ADVERTISEMENT

ಜಿಲ್ಲೆಯಿಂದ ಗೆದ್ದ ಮೊದಲ ಬಿಜೆಪಿ ಶಾಸಕ

ಮೊದಲ ಬಾರಿ ಶಾಸಕರಾದ ಅನುಭವ ಹಂಚಿಕೊಂಡ ಶಾಸಕ ಯು.ಬಿ.ಬಣಕಾರ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 10:01 IST
Last Updated 21 ಮಾರ್ಚ್ 2018, 10:01 IST
ಜಿಲ್ಲೆಯಿಂದ ಗೆದ್ದ ಮೊದಲ ಬಿಜೆಪಿ ಶಾಸಕ
ಜಿಲ್ಲೆಯಿಂದ ಗೆದ್ದ ಮೊದಲ ಬಿಜೆಪಿ ಶಾಸಕ   

* ಕೆ.ಎಚ್. ನಾಯಕ

ಹಿರೇಕೆರೂರ: 1994ರಲ್ಲಿ ಅಖಂಡ ಧಾರವಾಡ ಜಿಲ್ಲೆಯ 17 ತಾಲ್ಲೂಕುಗಳಿಂದ ಬಿಜೆಪಿ ಶಾಸಕರಾಗಿ ಗೆಲುವು ಸಾಧಿಸಿದವರು ನಾಲ್ವರು ಮಾತ್ರ. ಇವರಲ್ಲಿ ಹಿರೇಕೆರೂರ ಕ್ಷೇತ್ರದಿಂದ ಆಯ್ಕೆಯಾದ ಯು.ಬಿ.ಬಣಕಾರ ಒಬ್ಬರು. ಹಾವೇರಿ ಜಿಲ್ಲೆಯಿಂದ ಆಯ್ಕೆಯಾದ ಬಿಜೆಪಿಯ ಮೊದಲ ಶಾಸಕ ಎಂಬ ಹೆಗ್ಗಳಿಕೆ ಇವರದ್ದು.

ತಾವು ಮೊದಲ ಬಾರಿಗೆ ಶಾಸಕರಾದ ಅನುಭವವನ್ನು ಅವರು ‘ಪ್ರಜಾವಾಣಿ’ ಜೊತೆಗೆ ಹಂಚಿಕೊಂಡರು.

ADVERTISEMENT

‘1994ರಲ್ಲಿ ಶಾಸಕನಾಗಬೇಕು ಎಂಬ ಆಕಾಂಕ್ಷೆಯೇ ಇರಲಿಲ್ಲ; ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಒತ್ತಾಯದ ಮೇರೆಗೆ ಅನಿವಾರ್ಯವಾಗಿ ಚುನಾವಣೆಗೆ ಸ್ಪರ್ಧಿಸಿ, ಶಾಸಕನಾಗಿ ಆಯ್ಕೆಯಾದೆನು. ಆ ಚುನಾವಣೆಯಲ್ಲಿ ಹೆಚ್ಚೆಂದರೆ ₹ 90 ಸಾವಿರ ಖರ್ಚಾಗಿರಬಹುದು. ಅದೂ ವಾಹನಗಳಿಗೆ ಡೀಸೆಲ್ ಹಾಕಲು ಮಾಡಿದ ಖರ್ಚು’ ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು.

‘ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸುವಂತೆ ಯಡಿಯೂರಪ್ಪ ಅವರು ತಿಳಿಸಿದರು. ಆ ಸಂದರ್ಭದಲ್ಲಿ ವಕೀಲ ವೃತ್ತಿ ಆರಂಭಿಸಿ 10 ವರ್ಷಗಳಾಗಿತ್ತು. ನಾನು ವೃತ್ತಿಯಲ್ಲಿ ಉತ್ತುಂಗ ಸ್ಥಾನದಲ್ಲಿದ್ದೆ. ಹಾಗಾಗಿ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಅಪ್ಪಾಜಿ (ಮಾಜಿ ಸ್ಪೀಕರ್ ಬಿ.ಜಿ.ಬಣಕಾರ) ಅಥವಾ ಮಾಜಿ ಸಚಿವ ಜಿ.ಬಿ.ಶಂಕರರಾವ್ ಪೈಕಿ ಯಾರಿಗಾದರೂ ಟಿಕೆಟ್ ಕೊಡಿ, ಗೆಲ್ಲಿಸುತ್ತೇವೆ. ನಾನು ವಕೀಲ ವೃತ್ತಿಯನ್ನು ಮುಂದುವರಿಸುತ್ತೇನೆ ಎಂದು ಹೇಳಿದ್ದೆನು’ ಎಂದು ಯು.ಬಿ.ಬಣಕಾರ ವಿವರಿಸಿದರು.

