ADVERTISEMENT

ತನಿಖೆಗೆ ನಗರಸಭೆ ಬಿಜೆಪಿ ಸದಸ್ಯರ ಒತ್ತಾಯ

ಶೇ 22ರ ಅನುದಾನ ನೀಡುವಲ್ಲಿ ಅಧಿಕಾರಿಗಳ ಅವ್ಯವಹಾರ ಆರೋಪ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 8:33 IST
Last Updated 7 ಡಿಸೆಂಬರ್ 2013, 8:33 IST

ಹಾವೇರಿ: ‘ನಗರಸಭೆಯ ಶೇ 22 ರ ಅನುದಾನದಡಿ ಮನೆ ನಿರ್ಮಾಣಕ್ಕೆ ಮಂಜೂರಿಯಾದ ಹಣಕ್ಕಿಂತ ಹೆಚ್ಚಿನ ಹಣವನ್ನು ಫಲಾನುಭವಿಗಳಿಗೆ ನೀಡುವ ಮೂಲಕ ಅಧಿಕಾರಿಗಳು ಅವ್ಯವಹಾರ ನಡೆಸಿದ್ದಾರೆ’ ಎಂದು ನಗರಸಭೆಯ ಬಿಜೆಪಿ ಸದಸ್ಯರು ಆರೋಪಿಸಿದ್ದಾರೆ.

ನಗರಸಭೆ ಸದಸ್ಯ ಸುರೇಶ ದೊಡ್ಡಮನಿ ನೇತೃತ್ವದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ನಗರಸಭೆ ಬಿಜೆಪಿ ಸದಸ್ಯರು, ಪ್ರಸಕ್ತ ಸಾಲಿನ ಶೇ 22 ರ ಅನುದಾನದಲ್ಲಿ ಮನೆ ನಿರ್ಮಿಸಿಕೊಳ್ಳಲು 9 ಜನ ಫಲಾನುಭವಿಗಳಿಗೆ ತಲಾ ₨ 70 ಸಾವಿರ ಮಂಜೂರಿ ಮಾಡಲಾಗಿದೆ. ಆದರೆ, ಅಧಿಕಾರಿಯೊಬ್ಬರು ಅಧ್ಯಕ್ಷರ, ಆಯುಕ್ತರ ಹಾಗೂ ಸದಸ್ಯರ ಗಮನಕ್ಕೆ ತಾರದೇ ಇಬ್ಬರು ಫಲಾನುಭವಿಗಳಿಗೆ ₨ 20 ಸಾವಿರ  ಹೆಚ್ಚುವರಿಯಾಗಿ ಸಂದಾಯ ಮಾಡಿದ್ದಾರೆ ಎಂದು ಆಪಾದಿಸಿದರು.

ಈ ಯೋಜನೆಯಲ್ಲಿ ಆಯ್ಕೆಯಾದ ಫಕ್ಕಿರಪ್ಪ ತಳವಾರ ಹಾಗೂ ಪುಟ್ಟಪ್ಪ ತಳವಾರ ಎಂಬ ಫಲಾನುಭವಿಗಳಿಗೆ ಅಧಿಕಾರಿಗಳು ತಲಾ ₨ 20 ಸಾವಿರದಂತೆ ಹೆಚ್ಚುವರಿ ಹಣ ನೀಡಿದ್ದಾರೆ. ಯೋಜನೆಯಲ್ಲಿ ಇದ್ದಕ್ಕಿಂತ ಹೆಚ್ಚಿನ ಹಣವನ್ನು ಯಾವ ಕಾರಣಕ್ಕಾಗಿ ನೀಡಲಾಗಿದೆ ಎಂಬುದು ಮಾತ್ರ ಗೊತ್ತಾಗಿಲ್ಲ.

ಈ ಯೋಜನೆಯಲ್ಲಿ ಫಲಾನುಭವಿಗಳಿಗೆ ಮಂಜೂರಾದ ಹಾಗೂ ನೀಡಿರುವ ಹಣದ ಬಗ್ಗೆ ಮಾಹಿತಿ ನೀಡುವಂತೆ ಕೇಳಿದರೂ, ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ. ಇದೆಲ್ಲವನ್ನು ಗಮನಿಸಿದರೆ, ಅಧಿಕಾರಿಗಳು ಅವ್ಯವಹಾರ ನಡೆಸಿರುವುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ಕೂಡಲೆ ಜಿಲ್ಲಾಧಿಕಾರಿಗಳು ನಗರಸಭೆಗೆ ಭೇಟಿ ನೀಡಿ ಈ ಕುರಿತು ಖುದ್ದು ಪರಿಶೀಲನೆ ನಡೆಸಬೇಕಲ್ಲದೇ, ಅವ್ಯವಹಾರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಗರೋತ್ಥಾನ ನೆನಗುದಿಗೆ: ನಗರದಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ನಡೆತಯುತ್ತಿರುವ ಒಳಚರಂಡಿ ಕಾಮಗಾರಿ ಹಾದಿಯಲ್ಲಿಯೇ ನಗರೋತ್ಥಾನ ಯೋಜನೆ ಸಾಗುತ್ತಿದೆ ಎಂದು ನಗರಸಭೆ ಬಿಜೆಪಿ ಸದಸ್ಯರು ಆರೋಪಿಸಿದರು.

