿ.ಮೀ., ಹಾನಗಲ್‌ನಲ್ಲಿ 58.2 ಮಿ.ಮೀ., ಸವಣೂರಿನಲ್ಲಿ 17.0 ಹಾಗೂ ಶಿಗ್ಗಾವಿ ತಾಲ್ಲೂಕಿನಲ್ಲಿ 24.8 ಮಿ.ಮೀ. ಮಳೆಯಾಗಿದೆ.

ತಂಪೆರೆದ ಮಳೆ: ಜಿಲ್ಲೆಯಾದ್ಯಂತ ಬುಧವಾರ ಬಿದ್ದ ಮಳೆಯಿಂದ ಇಡೀ ವಾತಾವರಣ ತಂಪಾಗಿದ್ದು, ಮಲೆನಾಡಿನ ಪರಿಸರ ನೆನಪಿಸುವಂತಿದೆ. ಮನೆಗಳಿಂದ ಹೊರ ಬರಬೇಕಾದರೆ, ಕಡ್ಡಾಯವಾಗಿ ಛತ್ರಿ ಇಲ್ಲದೇ ರೇನ್‌ಕೋಟ್‌ಗಳನ್ನು ಧರಿಸಿ ಬರುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.

ಒಂಚರಂಡಿ ಕಾಮಗಾರಿ ನಡೆದ ಹಾವೇರಿ ನಗರದ ಕೆಲವು ಪ್ರದೇಶದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಜಿಟಿ ಜಿಟಿ ಮಳೆಯಿಂದ ಆ ರಸ್ತೆಗಳು ಕೆಸರು ಗದ್ದೆಯಂತಾಗಿವೆ. ಜನರು ಹಾಗೂ ವಾಹನ ಚಾಲಕರು ಓಡಾಡಲು ಹರಸಾಹಸ ಪಡಬೇಕಾಗಿದೆ. ಕೆಲವಡೆ ಡಾಂಬರ ರಸ್ತೆಗಳಲ್ಲಿಯೂ ನೀರು ನಿಂತಿದೆ. ಅದೇ ರಸ್ತೆಯಲ್ಲಿ ವಾಹನಗಳು ಓಡಾಡುವುದರಿಂದ ರಸ್ತೆಗಳು ಹಾಳಾಗಿ ಕೆಸರು ನಿಲ್ಲುವಂತೆ ಮಾಡಿದೆ.

ಒಳಚರಂಡಿ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸುವಂತೆ ಇಲ್ಲವೇ ಮಳೆಗಾಲ ಮುಗಿಯುವವರೆಗೆ ಸ್ಥಗಿತಗೊಳಿಸುವಂತೆ ನಗರದ ನಾಗರಿಕರು ಒತ್ತಾಯಿಸಿದ್ದಾರೆ. ಮಳೆಗಾಲದಲ್ಲಿಯೂ ಕಾಮಗಾರಿ ನಡೆಸಿರುವುದರಿಂದ ರಸ್ತೆಗಳಲ್ಲಿ ಗುಂಡಿಗಳನ್ನು ತೋಡಿ ರಸ್ತೆಯಲ್ಲಿ ಮಣ್ಣು ಹಾಕಲಾಗುತ್ತದೆ. ಮಳೆಯಿಂದ ಆ ಮಣ್ಣು ಕೆಸರಾಗಿ ಜನರು ಓಡಾಡದ ಸ್ಥಿತಿ ನಿರ್ಮಾಣವಾಗುತ್ತಿದೆ. ಆದಕಾರಣ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದು ಹೇಳಿದ್ದಾರೆ.

ನದಿಗಳಿಗೆ ನೀರು: ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ಜಿಲ್ಲೆಯಲ್ಲಿ ಹರಿದಿರುವ ನಾಲ್ಕು ನದಿಗಳ ಪೈಕಿ ಮೂರು ನದಿಗಳು ತುಂಬಿ ಹರಿಯುತ್ತಿವೆ. ಇದೇ ರೀತಿ ಮಳೆ ಮುಂದುವರೆದರೆ, ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗುವ ಸಾಧ್ಯತೆಯಿದೆ.

ಜಿಲ್ಲೆಯ ಪ್ರಮುಖ ನದಿಗಳಾದ ತುಂಗಭದ್ರಾ, ಧರ್ಮಾ, ವರದಾ ಹಾಗೂ ಕುಮುದ್ವತಿಗಳಲ್ಲಿ ತುಂಗಭದ್ರಾ, ವರದಾ ಹಾಗೂ ಧರ್ಮಾ ನದಿಗಳು ತುಂಬಿ ಹರಿಯುತ್ತಿರುವುದು ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿವೆ.

ಜಿಲ್ಲಾಡಳಿತ ಮನವಿ: ಜಿಲ್ಲೆಯಲ್ಲಿ ಎರಡು ದಿನಗಳಿಂದ ಜಿಟಿ ಜಿಟಿ ಮಳೆ ಬೀಳುತ್ತಿದ್ದು, ಈ ಮಳೆಯಿಂದ ಹಳೇಯ ಮಣ್ಣಿನ ಮನೆಗಳು ಕುಸಿಯುವ ಸಾಧ್ಯತೆಯಿದೆ. ಆದಕಾರಣ ಮಣ್ಣಿನ ಮನೆಯಲ್ಲಿ ವಾಸಿಸುವ ಜನರು ಮಳೆಗಾಲ ಮುಗಿಯುವವರೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಇಲ್ಲವೇ ಎಚ್ಚರಿಕೆಯಿಂದ ವಾಸ ಮಾಡಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.