‘ಜನತೆ ನಿಮ್ಮ ಹೆಸರು ಹೇಳುತ್ತಿದ್ದಾರೆ, ಜನರ ವಿರುದ್ಧ ಹೋಗಲು ಆಗುವುದಿಲ್ಲ. ನೀವೇ ಸ್ಪರ್ಧಿಸಬೇಕು ಎಂದು ಯಡಿಯೂರಪ್ಪ ಹಾಗೂ ಪದ್ಮನಾಭ ಭಟ್‌ ಅವರು ಒತ್ತಾಯಿಸಿದರು. ಇದರಿಂದ ಅನಿವಾರ್ಯವಾಗಿ ಸ್ಪರ್ಧೆ ಮಾಡಬೇಕಾಯಿತು. ಜನತೆ ಭಾರಿ ಬಹುಮತದಿಂದ ಗೆಲ್ಲಿಸಿ, ವಿಧಾನಸಭೆ ಪ್ರವೇಶಕ್ಕೆ ಅವಕಾಶ ಕಲ್ಪಿಸಿದರು’ ಎಂದರು.

‘ಆಗ ಚುನಾವಣೆಯಲ್ಲಿ ಫ್ಲೆಕ್ಸ್, ಬ್ಯಾನರ್‌ಗಳ ಅಬ್ಬರ ಇರಲಿಲ್ಲ, ಕಾರ್ಯಕರ್ತರೊಂದಿಗೆ ಕರಪತ್ರಗಳ ಮೂಲಕ ಮನೆಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದೆವು. ಅನೇಕ ಕಡೆ ಸಣ್ಣಪುಟ್ಟ ವೆಚ್ಚಗಳನ್ನು ಕಾರ್ಯಕರ್ತರೇ ನೋಡಿಕೊಳ್ಳುತ್ತಿದ್ದರು. ಈಗ ವೆಚ್ಚ ಸಾಕಷ್ಟು ಹೆಚ್ಚಿದೆ’ ಎಂದರು.

‘ನಂತರ 99ರಲ್ಲಿ ನನ್ನ ಮತ್ತು ಎಸ್.ಎಸ್.ಪಾಟೀಲ ಮಧ್ಯೆ ಮತ ವಿಭಜನೆಯಾಗಿ ಸೋಲಿಗೆ ಕಾರಣವಾಯಿತು. ಸತತ 3 ಸೋಲುಗಳ ನಂತರ ಕಳೆದ ಬಾರಿ ಜನತೆ ಮತ್ತೆ ನನ್ನನ್ನು ಗೆಲ್ಲಿಸಿದರು. ನಮ್ಮ ತಾಲ್ಲೂಕಿನಲ್ಲಿ 2004ರವರೆಗೆ ಒಳ್ಳೆಯ ರಾಜಕಾರಣ ಇತ್ತು. ನಂತರ ಸಾಕಷ್ಟು ಬದಲಾವಣೆಯಾಗಿದೆ’ ಎಂದರು.

‘ಎರಡು ಬಾರಿ ಶಾಸಕನಾಗಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿರುವೆ. ಪ್ರತಿ ಹಳ್ಳಿಹಳ್ಳಿಗೆ ಉತ್ತಮ ರಸ್ತೆ ನಿರ್ಮಿಸಲು, ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು, ಕೃಷಿಗೆ ಪೂರಕ ನೀರಾವರಿ ಯೋಜನೆಗಳ ಜಾರಿಗೆ, ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು, ಅನಾರೋಗ್ಯದಿಂದ ಬಳಲುತ್ತಿದ್ದ ಸಾವಿರಾರು ಜನರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸಿದ್ದು, ಮಕ್ಕಳಿಗೆ ಉತ್ತಮ ಶೈಕ್ಷಣಿಕ ಸೌಲಭ್ಯ ಕಲ್ಪಿಸಲು ಅವಿರತ ಶ್ರಮಿಸಿದ್ದೇನೆ’ ಎಂದರು.

**

‘ಅಪ್ಪನ ಮೌಲ್ಯಗಳು ಬದುಕಿಗೆ ದಾರಿದೀಪ’

‘ಜೀವನದ ಕೊನೆಯವರೆಗೆ ಸರ್ಕಾರಿ ಬಸ್‌ಗಳಲ್ಲಿಯೇ ಓಡಾಡುತ್ತಿದ್ದ ಅಪ್ಪ ಬಿ.ಜಿ.ಬಣಕಾರ ಅವರ ಮೌಲ್ಯಗಳು ನನ್ನ ರಾಜಕೀಯ ಬದುಕಿನಲ್ಲಿ ದಾರಿದೀಪ. ರಾಜಕಾರಣಿಗಳ ಬದುಕು ಪಾರದರ್ಶಕವಾಗಿರಬೇಕು. ನಮ್ಮನ್ನು ಆಯ್ಕೆ ಮಾಡಿರುವ ಜನತೆಗೆ ಹೆದರಬೇಕೆಂದು ಅವರು ಪದೇ ಪದೇ ಹೇಳುತ್ತಿದ್ದರು. ಅದರಂತೆ ನಾನೂ ಜನತೆಗೆ ಹೆದರುತ್ತಿದ್ದು, ಅದಕ್ಕಿಂತ ಹೆಚ್ಚು ಅಪ್ಪಾಜಿಗೆ ಹೆದರುತ್ತಿದ್ದೆ’ ಎಂದು ಶಾಸಕ ಯು.ಬಿ.ಬಣಕಾರ ಭಾವುಕರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.