ADVERTISEMENT

ಪಕ್ಷೇತರರಾಗಿ ಸ್ಪರ್ಧಿಸುವಂತೆ ಅಭಿಮಾನಿಗಳ ಆಗ್ರಹ

ಶಿವಣ್ಣನವರಿಗೆ ಟಿಕೆಟ್ ನೀಡದಿದ್ದಕ್ಕೆ ಕಾರ್ಯಕರ್ತರ ಆಕ್ರೋಶ; ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 8:42 IST
Last Updated 17 ಏಪ್ರಿಲ್ 2018, 8:42 IST

ಬ್ಯಾಡಗಿ: ವಿಧಾನಸಭಾ ಚುನಾವಣೆಯ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಶಾಸಕ ಬಸವರಾಜ ಶಿವಣ್ಣನವರ ಹೆಸರು ಇಲ್ಲದಿರುವುದರಿಂದ ಅಸಮಾಧಾನಗೊಂಡ ಅವರ ಅಭಿಮಾನಿಗಳು, ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಹಳೇ ಪುರಸಭೆ ಎದುರು ಸೇರಿದ ನೂರಾರು ಕಾರ್ಯಕರ್ತರು, ಬಸವರಾಜ ಶಿವಣ್ಣನವರ ಅವರಿಗೆ ಕಾಂಗ್ರೆಸ್‌ ಟಿಕೆಟ್ ನಿರಾಕರಿಸಿರುವ ಹಿಂದೆ ಷಡ್ಯಂತ್ರ ಅಡಗಿದೆ. ಯಾವುದೇ ಕಾರಣಕ್ಕೂ ಅವರು ಚುನಾವಣೆಯಿಂದ ಹಿಂದೆ ಸರಿಯುವ ಮಾತಿಲ್ಲ. ಚುನಾವಣೆಗೆ ನಿಲ್ಲಲೇಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಎರಡು ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿದಾಗ ಬಸವರಾಜ ಶಿವಣ್ಣನವರನ್ನು ಗೆಲ್ಲಿಸಿ, ಅವರಿಗೆ ಟಿಕೆಟ್‌ ನೀಡುವುದು ಗ್ಯಾರಂಟಿ ಎಂದು ಸಾರ್ವಜನಿಕರ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಆದರೆ, ಏಕಾಏಕಿ ಅವರ ಹೆಸರು ಪಟ್ಟಿಯಿಂದ ಕಾಣೆಯಾಗಿರುವುದು ಸಾವಿರಾರು ಕಾರ್ಯಕರ್ತರನ್ನು ಅಸಮಾಧಾನಗೊಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಕ್ಷೇತ್ರದ ಅಭಿವೃದ್ಧಿಗಾಗಿ ಶಿವಣ್ಣನವರ ಹಗಲಿರುಳು ಕೆಲಸ ಮಾಡಿದ್ದಾರೆ. ಅಂತಹ ಜನನಾಯಕನಿಗೆ ಟಿಕೆಟ್ ನೀಡದಿದ್ದರೆ, ಪಕ್ಷಕ್ಕೆ ಮಾಡುವ ದ್ರೋಹವಾಗುತ್ತದೆ ಎಂದು ಅಸಮಾಧಾನ ಹೊರ ಹಾಕಿದರು.

ಕಾಂಗ್ರೆಸ್‌ ಪಕ್ಷದ ತಾಲ್ಲೂಕು ಘಟಕದ ಕಾರ್ಯದರ್ಶಿ ರಮೇಶ ಸುತ್ತಕೋಟಿ ಮಾತನಾಡಿ, ಇದೇ 23ರಂದು ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಶಾಸಕ ಬಸವರಾಜ ಶಿವಣ್ಣನವರ ನಾಮಪತ್ರ ಸಲ್ಲಿಸಲಿದ್ದಾರೆ. ಈ ನಿರ್ಧಾರದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಮಾತಿಲ್ಲ ಎಂದು ಸ್ಪಷ್ಟಪಡಿಸಿದರು.

ಬಳಿಕ ಪ್ರಮುಖ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ನಿವಾಸದಲ್ಲಿ ಸಭೆ: ಪ್ರತಿಭಟನೆ ಬಳಿಕ, ಪಟ್ಟಣದಲ್ಲಿರುವ ಶಾಸಕರ ನಿವಾಸದಲ್ಲಿ ಕಾರ್ಯಕರ್ತರ ಸಭೆ ನಡೆಯಿತು. ಅಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಆಗ್ರಹಿಸಲಾಯಿತು. ಕಾರ್ಯಕರ್ತರ ಒತ್ತಾಯಕ್ಕೆ ಮಣಿದ ಶಿವಣ್ಣನವರ ಏಪ್ರಿಲ್ 23ರಂದು ನಾಮಪತ್ರ ಸಲ್ಲಿಸುವುದಾಗಿ ಹೇಳಿದರು.

ಕಾಂಗ್ರೆಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಬೀರಪ್ಪ ಬಣಕಾರ, ಯುವ ಘಟಕದ ಅಧ್ಯಕ್ಷ ಡಿ.ಎಚ್‌.ಬುಡ್ಡಗೌಡ್ರ, ಮುಖಂಡರಾದ ಶಂಕರಗೌಡ ಪಾಟೀಲ, ಖಾದರಸಾಬ ದೊಡ್ಡಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.