ಒಳಚರಂಡಿ ಕಾಮಗಾರಿ ನಿಂತಲ್ಲೆ ನಿಂತು ಹಲವು ತಿಂಗಳು ಗತಿಸಿವೆ. ಈವರೆಗೆ ಶಾಸಕರಾಗಲಿ, ನಗರಸಭೆ ಆಡಳಿತ ಚುಕ್ಕಾಣಿ ಹಿಡಿದ ಕಾಂಗ್ರೆಸ್‌ ಸದಸ್ಯರಾಗಲಿ ಗಮನ ಹರಿಸಿಲ್ಲ. ಈಗ ಆ ಯೋಜನೆ ಪೂರ್ಣಗೊಳ್ಳುತ್ತದೆಯೋ ಇಲ್ಲವೋ ಎಂಬ ಅನುಮಾನ ಮೂಡಿದೆ. ಅದೇ ಹಾದಿಯಲ್ಲಿ ನಗರೋತ್ಥಾನ ಯೋಜನೆಯೂ ಸಾಗಿದೆ. ಈಗಾಗಲೇ ಯೋಜನೆಯ ಟೆಂಡರ್‌ ನೀಡಿ ನಾಲ್ಕೈದು ತಿಂಗಳು ಗತಿಸುತ್ತಾ ಬಂದಿದೆ. ಆದರೆ, ಗುತ್ತಿಗೆಗಾರರು ಯಾವುದೇ ಕಾಮಗಾರಿ ಆರಂಭ ಮಾಡಿಲ್ಲ ಎಂದು ದೂರಿದರು.

ಯೋಜನೆಯ ₨30 ಕೋಟಿ ಅನುದಾನದಲ್ಲಿ ₨ 15–20 ಕೋಟಿಗಳಷ್ಟು ಅನುದಾನವನ್ನು  ನಗರದ ರಸ್ತೆಗಳ ಡಾಂಬರೀಕರಣ ನೀಡಲಾಗಿದೆ. ಆದರೆ, ಗುತ್ತಿಗೆದಾರರು ನಗರದಲ್ಲಿ ಡಾಂಬರ್‌ ಪ್ಲಾಂಟ್‌ ಹಾಕಿಲ್ಲ. ಯಾವುದೇ ಕಾಮಗಾರಿ ಆರಂಭಿಸಿದಲ್ಲ. ಈಗಾಗಲೇ ಚಳಿಗಾಲ ಮುಗಿಯುವ ಹಂತಕ್ಕೆ ಬಂದಿದೆ. ಯಾವುದಾದೂ ಅಡ್ಡ ಮಳೆ ಬಂದರೆ, ಆ ನೆಪದಲ್ಲಿ ಕಾಮಗಾರಿ ಆರಂಭ ಮತ್ತಷ್ಟು ಮುಂದಕ್ಕೆ ಹೋಗುವ ಸಾಧ್ಯತೆಯಿದೆ. ಕೂಡಲೇ ಜಿಲ್ಲಾಧಿಕಾರಿಗಳು ಈ ಬಗ್ಗೆಯೂ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ನೀಡಲು ತಂದ ಹೊಲಿಗೆ ಯಂತ್ರಗಳು ನಗರಸಭೆಯಿಂದ ಕಳ್ಳತನವಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಲ್ಲಿ, ಆಯುಕ್ತರಲ್ಲಿ ಮಾಹಿತಿ ಇಲ್ಲದಾಗಿದೆ. ಈ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ತನಿಖೆಗೆ ಆದೇಶಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.

ಒಂದು ವಾರದಲ್ಲಿ ತಮ್ಮ ಈ ಎಲ್ಲ ಬೇಡಿಕೆಗಳು ಈಡೇರದಿದ್ದರೆ, ಬಿಜೆಪಿ ಪಕ್ಷದ ವತಿಯಿಂದ ನಗರಸಭೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಸದಸ್ಯರಾದ ಹನುಮಂತನಾಯ್ಕ್ ಬದಾಮಿ, ನಿರಂಜನ ಹೆರೂರ, ರೇಣುಕವ್ವ ಪೂಜಾರ, ಗೀತಾ ಜೂಜಗಾಂವ, ಕರಬಸಪ್ಪ ಹಳದೂರ ಅಲ್ಲದೇ ಅನೇಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.